ಮೈಸೂರಿಗೆ ಹರಿದುಬಂದ ಪ್ರವಾಸಿಗರ ದಂಡು

f9c59f30-3afd-48a7-a91d-c9b396692521
Published on

ಮೈಸೂರು: ನಾಡಹಬ್ಬ ದಸರಾ ಸಂದರ್ಭದಲ್ಲಿ ನಗರಕ್ಕೆ ಪ್ರವಾಸಿಗರ ದಂಡೇ ಹರಿದು ಬಂದಿದೆ. ದಸರಾ ಉದ್ಘಾಟನೆಗೊಂಡ ಅ.3 ರಿಂದ 10 ರವರೆಗೆ ಒಟ್ಟಾರೆಯಾಗಿ 1,12,070 ಜನ ಅರಮನೆ ವೀಕ್ಷಿಸಿದ್ದು, ಮೃಗಾಲಯಕ್ಕೆ ಅ.3ರಿಂದ 12 ರವರೆಗೆ 1,79,100 ಜನ ಭೇಟಿ ನೀಡಿದ್ದಾರೆ.
ದಸರಾ ಆರಂಭಕ್ಕೂ ಮುನ್ನ ದಿನ ಅ.1ರಂದೇ ಮೈಸೂರು ಅರಮನೆಗೆ ಒಟ್ಟು 10,126 ಮಂದಿ ಭೇಟಿ ನೀಡಿದ್ದರು. ಅ.2ರಂದು 13,260 ಪ್ರವಾಸಿಗರು ವೀಕ್ಷಿಸಿದ್ದಾರೆ. ದಸರಾ ಉದ್ಘಾಟನೆಯ ದಿನವಾದ ಅ.3ರಂದು ಅರಮನೆಯಲ್ಲಿ ಪೂಜಾ ಕಾರ್ಯ, ಖಾಸಗಿ ದರ್ಬಾರ್ ಕಾರಣ ಮಧ್ಯಾಹ್ನದವರೆಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿತ್ತು. ಇದರ ನಡುವೆಯೂ ಒಟ್ಟು 7,129 ಮಂದಿ ಅರಮನೆಗೆ ಭೇಟಿ ನೀಡಿದ್ದಾರೆ.
ಅ.4ರಂದು 12,247 ಜನ, 5 ರಂದು 18,307 ಜನ, 6ರಂದು 21,578 ಪ್ರವಾಸಿಗರು ಭೇಟಿ ನೀಡಿ ದಾಖಲೆ ನಿರ್ಮಿಸಿದ್ದಾರೆ. 7 ರಂದು 13,931 ಪ್ರವಾಸಿಗರು, 8ರಂದು 12,067 ಜನ, 9ರಂದು 13,568 ಮತ್ತು 10 ರಂದು 13,243 ಜನ ಭೇಟಿ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜು ರಜೆ ಇದ್ದು, ಸರ್ಕಾರಿ ರಜೆಯೂ ಸೇರಿದ್ದರಿಂದ ಒಟ್ಟಾರೆ 1,12,070 ಜನ ಭೇಟಿ ನೀಡಿದ್ದಾರೆ.
ಮೃಗಾಲಯಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ
ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೂ ಪ್ರವಾಸಿಗರು ದಂಡೇ ಹರಿದು ಬಂದಿದೆ. ಅ.3ರಂದು 11,525 ಜನ, 4ರಂದು 11,172, 5ರಂದು 17,810 ಜನ, ಅ.6ರಂದು 26,238 ಜನ, ಅ.7ರಂದು 14,877 ಜನ ಭೇಟಿ ನೀಡಿ ಪ್ರಾಣಿ, ಪಕ್ಷಿಗಳನ್ನು ವೀಕ್ಷಿಸಿದ್ದಾರೆ. ಅ.8ರಂದು 10,044, ಅ. 9ರಂದು 14,588, ಅ.10 ರಂದು 12,997, ಅ.11ರಂದು 23,382 ಹಾಗೂ ದಸರಾ ದಿನವಾದ ಅ. 12 ರಂದು 36,467 ಪ್ರವಾಸಿಗರು ಭೇಟಿ ನೀಡಿದ್ದರು. ಒಟ್ಟಾರೆ 1.79 ಲಕ್ಷ ಮಂದಿ ಭೇಟಿ ನೀಡಿದ್ದಾರೆ. ಆಯುಧಪೂಜೆ ದಿನ ಒಟ್ಟು 23,382 ಮಂದಿ ಮತ್ತು ವಿಜಯದಶಮಿಯ ದಿನ 36,467 ಜನ ಭೇಟಿ ನೀಡಿದ್ದರು.
ದಸರೆಯ ಹತ್ತು ದಿನಗಳಲ್ಲಿ ಪ್ರವಾಸಿಗರ ಭೇಟಿಯನ್ನು ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಕೊಂಚ ಕಡಿಮೆ ಪ್ರವಾಸಿಗರು ಭೇಟಿ ನೀಡಿದ್ದಾರೆ. ಕಳೆದ ವರ್ಷ 1,83,002 ಜನ ಭೇಟಿ ನೀಡಿದ್ದರೆ, ಈ ವರ್ಷ 1,79,714 ಪ್ರವಾಸಿಗರು ಭೇಟಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net