

ಮಾರುತಿ ಭಜಂತ್ರಿ, ಗುಡೂರ ಎಸ್‌ಸಿ:
ಆತ ಯಾರು ಅಂತಾನೇ ಗೊತ್ತಿಲ್ಲ. ಅಪ್ಪ, ಅಮ್ಮ, ಕುಟುಂಬದ ಬಗ್ಗೆ ಮಾಹಿತಿ ಇಲ್ಲ. ಮಕ್ಕಳು, ಮಹಿಳೆಯರು, ಹಿರಿಯರು, ಕಿರಿಯರು, ಶ್ರೀಮಂತರು, ಬಡವರ ಪ್ರೀತಿಗೂ ಪಾತ್ರ. ನೋಡುವುದಕ್ಕೆ ಹುಚ್ಚನಂತೆ ಇದ್ದರೂ ದೇಹಿ ಅಂತ ಬೇಡಿ ಬಂದವರಿಗೆ ಅಕ್ಷರಶಃ ದೇವರ ಸಮನಾಗಿದ್ದ ಅನಾಥ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಸಾವಿರಾರು ಜನ ಭಾಗಿಯಾಗಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಇದು ಗುಡೂರ ಎಸ್‌ಸಿ ಗ್ರಾಮದ ಮಲ್ಲಪ್ಪ(ಮಲ್ಲೇಶ)ನ ಕಥೆ. ಈ ಗ್ರಾಮದೊಂದಿಗೆ ನಾಲ್ಕು ದಶಕಗಳಿಂದ ನಂಟು ಹೊಂದಿದ್ದ ಮಲ್ಲಪ್ಪ ಹುಚ್ಚನಂತೆ ಅಲೆಯುತ್ತಿದ್ದರು. ಬುಧವಾರ ಬೆಳಗ್ಗೆ ಗ್ರಾಮದ ಹುಲ್ಲೇಶ್ವರ ದೇವಾಲಯದ ಹೊರಭಾಗದ ಕಟ್ಟೆ ಮೇಲೆ ಕುಳಿತಿದ್ದ ಮಲ್ಲಪ್ಪ ತೀವ್ರ ಹೊಟ್ಟೆ ನೋವಿನಿಂದ ಕೊನೆ ಉಸಿರೆಳೆದರು. ಹುಚ್ಚ ಮಲ್ಲಪ್ಪಣ್ಣ ಅಂತಲೇ ಪ್ರಸಿದ್ಧಿ ಪಡೆದಿದ್ದ ಅವರ ಸಾವಿನಿಂದ ಗ್ರಾಮದ ಪ್ರತಿಯೊಂದು ಮನೆಯಲ್ಲಿ ಸೂತಕ ಛಾಯೆ ಆವರಿಸಿತ್ತು. ತಾನು ಅಸಹಾಯಕನಂತೆ ಇದ್ದರೂ ಗ್ರಾಮದ ಜನರ ಪ್ರೀತಿ ವಿಶ್ವಾಸ ಗಳಿಸಿದ್ದ.
ಏಕಾಂಗಿಯಾಗಿ ಇದ್ದರೂ ಊಟೋಪಚಾರಕ್ಕೆ ಯಾರ ಬಳಿಯೂ ಕೈ ಚಾಚಿದವರಲ್ಲ. ಯಾರಾದರೂ ಏನನ್ನಾದರು ನೀಡಿದರೆ ಅದನ್ನ ಮರು ಮಾತನಾಡದೆ ತೆಗೆದುಕೊಳ್ಳುತ್ತಿದ್ದರು. ಉದ್ದನೆಯ ತೋಳಿನ ಅಂಗಿಯ ಮೇಲೊಂದು ಅಂಗಿ ಇಲ್ಲವೆ ಕೋಟು ಹಾಕಿಕೊಂಡು ಕೈಯಲ್ಲಿ ಒಂದು ಲಾಟಿ ಹಿಡಿದು ಹೊರಟರೆ ಗ್ರಾಮಸ್ಥರು ಗೌರವ ನೀಡುತ್ತಿದ್ದರು.
ಒಂದು ಸಾರಿಯೂ ಅನಾರೋಗ್ಯ ಅಂತ ಆಸ್ಪತ್ರೆಗೆ ದಾಖಲಾಗಲಿಲ್ಲ. ಈಚೆಗಿನ ದಿನಗಳಲ್ಲಿ ಬೈಕ್ ಕಂಡರೆ ಕೈ ಮಾಡುತ್ತಿದ್ದರು. ಸವಾರರು ಕೂಡ ಹತ್ತಿಸಿಕೊಳ್ಳದೆ ಬಿಟ್ಟು ಹೋಗುತ್ತಿರಲಿಲ್ಲ. ಅವರ ಆಶೀರ್ವಾದ ಪಡೆದವರು ದೊಡ್ಡ ಹುದ್ದೆ ಅಲಂಕರಿಸಿದ್ದಾರೆ. ಹಲವರು ಶ್ರೀಮಂತರು, ವಿದ್ಯಾವಂತರಾಗಿದ್ದಾರೆ. ಅನೇಕ ಜನ ಅವರ ದರ್ಶನಕ್ಕೆ ನಿತ್ಯ ಕಾಯುತ್ತಿದ್ದರು.
ಅಂತ್ಯಸಂಸ್ಕಾರ : ಗ್ರಾಮದ ಅನೇಕ ಜನ ತಮ್ಮ ಜಮೀನಿನಲ್ಲಿ ಮಲ್ಲಪ್ಪ ಅವರ ಅಂತಸಂಸ್ಕಾರ ಮಾಡುವಂತೆ ಪಟ್ಟು ಹಿಡಿದಿದ್ದರು. ಗ್ರಾಮದ ಹಿರಿಯರು ಚರ್ಚೆ ನಡೆಸಿ ಚನ್ನಬಸು ಹೂಗಾರ ಅವರ ಹೊಲದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದರು. ಹುಚ್ಚ ಮಲ್ಲಪ್ಪ ಅವರ ಅಂತ್ಯಸಂಸ್ಕಾರಕ್ಕೆ ಜನಸಾಗರವೇ ಸೇರಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಗ್ರಾಮಸ್ಥರು ದೇಣಿಗೆ ಸಂಗ್ರಹಿಸಿ ಅಂತ್ಯಸಂಸ್ಕಾರ ನೆರವೇರಿಸಿದರು. ಈ ವೇಳೆ ಬಾಜಾ ಭಜಂತ್ರಿ, ಭಜನಾ ಮೇಳದೊಂದಿಗೆ ಭಾವಪೂರ್ಣವಾಗಿ ಬೀಳ್ಕೊಡಲಾಯಿತು.