

ಚನ್ನರಾಯಪಟ್ಟಣ: ಶಿವಾಜಿ ಮಹಾರಾಜರು ಹಿಂದೂ ಧರ್ಮದ ಪ್ರಬಲ ಪ್ರತಿಪಾದಕರಾಗಿದ್ದರೂ ಬೇರೆ ಧರ್ಮಗಳ ಮೇಲೂ ಅಪಾರ ಗೌರವ ಇತ್ತು. ಇದು ಅವರ ಧರ್ಮಸಹಿಷ್ಣುಗೆ ಸಾಕ್ಷಿಯಾಗಿದೆ. ಅವರ ಆಡಳಿತ ವೈಖರಿ, ಭಾಷೆ ಮತ್ತು ಸಂಸ್ಕೃತಿ ಬಗ್ಗೆಗಿನ ಚಿಂತನೆ ಎಲ್ಲರಿಗೂ ಮಾದರಿಯಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ತಾಲೂಕು ಆಡಳಿತ, ಭಾವಸಾರ ಕ್ಷತ್ರಿಯ ಸಮಾಜ ಮತ್ತು ಮರಾಠ ಕ್ಷತ್ರಿಯ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಸರ್ಕಾರಿ ಅಧಿಕಾರಿಗಳಿಗೂ ಮೂಲ ಸೌಕರ್ಯ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ, ರೈತರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ, ಗ್ರಾಮ ಆಡಳಿತ ಅಧಿಕಾರಿಗಳ ಹಲವು ಬೇಡಿಕೆಗಳಿಗೆ ಕೂಡಲೇ ಸಚಿವರು ಸ್ಪಂದಿಸಿ ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಭಾವಸಾರ ಕ್ಷತ್ರಿಯ ಸಮಾಜದ ಮುಖಂಡ ಡಾ.ಎ.ಜಿ.ರಾಜು ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆ ಹಾಗೂ ಸಾಧನೆ ಕುರಿತು ಸವಿರವಾಗಿ ತಿಳಿಸಿಕೊಟ್ಟರು.
ತಹಸೀಲ್ದಾರ್ ವಿ.ಎಸ್.ನವೀನ್ ಕುಮಾರ್, ಚನ್ನರಾಯಪಟ್ಟಣ ಉಪ ವಿಭಾಗ ಆರಕ್ಷಕ ಉಪ ಅಧೀಕ್ಷಕ ಎನ್.ಕುಮಾರ್, ಪುರಸಭಾ ಅಧ್ಯಕ್ಷ ಸಿಎಂ ಮೋಹನ್, ಮುಖ್ಯಾಧಿಕಾರಿ ಆರ್.ಯತೀಶ್ ಕುಮಾರ್ ಭಾಗವಹಿಸಿದ್ದರು.