

ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ
ಲೋಕಸಭಾ ಚುಣಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಹೊಸ ಪಡಿತರ ಚೀಟಿ (ವೈದ್ಯಕೀಯ ಸೌಲಭ್ಯ) ಹಾಗೂ ತಿದ್ದುಪಡಿ ಪ್ರಕ್ರಿಯೆಗೆ ಮಂಗಳವಾರದಿಂದ ಮತ್ತೆ ಅವಕಾಶ ಕಲ್ಪಿಸಿದ್ದು, ಸರ್ವರ್ ಸಮಸ್ಯೆಯಿಂದ ಜನರು ಹೈರಾಣಾದರು.
ಹೆಸರು ಸೇರ್ಪಡೆ, ತಿದ್ದುಪಡಿ, ಪಡಿತರ ಚೀಟಿ ಯಜಮಾನಿಗೆ ವರ್ಗಾವಣೆ, ವಿಳಾಸ ಬದಲಾವಣೆ, ಮರಣ ಹೊಂದಿದವರ ಹೆಸರು ಡಿಲೀಟ್ ಮಾಡುವುದು ಸೇರಿ ಇತರ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಅದರಲ್ಲೂ ಜುಲೈ 2, 3ರಂದು ಎರಡು ದಿನ ಮಾತ್ರ ಅವಕಾಶವಿದೆ. ಜಿಲ್ಲ್ಲೆಗೆ ಹೊಸ ಪಡಿತರ ಚೀಟಿಗಾಗಿ ಬೆಳಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ, ತಿದ್ದುಪಡಿಗಾಗಿ ಮಧ್ಯಾಹ್ನ 2ರಿಂದ 4 ಗಂಟೆಯವರೆಗೆ ಸಮಯ ನಿಗದಿ ಮಾಡಲಾಗಿದೆ. ಇದರಿಂದ ಜನರು ಏಕಕಾಲಕ್ಕೆ ಸೇವಾ ಕೇಂದ್ರಕ್ಕೆ ಧಾವಿಸಿ ಬರುವಂತೆ ಮಾಡಿದೆ. ಆದರೆ, ದಿನವಿಡೀ ನಿಂತರೂ ಸರ್ವರ್ ಸಮಸ್ಯೆಯಿಂದ ಹೆಸರು ನೋಂದಣಿ ಮತ್ತು ತಿದ್ದುಪಡಿಗೆ ಸಾಧ್ಯವಾಗದೆ ಪರದಾಡುವಂತಾಗಿದೆ.
ಪಂಚ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮೀ, ಅನ್ನಭಾಗ್ಯದ ಸದ್ಬಳಕೆಗೆ ಪಡಿತರ ಚೀಟಿ ಮುಖ್ಯವಾಗಿದೆ. ಪಡಿತರ ಚೀಟಿ ಮಾಡಿಸಲು ಮತ್ತು ತಿದ್ದುಪಡಿಗೆ ಜನ ಜಮಾಯಿಸುತ್ತಿದ್ದಾರೆ. ದೈನಂದಿನ ಕೆಲಸಗಳನ್ನು ಬದಿಗೊತ್ತಿ ಪಡಿತರ ಚೀಟಿ ಮಾಡಿಸಲು ಕಾಯ್ದು ಕುಳಿತಿದ್ದಾರೆ. ಇಡೀ ದಿನ ಕಾದರೂ ತಿದ್ದುಪಡಿ ಆಗದೆ ಶಾಪ ಹಾಕಿ ಹಿಂದಿರುಗುತ್ತಿದ್ದಾರೆ.
