ಚನ್ನರಾಯಪಟ್ಟಣ : ಸಂಸ್ಕಾರಭರಿತ ಶಿಕ್ಷಣದಿಂದ ಮಾತ್ರ ವಿದ್ಯಾರ್ಥಿಗಳ ಸಮಗ್ರ ವಿಕಸನ ಸಾಧ್ಯ ಎಂದು ಟೈಮ್ಸ್ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ.ಗಂಗಾಧರ ಹೇಳಿದರು. ಪಟ್ಟಣದ ನೌಕರರ ಭವನದಲ್ಲಿ ಟೈಮ್ಸ್ ವಿದ್ಯಾಸಂಸ್ಥೆ ಶನಿವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇಶ ಸಮೃದ್ಧವಾಗಬೇಕಾದರೆ ತರಗತಿಯಲ್ಲಿ ಕಲಿಯುವ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಬಲಿಷ್ಠರಾಗಬೇಕು. ಮಕ್ಕಳು ಸೂಕ್ತವಾಗಿ ವಿದ್ಯಾರ್ಜನೆ ಮಾಡುವ ಮೂಲಕ ದೇಶದ ನಿಜವಾದ ಆಸ್ತಿಯಾಗಬೇಕು. ಶಿಕ್ಷಕರು ಮತ್ತು ಪಾಲಕರು ಈ ನಿಟ್ಟಿನಲ್ಲಿ ಸಹಕಾರ ನೀಡಿದಾಗ ಮಾತ್ರ ಮಕ್ಕಳಲ್ಲಿ ಸಮಗ್ರ ವ್ಯಕ್ತಿತ್ವದ ಬೆಳವಣಿಗೆ ಸಾಧ್ಯ ಎಂದು ಅವರು ಹೇಳಿದರು. ಸಂಸ್ಕಾರ ಇಲ್ಲದ ವ್ಯಕ್ತಿ ಎಷ್ಟೇ ಉನ್ನತ ಸ್ಥಾನದಲ್ಲಿ ಇದ್ದರೂ ಆತನಿಗೆ ಪರಿಪೂರ್ಣ ಯಶಸ್ಸು ದೊರಕಲಾರದು.ವಿದ್ಯಾರ್ಥಿಗಳ ಭವಿಷ್ಯ ಅವರ ಕೈಯಲ್ಲೇ ಇದೆ. ಅಧ್ಯಯನ, ಅಭ್ಯಾಸಗಳು ಅವರನ್ನು ಬುದ್ಧಿವಂತರನ್ನಾಗಿ ಮಾಡುತ್ತದೆ. ಇದರೊಂದಿಗೆ ಮಕ್ಕಳಲ್ಲಿ ಸಮಾಜ ಪ್ರೇಮ. ದೇಶಪ್ರೇಮ ಗಟ್ಟಿಯಾಗಬೇಕು. ಇದರಿಂದ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದರು. ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದರೆ ಮುಂದಿನ ತರಗತಿ, ಶಿಕ್ಷಣಕ್ಕೆ ನೆರವಾಗುತ್ತದೆ. ಇದರೊಂದಿಗೆ ಮೌಲ್ಯಗಳನ್ನೂ ರೂಢಿಸಿಕೊಂಡರೆ ಬದುಕಿನ ಪರೀಕ್ಷೆಯಲ್ಲಿ ಮಹೋನ್ನತ ಸಾಧನೆಯಾಗುತ್ತದೆ. ಎಳವೆಯಲ್ಲೇ ಇವೆಲ್ಲವೂ ವಿದ್ಯಾರ್ಥಿಗೆ ಮನದಟ್ಟಾದರೆ ಬದುಕಿನ ಗುರಿ ಮತ್ತು ಉದ್ದೇಶಗಳು ಮಾದರಿಯಾಗುತ್ತವೆ ಎಂದು ಬಿ.ಕೆ.ಗಂಗಾಧರ ಹೇಳಿದರು. ತಾಯಿ, ತಂದೆ ಮತ್ತು ಗುರು ಹಿರಿಯರು ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ಬೆಳೆಸಿದ್ದೇ ಆದಲ್ಲಿ ರಾಮಕೃಷ್ಣ ಪರಮಹಂಸ, ಶಾರದಾ ದೇವಿ, ಸ್ವಾಮಿ ವಿವೇಕಾನಂದ, ಅಬ್ದುಲ್ ಕಲಾಂರಂಥ ರಾಷ್ಟ್ರಮಾನ್ಯರು ಮತ್ತೆ ಹುಟ್ಟಿಬರುತ್ತಾರೆ. ಈ ನಿಟ್ಟಿನಲ್ಲಿ ಸಂಸ್ಕಾರವಂತ ಶಿಕ್ಷಣ ಬಹುದೊಡ್ಡ ಶಕ್ತಿ ತುಂಬಲಿದೆ ಎಂದರು. ಅತಿ ಅಮೂಲ್ಯ ಘಟ್ಟ: ಸಂಸ್ಥೆಯ ಅಧ್ಯಕ್ಷ ಸುರೇಂದ್ರ ಕುಮಾರ್ ಮಾತನಾಡಿ ವಿದ್ಯಾರ್ಥಿ ಜೀವನ ಎಂಬುವುದು ಜೀವನದಲ್ಲಿ ಅತಿ ಅಮೂಲ್ಯವಾದ ಘಟ್ಟ. ಪಾಲಕರು ಮತ್ತು ಶಿಕ್ಷಕರು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಲು ನಿಸ್ವಾರ್ಥ ಸೇವೆ ಮಾಡಬೇಕು. ಮಕ್ಕಳೂ ಉತ್ತಮ ಸಂಕಲ್ಪ ಮಾಡಿ ಸಾಧನೆ ತೋರಬೇಕು. ಸಮಾಜಕ್ಕೆ ಉಪಕಾರಿಗಳಾಗಿ ಬದುಕಬೇಕು ಎಂದರು. ಜಿಪಂ ಮಾಜಿ ಸದಸ್ಯೆ ಕುಸುಮಾ ಬಾಲಕೃಷ್ಣ, ಹುಣಸೂರು ಕಾಲೇಜು ಪ್ರಾಂಶುಪಾಲ ಹನುಮಂತ ರಾವ್ ಮಾತನಾಡಿದರು. 2023-24 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರಾಂಶುಪಾಲ ಎಚ್.ಎಂ. ಶ್ರೀಕಂಠ, ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು.