ಕಿಕ್ಕೇರಿಸಿದ ಹೊಸ ವರ್ಷದ ಸಂಭ್ರಮ !

Alcohal-Web
Published on

|ಮಂಜುನಾಥ ಕೋಳಿಗುಡ್ಡ, ಬೆಳಗಾವಿ


ಕ್ಯಾಲೆಂಡರ್ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಯಾವ ವ್ಯಾಪಾರ, ವಹಿವಾಟು ಹೇಗೆ ನಡೆದಿತ್ತೋ ಗೊತ್ತಿಲ್ಲ. ಆದರೆ, ಮದ್ಯದ ಗಮ್ಮತ್ತು ಮಾತ್ರ ಭಾರಿ ಕಿಕ್ಕೇರಿಸಿತ್ತು. 2019ರ ವರ್ಷದ ಕೊನೆಯ ದಿನವಾದ ಡಿಸೆಂಬರ್ 31ರಂದು ಒಂದೇ ದಿನ ಬರೋಬ್ಬರಿ 22,349 ಬಾಕ್ಸ್ (2,01,141ಲೀಟರ್) ಮದ್ಯ ಮಾರಾಟ ಆಗಿದೆ..!

ಜಿಲ್ಲೆಯಲ್ಲಿರುವ 631 ಮದ್ಯದಂಗಡಿಗಳ ವ್ಯಾಪ್ತಿಯಲ್ಲಿ ಸಾಮಾನ್ಯ ದಿನಗಳಲ್ಲಿ ದಿನಕ್ಕೆ 7 ರಿಂದ 9 ಸಾವಿರ ಬಾಕ್ಸ್ ಮದ್ಯ ಮಾರಾಟವಾಗುತ್ತಿತ್ತು. ಕಳೆದ ವರ್ಷದ ಮಾರಾಟಕ್ಕೆ ಹೋಲಿಸಿದರೆ ಈ ಬಾರಿ ಶೇ. 43ರಷ್ಟು ಹೆಚ್ಚು ಮದ್ಯ ಮಾರಾಟ ಆಗಿದೆ.
ಕಳೆದ ನಾಲ್ಕೈದು ವರ್ಷದ ಅವಧಿಯಲ್ಲಿ ವರ್ಷದಿಂದ ವರ್ಷಕ್ಕೆ ಮದ್ಯ ಬಾಕ್ಸ್ ಮಾರಾಟ ಪ್ರಮಾಣದಲ್ಲಿ ಶೇ. 27.8ರಷ್ಟು ಏರಿಕೆಯಾಗಿದೆ. ಬೆಳಗಾವಿ ನಗರ ಹೊರತುಪಡಿಸಿ ಗೋಕಾಕ, ಚಿಕ್ಕೋಡಿ, ಸವದತ್ತಿ, ರಾಮದುರ್ಗ, ಅಥಣಿ, ಮೂಡಲಗಿ ತಾಲೂಕಿನ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ. ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿಯೇ ಮದ್ಯ ಮಾರಾಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದು ಅಬಕಾರಿ ಇಲಾಖೆ ನೀಡಿರುವ ಅಂಕಿ-ಅಂಶಗಳಿಂದಲೇ ತಿಳಿದುಬಂದಿದೆ.

