

ಚಿಕ್ಕಬಳ್ಳಾಪುರ: ಪಾಕಿಸ್ತಾನದೊಂದಿಗಿನ ಗುಂಡಿನ
ಚಕಮಕಿಯಲ್ಲಿ ಹುತಾತ್ಮರಾಗಿದ್ದ ಯೋಧ ಮುರಳಿ ನಾಯಕ್ ಪಾರ್ಥಿವ ಶರೀರಕ್ಕೆ ಜಿಲ್ಲೆಯ ವಿವಿಧ ಭಾಗಗಳಲ್ಲೂ ಪುಷ್ಪ ನಮನ ಸಲ್ಲಿಸಲಾಯಿತು.
ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚಿಕ್ಕಬಳ್ಳಾಪುರ ಮೂಲಕ ಯೋಧನ ಸ್ವಗ್ರಾಮ ಆಂಧ್ರಪ್ರದೇಶದ ಗೋರಂಟ್ಲು ತಾಲೂಕಿನ ಕಲ್ಲಿಕೊಂಡ ಗ್ರಾಮಕ್ಕೆ ಮೃತದೇಹ ಸಾಗಣೆಯ ವಾಹನ ತೆರಳುವಾಗ ಸಾವಿರಾರು ಮಂದಿ ಜಮಾಯಿಸಿ ಗೌರವ ಸಲ್ಲಿಸಿದರು. ಮಳೆಯನ್ನೂ ಲೆಕ್ಕಿಸದೇ ಗಂಟೆಗಟ್ಟಲೆ ರಸ್ತೆ ಬದಿಯಲ್ಲಿ ನಿಂತು ಜೈಕಾರಗಳನ್ನು ಕೂಗಿದರು.
ಭಾರತ್ ಮಾತಾಕಿ ಜೈ, ಅಮರ್ ರಹೇ ಮುರಳಿ ನಾಯಕ್, ಜೋರ್ ಸೆ ಬೋಲೋ ಪ್ಯಾರ್ ಸೆ ಬೋಲೋ ಹಿಂದೂ ಸ್ಥಾನ್ ಅಮ್ ಹೈ ಘೋಷಣೆಗಳು ಮುಗಿಲು ಮುಟ್ಟಿದ್ದವು. ಜನಜಂಗುಳಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ಹುತಾತ್ಮ ಯೋಧ ಮುರಳಿ ನಾಯಕ್ ಬಾಗೇಪಲ್ಲಿ ಸಮೀಪದ ಆಂಧ್ರಪ್ರದೇಶಕ್ಕೆ ಸೇರಿದ ಕಲ್ಲಿಕೊಂಡ ಗ್ರಾಮದ ಶ್ರೀರಾಮುಲು ನಾಯಕ್ ಹಾಗೂ ಜ್ಯೋತಿಬಾಯಿ ಅವರ ಏಕೈಕ ಪುತ್ರ. ಪಾಕಿಸ್ತಾನ ಗಡಿಯಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ ಹುತಾತ್ಮರಾಗಿದ್ದಾರೆ. ಇವರ ಪಾರ್ಥೀವ ಶರೀರವನ್ನು ಶನಿವಾರ ಜಮ್ಮುವಿನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ತಂದು ಅಲ್ಲಿಂದ ಇಂಡಿಗೋ ವಿಮಾನದ ಮೂಲಕ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಯಿತು. ಏರ್‌ಪೋರ್ಟ್ ಕಾರ್ಗೋ ಟರ್ಮಿನಲ್‌ನಲ್ಲಿ ಯೋಧರಿಂದ ಅಂತಿಮ ನಮನ ಸಲ್ಲಿಸಿದ ಬಳಿಕ ಸ್ವಗ್ರಾಮಕ್ಕೆ ಪಾರ್ಥೀವ ಶರೀರವನ್ನು ಕೊಂಡೊಯ್ಯಲಾಯಿತು. ಇದರ ಬಗ್ಗೆ ಮಾಹಿತಿ ತಿಳಿದುಕೊಂಡು ಜನ ಜಮಾಯಿಸಿದ್ದರು.
ದಾರಿಯುದ್ದಕ್ಕೂ ನೆರೆದಿದ್ದ ಜನಸಮೂಹ ಜೈಕಾರಗಳನ್ನು ಕೂಗುತ್ತಾ, ಹೂಮಳೆ ಸುರಿಸಿತು.
ಚಿಕ್ಕಬಳ್ಳಾಪುರದ ವಾಪಸಂದ್ರ, ಪೆರೇಸಂದ್ರ, ಬಾಗೇಪಲ್ಲಿ ಬಳಿ ಜನರು ಆಗಮಿಸಿ, ಪುಷ್ಪ ನಮನ ಸಲ್ಲಿಸಿದರು.
ಸಂಸದ ಡಾ ಕೆ.ಸುಧಾಕರ್ ಭಾಗಿಯಾಗಿದ್ದು ಯೋಧನಿಗೆ ಗೌರವ ಸಲ್ಲಿಸಿದರು.