

ಚನ್ನಗಿರಿ: ವಿದ್ಯಾರ್ಥಿಗಳು ಕಲಿಕೆಯಲ್ಲಿ ಆಸಕ್ತಿ ತೋರುವ ಜತೆಗೆ ಸರಳವಾಗಿ ಓದು- ಬರಹ ಕಲಿಯಲು ಮತ್ತು ಕಲಿಕಾ ಮೌಲ್ಯದ ಫಲಿತಾಂಶ ಪಡೆಯಲು ಕಲಿಕಾ ಹಬ್ಬದಲ್ಲಿ ಭಾಗವಹಿಸುವುದು ಮುಖ್ಯವಾಗಿದೆ ಎಂದು ಸಿಆರ್ಪಿ ಶಂಕರ್ಗೌಡ ತಿಳಿಸಿದರು.
ತಾಲೂಕಿನ ಕಾಕನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾಕನೂರು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಲಿಕಾ ಹಬ್ಬವು ಸಾಕ್ಷರತೆ ಹಾಗೂ ಸಂಖ್ಯಾಜ್ಞಾನದ ಸೃಜನಾತ್ಮಕ ಚಟುವಟಿಕೆಗಳ ಪ್ರದರ್ಶನವಾಗಿದೆ. ಅಲ್ಲದೇ ಗಟ್ಟಿಓದು, ಕೈಬರಹ, ಸಂತೋಷದಾಯಕ ಗಣಿತ, ಕಥೆ ಹೇಳುವ, ರಸಪ್ರಶ್ನೆ, ಜ್ಞಾಪಕ ಶಕ್ತಿ ಹಾಗೂ ಕಥೆ ಕಟ್ಟುವ ಚಟುವಟಿಕೆಗಳ ಸ್ಪರ್ಧೆಗಳನ್ನು ಮಾಡಿ ಮಕ್ಕಳಿಗೆ ಬಹುಮಾನ ನೀಡಲಾಗುತ್ತದೆ ಎಂದರು.
ಇದು ಕೇವಲ ವಿದ್ಯಾರ್ಥಿಗಳಿಗೆ ಸೀಮಿತವಾಗದೆ ಪಾಲಕರು ಹಾಗೂ ಸಮುದಾಯದ ಸದಸ್ಯರು ಮಕ್ಕಳ ಕಲಿಕಾ ಹಬ್ಬದಲ್ಲಿ ಭಾಗವಹಿಸಿ ನಡೆಸುವ ಏಳು ಸ್ಪರ್ಧೆಗಳಲ್ಲಿ ಮಕ್ಕಳಿಗೆ ಪೋ›ತ್ಸಾಹಿಸಬೇಕು ಎಂದು ಹೇಳಿದರು.
ಬಿಆರ್ಪಿ ಲೋಕೇಶ್ವರಪ್ಪ ಮಾತನಾಡಿ, ಎಫ್ಎಲ್ಎನ್ ಕಲಿಕಾ ಹಬ್ಬವನ್ನು ಕ್ರಿಯಾತ್ಮಕ, ಸೃಜನಾತ್ಮಕ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಹಿನ್ನೆಲೆಯಲ್ಲಿ 1 ರಿಂದ 5ನೇ ತರಗತಿ ವಿದ್ಯಾರ್ಥಿಗಳ ಸಾಕ್ಷರತೆ ಬಲವರ್ಧನೆಗೆ ಇದು ಉತ್ತಮ ವೇದಿಕೆಯಾಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ರುದ್ರೇಶ್ ಉದ್ಘಾಟಿಸಿದರು. ಎಸ್ಡಿಎಂಸಿ ಅಧ್ಯಕ್ಷ ಕೆ.ಎಚ್. ಮಂಜಪ್ಪ, ಮುಖ್ಯಶಿಕ್ಷಕ ಎಸ್. ಸುರೇಶ್, ಪಿಡಿಒ ನೌಶದ್ಅಲಿ, ಮುಖ್ಯಶಿಕ್ಷಕ ಕುಮಾರಸ್ವಾಮಿ, ಸಿಆರ್ಪಿ ಕುಸುಮಾ, ರವಿಕುಮಾರ್, ಪಂಚಾಕ್ಷರಿ, ರಾಜಾ ನಾಯ್ಕ, ಅಣ್ಣೇಶ್ ಇದ್ದರು.