ಚಿಕ್ಕೋಡಿ-ಗೋಕಾಕದಲ್ಲಿ ಹೆಚ್ಚು ಮಾರಾಟ: ಕಳೆದ ವರ್ಷ 2018-19ರ ವರ್ಷಾಚರಣೆ ಸಂದರ್ಭದಲ್ಲಿ ಅಬಕಾರಿ ಇಲಾಖೆಯು 3,39,928 ಬಾಕ್ಸ್ ಮದ್ಯ ಹಾಗೂ 1,20,450 ಬಾಕ್ಸ್ ಬಿಯರ್ ಮಾರಾಟದ ಗುರಿ ಹಾಕಿಕೊಂಡಿತ್ತು. ಆ ಪೈಕಿ 2,82,782 ಬಾಕ್ಸ್ ಮದ್ಯ ಮತ್ತು 93,085 ಬಾಕ್ಸ್ ಬಿಯರ್ ಮಾರಾಟವಾಗಿದ್ದು, ಶೇ. 83.19ರಷ್ಟು ವಹಿವಾಟು ಮಾಡಿದೆ. 2017ರ ಡಿಸೆಂಬರ್ 31ರಂದು ಒಂದೇ ದಿನ 3,975 ಬಾಕ್ಸ್ ಮದ್ಯ ಮತ್ತು 1,338 ಬಾಕ್ಸ್ ಬಿಯರ್ ಮಾರಾಟವಾಗಿತ್ತು. 2019ರ ಡಿ. 31ರಂದು ಒಂದೇ ದಿನ 15,430 ಬಾಕ್ಸ್ ಮದ್ಯ ಮತ್ತು 6,919 ಬಾಕ್ಸ್ ಬಿಯರ್ ಮಾರಾಟವಾಗಿದೆ. ಬೆಳಗಾವಿ ನಗರಕ್ಕಿಂತ ಚಿಕ್ಕೋಡಿ ಮತ್ತು ಗೋಕಾಕ ನಗರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕುಡುಕರ ಸಂಖ್ಯೆಯೂ ಹೆಚ್ಚಳ, ಸರ್ಕಾರಕ್ಕೂ ಕೋಟ್ಯಂತರ ಆದಾಯ

ಅಬಕಾರಿ ಇಲಾಖೆ ಮಾರಾಟ ಮಾಡುವ ಒಂದು ಬಾಕ್ಸ್‌ನಲ್ಲಿ 9 ಲೀಟರ್ ಮದ್ಯ ಇರುತ್ತದೆ. ಹೊಸ ವರ್ಷಾಚರಣೆಯ ಕೊನೆಯ ದಿನ ಗುರಿ ಹಾಕಿಕೊಂಡಿದ್ದಷ್ಟು ಮದ್ಯ ಮಾರಾಟವಾಗಿಲ್ಲ. ಆದರೂ ಸರ್ಕಾರಕ್ಕೆ ಕೋಟ್ಯಂತರ ರೂ. ಆದಾಯ ಬಂದಿದೆ. ವರ್ಷದಿಂದ ವರ್ಷಕ್ಕೆ ಕುಡಿಯುವರ ಸಂಖ್ಯೆ ಹೆಚ್ಚಾಗುತ್ತಿದೆ. ಶನಿವಾರ ಹಾಗೂ ಭಾನುವಾರದಂದು ಕುಡಿಯುವವರ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ. ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ, ಖಾಸಗಿ ನೌಕರರು, ನಗರ ಪ್ರದೇಶಗಳಲ್ಲಿ ಮಧ್ಯಮ ವಯಸ್ಸಿನ ಮಹಿಳೆಯರೂ ಮದ್ಯ ಸೇವಿಸುತ್ತಿದ್ದಾರೆ. ಕೆಲ ಬ್ರಾಂಡ್ ಮದ್ಯಗಳಿಗೆ ಮಾತ್ರ ಹೆಚ್ಚಿನ ಬೇಡಿಕೆಯಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬಿಯರ್ ಮಾರಾಟ ಶೇ. 15ರಷ್ಟು ಏರಿಕೆ ಕಂಡಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ವರ್ಷ ಸಂಭ್ರಮಾಚರಣೆಯ ಒಂದೇ ದಿನದಲ್ಲಿ ಮದ್ಯ ಮಾರಾಟ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ಎರಡು ವರ್ಷಕ್ಕೆ ಹೋಲಿಕೆ ಮಾಡಿದರೆ ಮದ್ಯ ಮಾರಾಟದಲ್ಲಿ ಏರಿಕೆ ಕಂಡಿದೆ. | ಕೆ.ಅರುಣ ಕುಮಾರ. ಅಬಕಾರಿ ಉಪ ಆಯುಕ್ತರು, ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net