

ಮಂಡ್ಯ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬೇರೆಯವರ ಭವಿಷ್ಯ ಹೇಳುವುದು ಇರಲಿ. ಮೊದಲು ಅವರ ಭವಿಷ್ಯ ನೋಡಿಕೊಳ್ಳಲಿ ಸಾಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.
ಮೇಲುಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2028ರವರೆಗೆ ಕಾಂಗ್ರೆಸ್ ಸರ್ಕಾರ ಇರಲ್ಲವೆಂದು ಎಚ್‌ಡಿಕೆ ಹೇಳಿದ್ದಾರೆ. ಕುಮಾರಸ್ವಾಮಿ ಭವಿಷ್ಯ ಹೇಳುತ್ತಿದ್ದಾರೆ. ಒಳ್ಳೆಯ ಭವಿಷ್ಯ ಹೇಳುವ ಟ್ರೈನಿಂಗ್ ತೆಗೆದುಕೊಂಡು ಬಂದಿರಬೇಕು ಎಂದು ವ್ಯಂಗ್ಯವಾಡಿದರು.
ಕುಮಾರಸ್ವಾಮಿ ಯಾವಾಗಲೂ ಅಧಿಕಾರವನ್ನು ಐದು ವರ್ಷ ಪೂರ್ಣ ಮಾಡಿಲ್ಲ. ಅದನ್ನೇ ಅವರು ಬೇರೆ ಅವರಿಗೆ ಹೋಲಿಕೆ ಮಾಡಿಕೊಳ್ಳುತ್ತಾರೆ. ಅವರಿಗೆ ಅಧಿಕಾರ ಕೊಟ್ಟರೂ ಸಂಪೂರ್ಣ ಐದು ವರ್ಷ ಮಾಡಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರವನ್ನು ಅಸ್ಥಿರತೆಯ ಆಲೋಚನೆ ಮಾಡುವುದೇ ಪಾಪ. ಎಲ್ಲವೂ ನಮ್ಮ ಕೈಯಲ್ಲಿರಲ್ಲ, ಆಕಸ್ಮಿಕ ಎಲ್ಲವೂ. ಆದ್ದರಿಂದ ಪದೇ ಪದೇ ಅಸ್ಥಿರತೆ ಬಗ್ಗೆ ಮಾತಾಡುವುದು ಸೂಕ್ತವಲ್ಲ ಎಂದರು.
ಸಿಎಂ ಬದಲಾವಣೆ ಚರ್ಚೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಯಾರು ಏನು ಮಾತನಾಡಿದರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಸಿಎಂ, ಡಿಸಿಎಂ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ಗಾಂಧಿ, ವೇಣುಗೋಪಾಲ್, ಸುರ್ಜೇವಾಲ ತೀರ್ಮಾನವೇ ಅಂತಿಮ. ನಮ್ಮ ಸಿಎಂ, ಡಿಸಿಎಂ ಸೌಹಾರ್ದತೆಯಿಂದ ಕೆಲಸ ಮಾಡುತ್ತಿದ್ದಾರೆ. ಕೆಲವರು ಅವರವರ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ. ಯಾರು ಏನೇ ಹೇಳಿದರೂ ಅಂತಿಮ ನಿರ್ಧಾರ ಹೈಕಮಾಂಡ್ ಮಾಡಲಿದೆ ಎಂದು ಹೇಳಿದರು.
ನಾಲೆಗೆ ಕಾರು ಪಲ್ಟಿಯಾಗಿ ಮೂವರು ಸಾವನ್ನಪ್ಪಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸಿಆರ್‌ಎಸ್, ಮೃತರಿಗೆ ಶಾಸಕ ರವಿಕುಮಾರ್ ಗಣಿಗ ವೈಯಕ್ತಿಕವಾಗಿ ಪರಿಹಾರ ಕೊಟ್ಟಿದ್ದಾರೆ. ಹೆಚ್ಚಿನ ಪರಿಹಾರ ಕೊಡಿಸಲು ಸಿಎಂ ಬಳಿ ಮಾತನಾಡಿ ಪ್ರಯತ್ನ ಮಾಡುತ್ತೇನೆ. ಯುವಕರು ಸ್ವಲ್ಪ ಎಚ್ಚರಿಕೆಯಿಂದ ಪ್ರವಾಸ ಮಾಡಬೇಕು. ಕೆಟ್ಟಿರುವ ರಸ್ತೆಗಳಲ್ಲೂ ಅಪಘಾತ ಆಗುತ್ತವೆ. ಅದೇ ರೀತಿ ಚೆನ್ನಾಗಿರುವ ರಸ್ತೆಗಳಲ್ಲಿಯೂ ಅಪಘಾತವಾಗಲಿದೆ. ಪ್ರಯಾಣದ ವೇಳೆ ಎಚ್ಚರಿಕೆಯಿಂದ ಮಾಡಬೇಕು. ಪ್ರಾಣ ಹಾನಿಯಾದಾಗ ಎಷ್ಟೇ ಪರಿಹಾರ ಕೊಟ್ಟರೂ ಆ ಕುಟುಂಬಕ್ಕೆ ನೆಮ್ಮದಿ ಸಿಗಲು ಸಾಧ್ಯವಿಲ್ಲ. ಎಲ್ಲ ಯುವಕರೂ ಎಚ್ಚರಿಕೆಯಿಂದ ಓಡಾಡುವಂತೆ ಮನವಿ ಮಾಡುತ್ತೇನೆ ಎಂದರು.
ನಾಲೆಗೆ ತಡೆಗೋಡೆ ನಿರ್ಮಾಣ ಮಾಡದ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಯೋಜನೆ ಸಿದ್ದವಾಗಿದೆ. ಆ ಜಾಗದಲ್ಲಿ ರಸ್ತೆ ಹಾಗೂ ತಡೆಗೋಡೆ ನಿರ್ಮಾಣ ಮಾಡಲಾಗುತ್ತದೆ. ತಕ್ಷಣ ಮಾಡುವಂತೆ ಹೇಳಲಾಗುವುದು. ಉಳಿದಂತೆ ಅಲ್ಲಲ್ಲೇ ತಡೆಗೋಡೆ ನಿರ್ಮಿಸಲಾಗುವುದು. ಪಾಂಡವಪುರದ ಬಳಿ ಅಪಘಾತ ಆಗಿತ್ತು. ಅಲ್ಲಿ ತಡೆಗೋಡೆ ನಿರ್ಮಾಣ ಮಾಡಿದ್ದಾರೆ. ಅದೇ ರೀತಿ ಎಲ್ಲೆಲ್ಲಿ ಮುಖ್ಯವಾಗಿ ಆಗಬೇಕು, ಅಲ್ಲಿ ಮಾಡುವಂತೆ ಹೇಳಿದ್ದೇನೆ. ಈ ತಿಂಗಳೊಳಗೆ ಮಂಜೂರಾತಿ ಕೊಡಲು ಡಿಸಿಗೆ ತಿಳಿಸಿದ್ದೇನೆ ಎಂದು ಮಾಹಿತಿ ನೀಡಿದರು.