

ಜಗಳೂರು: ತಾಲೂಕಿನ ಕಲ್ಲೇದೇವರಪುರ ಸಮೀಪದ ಕಾಡುಗೊಲ್ಲರ ವೀರಗಾರ ಶ್ರೀ ಬೊಮ್ಮ ಕಾಟಲಿಂಗೇಶ್ವರ ಸ್ವಾಮಿಗೆ ಶ್ರಾವಣ ಮಾಸದ ಕಡೆ ಸೋಮವಾರ ಹಿನ್ನೆಲೆ ಕಾಡುಗೊಲ್ಲರ ಸಮುದಾಯದಿಂದ ವಿಶೇಷ ಪೂಜೆ ನಡೆಯಿತು.
ಪ್ರತಿ ವರ್ಷದ ಶ್ರಾವಣ ಮಾಸದ ಕೊನೆಯ ವಾರದಲ್ಲಿ ನಡೆಯುವ ಈ ಪೂಜೆಗೆ ಅಣಬೂರು ಗೊಲ್ಲರಹಟ್ಟಿಯಿಂದ ನಡೆ ಮುಡಿ ಕಟ್ಟಿಕೊಂಡು ಅಣಬೂರು ಗ್ರಾಮದ ಪೂಜಾರಿಗಳು ಬೊಮ್ಮಗಟ್ಟೆ ಸಮಾಧಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ದಾವಣಗೆರೆ, ಚಿತ್ರದುರ್ಗ ಸೇರಿದಂತೆ ವಿವಿಧೆಡೆಯಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಜಗಳೂರು ತಾಲೂಕಿನ ಅಣಬೂರು ಗೊಲ್ಲರಹಟ್ಟಿ, ಹಿರೇಮಲ್ಲನಹೊಳೆ ಗೊ.ಹಟ್ಟಿ, ಚಿಕ್ಕಮ್ಮನಹಟ್ಟಿ, ತೋರಣಗಟ್ಟೆ ಗೊ. ಹಟ್ಟಿ, ಜಗಳೂರು ಗೊ.ಹಟ್ಟಿ ಹೀಗೆ 22ಕ್ಕೂ ಹೆಚ್ಚು ಗ್ರಾಮಗಳಿಂದ ಕಾಡುಗೊಲ್ಲರು ಆಗಮಿಸಿ ಹರಕೆ ತೀರಿಸಿದರು.
ಬೊಮ್ಮಕಾಂಟಲಿಂಗೇಶ್ವರ ಸಮಾಧಿ ಕಲ್ಲಿನ ರಾಶಿಯಿಂದ ಕೂಡಿದ್ದು, ವಿವಿಧ ಬಣ್ಣ ಬಣ್ಣದ ಹೂವುಗಳಿಂದ ಸಿಂಗಾರಗೊಳಿಸಲಾಗಿತ್ತು. ಸಮಾಧಿಗೆ ಬರುವ ಭಕ್ತರು ಸೇಬು, ಬಾಳೆ, ಎಲೆ, ತೆಂಗಿನಕಾಯಿ, ಹೊಲದಲ್ಲಿ ಬೆಳೆದ ದವಸ, ಧಾನ್ಯ ಸಮರ್ಪಿಸಿದರು. ರಾಶಿ ತುಂಬೆಲ್ಲ ಹೂವಿನ ಹಾರ, ಹಣ್ಣುಗಳಿಂದ ಮುಚ್ಚಿಕೊಂಡಿತ್ತು. ಸಮಾಧಿ ಸ್ಥಳಕ್ಕೆ ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಭೇಟಿ ನೀಡಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಟ್ರಾಫಿಕ್ ಕಿರಿಕಿರಿ:
ಪ್ರತಿ ವರ್ಷಕ್ಕಿಂತ ಈ ವರ್ಷ ಜನ ಸಾಗರದಿಂದ ತುಂಬಿತ್ತು. ತಾಲೂಕಿನ ಬೆಣ್ಣೆಹಳ್ಳಿ ರಸ್ತೆ, ಕಲ್ಲೇದೇವರಪುರ ರಸ್ತೆಯುದ್ದಕ್ಕೂ ಜನರಿಂದ ಕಿಕ್ಕಿರಿದಿತ್ತು. ದಾರಿಯಲ್ಲಿ ಕಿ.ಮೀ ದೂರದವರೆಗೂ ಎತ್ತಿನಗಾಡಿ, ಕಾರು, ಟ್ರ್ಯಾಕ್ಟರ್, ಬೈಕ್ ಸೇರಿದಂತೆ ವಿವಿಧ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಮಾಜಿ ಶಾಸಕ ಎಚ್.ಪಿ ರಾಜೇಶ್, ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕಲ್ಲೇಶ್‌ರಾಜ್ ಪಟೇಲ್, ಕಾಡುಗೊಲ್ಲರ ಹಿರಿಯ ಮುಖಂಡ ಗೌಡ್ರು ಅಜ್ಜಪ್ಪ, ಮರಿಗುಡ್ಡಪ್ಪ , ವೀರೇಶ್, ಮಹಾಲಿಂಗಪ್ಪ, ಸೊಸೈಟಿ ಮಂಜುನಾಥ, ಲಾಯರ್ ಸಣ್ಣಕಾಟಪ್ಪ, ಗ್ರಾಪಂ ಸದಸ್ಯರಾದ ಚಿತ್ತಪ್ಪ, ದೊಡ್ಡ ಈರಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಜಿ. ಗುಡ್ಡಪ್ಪ, ಯುವಕರಾದ ಪ್ರಶಾಂತ್ ಕುಮಾರ್, ಚೇತನ್, ಕಾಟಲಿಂಗಪ್ಪ ಇದ್ದರು.