

ಮೈಸೂರು: ಹುಣಸೂರು ತಾಲೂಕಿನ ವೀರನಹೊಸಳ್ಳಿಯಿಂದ ಗಜಪಯಣದ ಮೂಲಕ ಆಗಮಿಸಿ ನಗರದ ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ಬೀಡುಬಿಟ್ಟಿರುವ ಅಂಬಾರಿ ಆನೆ ಅಭಿಮನ್ಯು ನೇತೃತ್ವದ ಗಜಪಡೆಯನ್ನು ನೋಡಲು ಪ್ರತಿನಿತ್ಯ ಜನಸ್ತೋಮವೇ ಹರಿದು ಬರುತ್ತಿದೆ.
ಆನೆಗಳನ್ನು ನೋಡಲು ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಸಾಕಷ್ಟು ಜನರು ಕುಟುಂಬ ಸಹಿತರಾಗಿ ಆಗಮಿಸಿ ಆನೆಗಳನ್ನು ನೋಡಿ ಸಂಭ್ರಮಿಸಿದರು. ಈ ಪೈಕಿ ಸಾಕಷ್ಟು ಮಕ್ಕಳು ಇದ್ದರು. ಮಕ್ಕಳಿಗೆ ಪಾಲಕರು ಆನೆಗಳನ್ನು ತೋರಿಸಿ ಆನೆಗಳ ಕುರಿತು ಮಾಹಿತಿ ನೀಡಿದರು.
ಅರಣ್ಯ ಭವನದ ವಿಶಾಲವಾದ ಪ್ರದೇಶದಲ್ಲಿ ಆನೆಗಳು ಬೀಡುಬಿಟ್ಟಿವೆ. ಸುರಕ್ಷತೆಯ ದೃಷ್ಟಿಯಿಂದ ಅವುಗಳ ಹತ್ತಿರ ಹೋಗಲು ಸಾರ್ವಜನಿಕರಿಗೆ ಅವಕಾಶ ನೀಡುತ್ತಿಲ್ಲ. ಆನೆಗಳನ್ನು ದೂರದಲ್ಲಿ ನಿಂತು ನೋಡಲು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಜನರು ದೂರದಿಂದಲೇ ಆನೆಗಳ ಫೋಟೋ, ವಿಡಿಯೋ ತೆಗೆಯುತ್ತಿದ್ದ ದೃಶ್ಯಗಳು ಕಂಡು ಬಂತು.
ಆನೆಗಳಿಗೆ ಮಾವುತರು ಹಾಗೂ ಕಾವಾಡಿಗರು ಸ್ನಾನ ಮಾಡಿಸುವುದು ಹಾಗೂ ಅವುಗಳಿಗೆ ಆಹಾರ ನೀಡುವುದನ್ನು ಜನರು ನೋಡಿ ಸಂಭ್ರಮಿಸಿದರು. ಅಲ್ಲದೆ, ಮಾವುತರು, ಕಾವಾಡಿಗರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಂದ ಆನೆಗಳ ಕುರಿತು ಮಾಹಿತಿ ಪಡೆದು ಕೊಂಡರು.