

ಚನ್ನರಾಯಪಟ್ಟಣ : ಹೊಸ ಬಡಾವಣೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು. ಪಟ್ಟಣದ 5ನೇ ವಾರ್ಡ್ ವೆಂಕಟೇಶ್ವರ ಲೇಔಟ್‌ನಲ್ಲಿ ಹೇಮಾವತಿ ನಾಲಾ ವಿಭಾಗದ ರಾಜ ಕಾಲುವೆಗೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಬುಧವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಕ್ಷೇತ್ರದಲ್ಲಿ ರಸ್ತೆ ನಿರ್ಮಾಣ, ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಒತ್ತು ನೀಡಲಾಗಿದೆ. ರಾಜ ಕಾಲುವೆಗೆ 2 ಕೋಟಿ ರೂ.ವೆಚ್ಚದಲ್ಲಿ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಮಾಡಲಾಗುವುದು. ಈ ಮೂಲಕ ಬಡಾವಣೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದರು. ಕಿರಿಯ ಇಂಜಿನಿಯರ್ ವಿಜಯ್, ಪುರಸಭಾಧ್ಯಕ್ಷ ಸಿ.ಎನ್. ಮೋಹನ್, ಉಪಾಧ್ಯಕ್ಷೆ ರಾಣಿಕೃಷ್ಣ, ಸದಸ್ಯರಾದ ಆದರ್ಶ, ರಾಮು, ಗಣೇಶ, ಮುಖಂಡರಾದ ರಾಜು, ಕೃಷ್ಣ, ಬೆಳಗುಲಿ ಪುಟ್ಟಸ್ವಾಮಿ ಇದ್ದರು.