

ವಿಜಯವಾಣಿ ವರದಿ ಪರಿಣಾಮ ಚನ್ನರಾಯಪಟ್ಟಣ : ಪಟ್ಟಣದ ಇತಿಹಾಸ ಪ್ರಸಿದ್ಧ ಅಮಾನಿಕೆರೆ ಆವರಣದಲ್ಲಿ ನಿಯಮ ಉಲ್ಲಂಘಿಸಿ ಸಾರ್ವಜನಿಕರು ಸುರಿದಿದ್ದ ತ್ಯಾಜ್ಯವನ್ನು ಶನಿವಾರ ತೆರವುಗೊಳಿಸಲಾಗಿದೆ.ಅಮಾನಿಕೆರೆ ಒಡಲಿಗೆ ಅಧಿಕ ತ್ಯಾಜ್ಯ- ಹೆಚ್ಚುತ್ತಿದೆ ಮಾಲಿನ್ಯ ಶೀರ್ಷಿಕೆಯಡಿ ನ. 1ರಂದು ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ವರದಿಯಿಂದ ಎಚ್ಚೆತ್ತುಕೊಂಡ ಪುರಸಭಾ ಅಧಿಕಾರಿಗಳು, ಪಟ್ಟಣದ ಅಮಾನಕೆರೆ ದಂಡೆಯಲ್ಲಿ ಸುರಿದಿರುವ ತ್ಯಾಜ್ಯವನ್ನು ಶನಿವಾರ ತೆರವುಗೊಳಿಸಿದರು. ಸುತ್ತಮುತ್ತಲ ಪ್ರದೇಶದಲ್ಲಿ ನಿರುಪಯುಕ್ತ ಮತ್ತು ಕಟ್ಟಡ ನಿರ್ಮಾಣ ತ್ಯಾಜ್ಯವನ್ನು ಹಾಕಿದವರನ್ನು ಗುರುತಿಸಿ ಕಾನೂನು ಕ್ರಮ ವಹಿಸಲು ನಿರ್ಧರಿಸಿದರು. ಸಾರ್ವಜನಿಕರು ನಿರುಪಯುಕ್ತ ತ್ಯಾಜ್ಯವನ್ನು ವಿಲೇವಾರಿ ಮಾಡುವ ಮುನ್ನ ಪುರಸಭಾ ಆಡಳಿತದ ಗಮನಕ್ಕೆ ತರಬೇಕು. ಇಲ್ಲದಿದ್ದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಜನತೆ ಹರ್ಷ: ಪುರಸಭಾ ಅಧಿಕಾರಿಗಳು ಅಮಾನಿ ಕೆರೆಯ ಮಾಲಿನ್ಯ ತಡೆಯಲು ಬಿಗಿ ಕ್ರಮಗಳನ್ನು ಕೈಗೊಂಡಿರುವುದಕ್ಕೆ ವಿವಿಧ ಸಂಘಟನೆಗಳ ಮುಖಂಡರು, ನಾಗರಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಚನ್ನರಾಯಪಟ್ಟಣದ ತ್ಯಾಜ್ಯವನ್ನು ಸಂಗ್ರಹಿಸಲು ಪುರಸಭೆಯಿಂದ ಎಲ್ಲಾ ವಾರ್ಡ್ ಗಳಿಗೂ ವಾಹನ ವ್ಯವಸ್ಥೆಯನ್ನು ಮಾಡಲಾಗಿದೆ. ಅಮಾನಿಕೆರೆಯ ಒಡಲಿಗೆ ನಿರುಪಯುಕ್ತ ತ್ಯಾಜ್ಯ ಸುರಿಯುತ್ತಿದ್ದು, ಕೆರೆಯ ಮೂಲ ಸ್ವರೂಪವೇ ಬದಲಾಗುತ್ತಿದೆ. ಭವಿಷ್ಯದಲ್ಲಿ ಕೆರೆ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ. ಸಾರ್ವಜನಿಕರು ತ್ಯಾಜ್ಯ ವಿಲೇವಾರಿ ಮಾಡುವವರ ಮಾಹಿತಿಯನ್ನು ನೀಡಿದರೆ ಪುರಸಭೆಯಿಂದ ಅವರಿಗೆ ಬಹುಮಾನ ನೀಡಲಾಗುವುದು. ಕಸ ಹಾಕುವರ ವಿರುದ್ಧ ನಿರ್ದಾ ಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಸಿ.ಎನ್.ಮೋಹನ್ ಪುರಸಭಾಧ್ಯಕ್ಷ, ಚನ್ನರಾಯಪಟ್ಟಣ.