

ಆನೇಕಲ್: ಮೈಸೂರಿನ ದಸರಾ ಉತ್ಸವದ ಮಾದರಿಯಲ್ಲಿ ಪಟ್ಟಣದ ತೊಗಟವೀರ ಜನಾಂಗದವರು ಆಚರಣೆ ಮಾಡಿಕೊಂಡು ಬಂದಿರುದ ಶ್ರೀಚೌಡೇಶ್ವರಿ ಅಮ್ಮನವರ ದಸರಾ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ವಿಜೃಂಭಣೆಯಿಂದ ನೆರವೇರಿತು.
ಚೌಡೇಶ್ವರಿ ಅಂಬಾರಿ ಹೊತ್ತ ಕೇರಳದ ಆನೆ ಕಾಳಿದಾಸ ಪಟ್ಟಣದ ಚೌಡೇಶ್ವರಿ ದೇವಾಲಯದ ಮುಂಭಾಗದಲ್ಲಿ ಹಾಕಿದ್ದ ವೇದಿಕೆ ಬಳಿ ಬಂದಾಗ ಗಣ್ಯರು ಅಂಬಾರಿಗೆ ಪುಷ್ಪಾರ್ಚನೆ ಮಾಡಿ ದೇವಿಯ ಆಶೀರ್ವಾದ ಪಡೆದರು. ಕಲಾತಂಡಗಳು ಪ್ರಮುಖ ಬೀದಿಗಳಲ್ಲಿ ಅಂಬಾರಿಯ ಜತೆ ಸಾಗಿದವು.
ಆನೇಕಲ್ ದಸರಾ ಉತ್ಸವಕ್ಕೆ ತಮಿಳುನಾಡು ಸೇರಿ ಕರ್ನಾಟಕದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸಿದ್ದು, ಪಟ್ಟಣದಲ್ಲಿ ಎಲ್ಲಿ ನೋಡಿದರೂ ಕಟ್ಟಡಗಳ ಮೇಲೆ ನಿಂತು ಜನ ಅಂಬಾರಿ ಉತ್ಸವ ಕಣ್ತುಂಬಿಕೊಂಡರು.
ಬಿಗಿ ಪೊಲೀಸ್ ಭದ್ರತೆ: ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ನೀಡಲಾಗಿತ್ತು. ಅಂಬಾರಿ ಹೊತ್ತ ಆನೆ ಚೌಡೇಶ್ವರಿ ದೇವಿ ದೇವಾಲಯದ ಬಳಿ ಬರುತ್ತಿದ್ದಂತೆ ದೇವಾಲಯದ ಆವರಣ ಹಾಗೂ ಸುತ್ತಮುತ್ತ ಭಕ್ತಸಾಗರವೇ ನೆರೆದಿತ್ತು. ಅಂಬಾರಿ ಹೊತ್ತ ಆನೆ ನೋಡಲು ನೂಕು ನುಗ್ಗಲು ಉಂಟಾಗಿತ್ತು.
ದೇವಿಗೆ ವಿಶೇಷ ಅಲಂಕಾರ: ದಸರಾ ನವರಾತ್ರಿ ಅಂಗವಾಗಿ ಚೌಡೇಶ್ವರಿ ಅಮ್ಮನವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು,
ದೇವಾಲಯದಲ್ಲಿ ಸಾವಿರಾರು ಜನ ದೇವಿಯ ದರ್ಶನ ಪಡೆದರು. ವೇದಿಕೆ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಸುಧಾ ನಿರಂಜನ್, ಶ್ರೀ ಚೌಡೇಶ್ವರಿ ಸೇವಾ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಬಿಜೆಪಿ ಮುಖಂಡರಾದ ಉಪಾಧ್ಯಕ್ಷೆ ಭುವನ ದಿನೇಶ್, ಶ್ರೀ ನಿವಾಸ್, ಬಮೂಲ್ ಮಾಜಿ ಅಧ್ಯಕ್ಷ ಆರ್.ಕೆ ರಮೇಶ್, ಪುರಸಭಾ ಮಾಜಿ ಸದಸ್ಯರಾದ ಶ್ರೀನಿವಾಸ್, ಲಕ್ಷ್ಮೀ ನಾರಾಯಣ್, ಕಾಂಗ್ರೆಸ್‌ಮುಖಂಡರಾದ, ಜಿ.ಗೋಪಾಲ್, ಹರೀಶ್‌ಗೌಡ, ಚೌಡೇಶ್ವರಿ ದೇವಾಲಯದ ಆಡಳಿತ ಮಂಡಳಿಯವರು ಹಾಗೂ ಪುರಸಭಾ ಸದಸ್ಯರು ಹಾಜರಿದ್ದರು.
