ನವೋದಯ ವಿದ್ಯಾಸಂಘದ ಅಧ್ಯಕ್ಷರಾಗಿ ಮಂಜುನಾಥ್ ಆಯ್ಕೆ

27 CRP-2A student
Published on

  ಚನ್ನರಾಯಪಟ್ಟಣ : ಚನ್ನರಾಯಪಟ್ಟಣ ನವೋದಯ ವಿದ್ಯಾಸಂಘದ ಅಧ್ಯಕ್ಷರಾಗಿ ಸಿ.ಜೆ.ಮಂಜುನಾಥ್ ಅವಿರೋಧ ಆಯ್ಕೆಯಾಗಿದ್ದಾರೆ. ಓ.ಆರ್. ರಂಗೇಗೌಡ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಆಡಳಿತ ಮಂಡಳಿ ನಿರ್ದೇಶಕರು ಒಮ್ಮತದ ಅಭ್ಯರ್ಥಿಯಾಗಿ ಮಂಜುನಾಥ್ ಅವರನ್ನು ಮಂಗಳವಾರ ಆಯ್ಕೆ ಮಾಡಿದ್ದಾರೆ.

ನಂತರ ಮಾತನಾಡಿದ ನೂತನ ಅಧ್ಯಕ್ಷ ಮಂಜುನಾಥ್, ನವೋದಯ ವಿದ್ಯಾ ಸಂಘವು ಮುಂಬರುವ ಶೈಕ್ಷಣಿಕ ವರ್ಷ ದಲ್ಲಿ ಇನ್ನೂ ಉತ್ತಮ ಫಲಿತಾಂಶ ನೀಡಲು ಆದ್ಯತೆ ನೀಡಲಿದೆ ಎಂದರು. ಕಡಿಮೆ ಅಂಕ ಗಳಿಸಿರುವ ಮಕ್ಕಳೇ ಹೆಚ್ಚಾಗಿ ನಮ್ಮ ಸಂಸ್ಥೆಯಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ಅವರನ್ನು ಉತ್ತಮ ದರ್ಜೆಯಲ್ಲಿ ತೇರ್ಗಡೆಯಾಗು ವಂತೆ ಮಾಡುವ ಹೊಣೆಗಾರಿಕೆ ಉಪನ್ಯಾಸಕರು ಮತ್ತು ಆಡಳಿತ ಮಂಡಳಿ ಮೇಲಿದೆ. ಈ ನಿಟ್ಟಿನಲ್ಲಿ ನಾವೂ ಹೆಚ್ಚಿನ ಕಾಳಜಿ ವಹಿಸುತ್ತೇವೆಂದರು. ಅಧ್ಯಕ್ಷ ಹುದ್ದೆ ಜವಾಬ್ದಾರಿ ಹೆಚ್ಚಾಗಿಯೇ ಇರುತ್ತದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶೇ.80ಕ್ಕಿಂತ ಹೆಚ್ಚು ಫಲಿತಾಂಶ ಸಾಧನೆ ಮಾಡದಿದ್ದರೆ ನನ್ನ ಸ್ಥಾನವನ್ನು ತ್ಯಜಿಸುವೆ ಎಂದವರು ಸ್ವಯಂ ಸವಾಲು ಸ್ವೀಕರಿಸಿದರು. ಶಾಲೆಯ ಪ್ರಗತಿಗೆ ಶಾಸಕರ ಸಹಕಾರದಲ್ಲಿ ಉತ್ತಮ ಕ್ರೀಡಾಂಗಣ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗುವುದು. ಶಾಲೆಗೆ ಮಕ್ಕಳ ದಾಖಲಾತಿ ಆರಂಭವಾಗಿದೆ. ದಾನಿಗಳ ಸಹಕಾರದಿಂದ ವಿದ್ಯಾ ಸಂಸ್ಥೆಯನ್ನು ಗುಣಾತ್ಮಕವಾಗಿ ಬೆಳೆಸಲಾಗುವುದು ಎಂದರು.

ಗರಿಷ್ಠ ನೆರವು ನೀಡುವೆ: ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಸಿ.ಎನ್. ಬಾಲಕೃಷ್ಣ ಸಂಸ್ಥೆಗೆ ತನ್ನದೇ ಆದ ಇತಿಹಾಸವಿದೆ. ಹಲವು ಕಾರಣಗಳಿಂದ ಫಲಿತಾಂಶ ಇಳಿಮುಖವಾಗಿದೆ. ಶೈಕ್ಷಣಿಕ ಅನುಭವ ಹೊಂದಿರುವವರು ಅಧ್ಯಕ್ಷರಾಗಿ ಆಯ್ಕೆಯಾಗಿರುವುದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದಾಗಿದೆ ಎಂದರು. ಇದೇ ಸಂಸ್ಥೆಯಲ್ಲಿ ನಾನೂ 2 ವರ್ಷ ಓದಿದ್ದೇನೆ. ಹಾಗಾಗಿ ಸಂಸ್ಥೆ ಪ್ರಗತಿಯ ಹೊಣೆಗಾರಿಕೆ ನನ್ನ ಮೇಲೂ ಇದೆ ಎಂದರು. ಹಾಗಾಗಿ ಗರಿಷ್ಠ ನೆರವು ನೀಡುತ್ತೇನೆ ಎಂದರು.

ಸಂಸ್ಥೆ ಕಾಯದರ್ಶಿ ಶರತ್, ಪುರಸಭಾ ಅಧ್ಯಕ್ಷ ಸಿ.ಎನ್. ಮೋಹನ್, ನಿಕಟ ಪೂರ್ವ ಅಧ್ಯಕ್ಷ ರಂಗೇಗೌಡ, ಗೌರವಾಧ್ಯಕ್ಷ ಡಾ. ಶೇಷಶಯನ, ಉಪಾಧ್ಯಕ್ಷ ಡಾ.ಎಸ್. ಪ್ರಮೋದ್, ಕಾರ್ಯದರ್ಶಿ ಕೆ.ಪಿ.ಶರತ್, ಸಹಕಾರ್ಯದರ್ಶಿ ಎಂ.ಎನ್. ಸಂತೋಷ, ಖಜಾಂಚಿ ಜಲೇಂದ್ರ ಕುಮಾರ್, ನಿರ್ದೇಶಕರಾದ ಕೆ.ಆರ್. ಶಿವಕುಮಾರ್, ಆನಂದ ಕಾಳೇನಹಳ್ಳಿ ಸಿ.ಟಿ.ಕುಮಾರಸ್ವಾಮಿ, ಗೋವಿಂದರಾಜು ಜೆ.ಕೆ.ರಾಘವೇಂದ್ರ, ಆದರ್ಶ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net