ವಿನಯಕ್ಕೆ ಕಿರೀಟಪ್ರಾಯ ಪಂಚಾಕ್ಷರಿಸ್ವಾಮಿ

9 vikram 12
Published on

ಧಾರವಾಡ: ಪಂ. ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ ಅವರು ಸಂಗೀತ ಲೋಕಕ್ಕೆ ತಮ್ಮದೆ ಕೊಡುಗೆ ನೀಡಿದ್ದಾರೆ. ವಿದ್ಯೆಗೆ ವಿನಯವೇ ಭ ೂಷಣ ಎನ್ನುವಂತೆ ಮತ್ತಿಗಟ್ಟಿಯವರು ವಿನಯಕ್ಕೆ ಕೀರಿಟ ಪ್ರಾಯವಾಗಿದ್ದರು ಎಂದು ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಪಂಚಾಕ್ಷರಸ್ವಾಮಿ ಮತ್ತಿಗಟ್ಟಿ ಪುಣ್ಯಸ್ಮರಣೆ ನಿಮಿತ್ತ ನಗರದ ನಾದ ಲಹರಿ ಸಂಗೀತ ಸಭಾ ವತಿಯಿಂದ ಇಲ್ಲಿನ ಆಲೂರು ವೆಂಕಟರಾವ್ ಸಭಾಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಂಗೀತ ಸಮಾರೋಹ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿ, ಮತ್ತಿಗಟ್ಟಿ ಅವರು ವಿದ್ವತ್ ಪೂರ್ವ ಗಾಯನದಿಂದ ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದರು. ತಮ್ಮ ಜೀವಿತಾವಧಿಯ ಕಡೆ ಘಳಿಗೆಯಲ್ಲೂ ಸಂಗೀತ ಸೇವೆ ನೀಡಿದ ಅವರ ಕಲಾ ಸೇವೆ ಸ್ಮರಣೀಯ ಎಂದರು.

ಅತಿಥಿಯಾಗಿ ಪಾಲ್ಗೊಂಡಿದ್ದ ಗಾಯಕ ಪಂ. ಸೋಮನಾಥ ಮರಡೂರ ಮಾತನಾಡಿದರು. ಕರ್ನಾಟಕ ವಿಶ್ವ ವಿದ್ಯಾಲಯದ ಸಂಗೀತ ವಿಭಾಗದ ಮುಖ್ಯಸ್ಥ ಪಂ. ಮೃತ್ಯುಂಜಯ ಅಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಎಂ.ಎಸ್. ಫರಾಸ್, ಡಾ. ಉದಯಕುಮಾರ ದೇಸಾಯಿ, ಉಸ್ತಾದ್ ಶಫಿಖಾನ್, ಇತರರು ಇದ್ದರು. ವಿಜಯಕುಮಾರ ಸುತಾರ ಸ್ವಾಗತಿಸಿದರು. ಆರತಿ ದೇವಶಿಖಾಮಣಿ ನಿರೂಪಿಸಿದರು. ಮಧುರಾ ಹಿರೇಮಠ ವಂದಿಸಿದರು.

ನಂತರ ಗಾಯಕಿ ಐಶ್ವರ್ಯ ದೇಸಾಯಿ ಅವರು ಸಂಗೀತ ಪ್ರಸ್ತುತಪಡಿಸಿದರು. ಇವರಿಗೆ ಪಂ. ರವಿಕಿರಣ ನಾಕೋಡ ತಬಲಾ, ಸಂವಾದಿನಿಯಲ್ಲಿ ಸಾರಂಗ ಕುಲಕರ್ಣಿ ಸಾಥ್ ನೀಡಿದರು. ಬಳಿಕ ಉಸ್ತಾದ ಮೋಹಸಿನ್ ಖಾನ್ ಅವರಿಂದ ಸಿತಾರ ವಾದನ, ಡಾ. ಮೃತ್ಯುಂಜಯ ಅಗಡಿ ಗಾಯನ ಪ್ರಸ್ತುತಪಡಿಸಿದರು. ಇವರಿಗೆ ತಬಲಾದಲ್ಲಿ ನಿಸಾರ್ ಅಹಮ್ಮದ್, ಪಂ. ಕೇಶವ ಜೋಶಿ ಹಾಗೂ ಸಂವಾದಿನಿಯಲ್ಲಿ ಸಾರಂಗ ಕುಲಕರ್ಣಿ ಸಾಥ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net