ನಮ್ಮಲ್ಲಿನ ದುಷ್ಟ ಶಕ್ತಿ ದೂರಾಗಲಿ
ಆನೇಕಲ್ ಅಂಬಾರಿ ಉತ್ಸವ ದಿನದಿಂದ ದಿನಕ್ಕೆ ಕಳೆಗಟ್ಟುತ್ತಾ ಸಾಗುತ್ತಿದೆ, ಯಾವುದೇ ವ್ಯಕ್ತಿ ಮೌಲ್ಯವನ್ನು ಮೈಗೂಡಿಸಿಕೊಳ್ಳದೆ ಹೋದರೆ ದೇಶದಲ್ಲಿ ಒಳ್ಳೆಯ ಯುವ ಪೀಳಿಗೆಯನ್ನು ಮುಂದೆ ತರಲು ಸಾಧ್ಯವಿಲ್ಲ, ದಸರಾ ಉತ್ಸವ ಎಲ್ಲ ಊರಿನ ಜನರ ಕಾರ್ಯಕ್ರಮ ಆಗಬೇಕು, ಆನೇಕಲ್ ದಸರಾ ಉತ್ಸವ ಮೈಸೂರಿನಂತೆ ನಡೆಯುತ್ತಿರುವುದು ಮಾದರಿ ವಿಚಾರ ಎಂದು ಶಾಸಕ ಬಿ.ಶಿವಣ್ಣ ಹೇಳಿದರು. ನಾವೆಲ್ಲರೂ ಒಂದೇ ಎನ್ನುವ ಭಾವನೆ ಮೊದಲು ಬರಬೇಕು, ಕೇವಲ ದೇವರ ಆರಾಧನೆ ಮಾಡುವುದಲ್ಲ, ನಮ್ಮಲ್ಲಿನ ದುಷ್ಟ ಶಕ್ತಿ ದೂರಾಗಬೇಕು, ನಾವು ಬದಲಾಗಬೇಕು, ದೇಶದಲ್ಲಿ ಶಾಂತಿ ಸ್ಥಾಪನೆ ಆಗಬೇಕು, ನನ್ನ ಸಂಸಾರ ಇತರರಿಗೆ ಮಾದರಿಯಾಗಬೇಕು ಎನ್ನುವ ನಿಟ್ಟಿನಲ್ಲಿ ನಾವೆಲ್ಲರೂ ಬದಲಾವಣೆಯತ್ತ ಸಾಗಬೇಕು ಎಂದರು.