ಸರ್ಕಾರ ಹಲವು ತಿಂಗಳ ಬಳಿಕ ತಿದ್ದುಪಡಿಗೆ ಅವಕಾಶ ಕಲ್ಪಿಸಿದೆ. ಆದರೆ, ಸರ್ವರ್ ಸಮಸ್ಯೆ ಸರಿಪಡಿಸದೆ ನಿರ್ಲಕ್ಷಿಸಿರುವುದು ಮೂಗಿಗೆ ತುಪ್ಪ ಸವರಿದಂತಾಗಿದೆ. ಸರ್ಕಾರಕ್ಕೆ ಪಡಿತರ ಚೀಟಿಯ ಸಮಸ್ಯೆಯನ್ನು ಸರಿಪಡಿಸುವ ನೈಜ ಕಾಳಜಿ ಇದ್ದರೆ ಸರ್ವರ್ ಸಮಸ್ಯೆ ನಿವಾರಿಸಬೇಕು. ಅಲ್ಲದೆ, ತಿದ್ದುಪಡಿಯ ಕಾಲಾವಕಾಶ ವಿಸ್ತರಿಸಬೇಕು ಎಂದು ಗ್ರಾಹಕರು ಆಗ್ರಹಿಸಿದ್ದಾರೆ.
ನಮ್ಮ ಮಾವನವರು ತೀರಿಕೊಂಡಿದ್ದು ಪಡಿತರ ಚೀಟಿಯಲ್ಲಿನ ಅವರ ಹೆಸರು ತೆಗೆದು ಹಾಕಿ ಮಗನ ಹೆಸರು ಸೇರ್ಪಡೆ ಮಾಡಲು ಬೆಳಗ್ಗೆಯಿಂದ ಕಾಯ್ದು ಕಾಯ್ದು ಸುಸ್ತಾಯಿತು. ಕರ್ನಾಟಕ ಒನ್ ಕೇಂದ್ರದಲ್ಲಿ ಸರ್ವರ್ ಇಲ್ಲ ಎಂದು ಹೇಳುತ್ತಿದ್ದಾರೆ. ತಿದ್ದುಪಡಿಗೆ ಎರಡು ದಿನ ಅವಕಾಶ ನೀಡಿ, ಸರ್ವರ್ ಇಲ್ಲ ಎಂದರೆ ಹೇಗೆ. ಪಡಿತರ ಚೀಟಿ ತಿದ್ದುಪಡಿಯಲ್ಲಿ ಆಗುತ್ತಿರುವ ತಾಂತ್ರಿಕ ಸಮಸ್ಯೆಯನ್ನು ಸರ್ಕಾರ ಪರಿಹರಿಸಬೇಕು ಎಂದು ಆಗ್ರಹಿಸುತ್ತಾರೆ ನರೇಗಲ್ಲ ನಿವಾಸಿ ಬಸಮ್ಮ ಹೂಗಾರ.
ಪಡಿತರ ಚೀಟಿ ತಿದ್ದುಪಡಿಗೆ ಸರ್ವರ್ ಸಮಸ್ಯೆ ಎದುರಾಗಿದೆ. ಜನರು ಗಮನಕ್ಕೆ ತಂದಿದ್ದಾರೆ. ಈ ಸಮಸ್ಯೆ ನಮ್ಮ ತಾಲೂಕಿಗೆ ಸೀಮಿತವಾಗಿಲ್ಲ, ಇಡೀ ರಾಜ್ಯದಲ್ಲೇ ಇದೆ. ತಾಂತ್ರಿಕ ವಿಭಾಗಕ್ಕೆ ಈಗಾಗಲೇ ದೂರು ಸಲ್ಲಿಸಲಾಗಿದೆ. ಶೀಘ್ರದಲ್ಲೇ ಸಮಸ್ಯೆ ಸರಿಪಡಿಸುವುದಾಗಿ ಮೇಲಧಿಕಾರಿಗಳು ತಿಳಿಸಿದ್ದಾರೆ. ಜನರು ಸಮಾಧಾನದಿಂದ ಇರಬೇಕು. ಸಮಸ್ಯೆ ಖಂಡಿತ ಬಗೆಹರಿಯುತ್ತದೆ.-ಕಿರಣಕುಮಾರ ಕುಲಕರ್ಣಿ, ತಹಸೀಲ್ದಾರ್, ಗಜೇಂದ್ರಗಡ