ತಂದೆ, ತಾಯಿಗೆ ಗೌರವ ನೀಡಿ
ಜೀವನ ಬಹಳ ಚಿಕ್ಕದು, ನಮಗೆ ಜನ್ಮ ನೀಡಿದ ತಾಯಿ, ತಂದೆಗೆ ಗೌರವ ನೀಡಬೇಕು, ದಸರಾ ಎಂದರೆ ನಮ್ಮಲ್ಲಿನ ಕೆಟ್ಟ ಗುಣಗಳನ್ನು ದೂರಮಾಡಬೇಕು ಎಂದು ದೇವರಲ್ಲಿ ಬೇಡಬೇಕು ಎಂದು ದೊಡ್ಡಬಳ್ಳಾಪುರದ ಪುಷ್ಪಾಂಡಜಮುನಿ ಗುರು ಪೀಠದ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿ ಹೇಳಿದರು. ದೇವರನ್ನು ಪೂಜಿಸುವುದು ನಾವೆಲ್ಲರೂ ಚೆನ್ನಾಗಿ ಜೀವನ ನಡೆಸಬೇಕು ಎನ್ನುವ ಕಾರಣದಿಂದ. ಕಷ್ಟಪಟ್ಟು ದುಡಿದು ಜೀವನ ನಡೆಸಬೇಕು, ದೇವರು ಎಲ್ಲವನ್ನು ಕೊಡುತ್ತಾನೆ ಎಂದು ಸುಮ್ಮನಿರಬಾರದು, ನಾವೆಲ್ಲರೂ ದೈವಾರಾಧನೆ ಮೂಲಕ ಜೀವನ ಸಾಗಬೇಕು, ಅದೆಷ್ಟೋ ಮಹಾತ್ಮರು ನಮ್ಮನ್ನು ಒಳ್ಳೆಯ ದಾರಿಯಲ್ಲಿ ಸಾಗುವಂತೆ ಹೇಳುತ್ತಿರುತ್ತಾರೆ. ಅದರಂತೆ ನಾವು ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಂಡು ಜೀವನ ನಡೆಸಬೇಕು. ಮನುಷ್ಯ ತನ್ನ ಜೀವಿತಾವಧಿಯಲ್ಲಿ ಇನ್ನೊಬ್ಬರಿಗೆ ತೊಂದರೆ ಆಗದಂತೆ ಜೀವನ ನಡೆಸಬೇಕು, ಅಮ್ಮನವರ ಆದೇಶದಂತೆ ನಾವೆಲ್ಲರೂ ಎನ್ನುವ ಅರಿವು ಇರಬೇಕು ಎಂದರು.
" ಮೈಸೂರು ಮಹಾರಾಜರು ನೀಡಿರುವ ಕೊಡುಗೆ ಸದಾ ನೆನೆಸಿಕೊಳ್ಳಬೇಕು. ದೇಶದಲ್ಲಿ ಬೇರೆ ಬೇರೆ ರಾಜಮನೆತನ ಇದ್ದರೂ ಅಲ್ಲಿ ನಡೆಯುವ ಪರಂಪರೆಗಳು, ಆದರ್ಶಗಳು ಎಲ್ಲರಿಗೂ ಕೂಡ ತಿಳಿಯಬೇಕಾದ ವಿಚಾರಗಳು ಸಾಕಷ್ಟು ಅಡಗಿರುತ್ತವೆ, ಮೈಸೂರು ದಸರಾ ಇದೇ ವಿಚಾರದಲ್ಲಿ ಇಂದಿಗೂ ಹೆಸರುಗಳಿಸಿದ್ದು, ನಾನೂ ಈ ದಸರಾ ಉತ್ಸವದಲ್ಲಿ ಉದ್ಘಾಟನೆ ನಡೆಸಿದ್ದೇನೆ ಎಂದು ಹೇಳಲು ಸಂತಸ ಆಗುತ್ತದೆ."
ಡಾ. ಸಿ. ಎನ್.ಮಂಜುನಾಥ್ ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದ
" ತೊಗಟವೀರ ಜನಾಂಗದವರು ಆನೇಕಲ್ನಲ್ಲಿ ದಸರಾ ಉತ್ಸವವನ್ನು ವರ್ಷದಿಂದ ವರ್ಷಕ್ಕೆ ಅದ್ದೂರಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಭಕ್ತರ ಭಾವನೆಗಳಿಗೆ ಸ್ಪಂದಿಸಿ ಅಮ್ಮನವರ ಉತ್ಸವ ಮತ್ತಷ್ಟು ಹೆಸರು ಗಳಿಸುತ್ತಿರುವುದು ಆನೇಕಲ್ ತಾಲೂಕಿಗೆ ಇನ್ನಷ್ಟು ಕೀರ್ತಿ ತರಲು ಕಾರಣ."
ಎ.ನಾರಾಯಣಸ್ವಾಮಿ ಕೇಂದ್ರದ ಮಾಜಿ ಸಚಿವ