ರಾಸು ಸಾಕಾಣಿಕೆಯಿಂದ ಆರ್ಥಿಕ ನಿರ್ವಹಣೆ

dj clk rasu
Published on

ಚಳ್ಳಕೆರೆ: ಒಂದು ಹಸು ಸಾಕಾಣಿಕೆಯಿಂದ ಇಡೀ ಕುಟುಂಬದ ಆರ್ಥಿಕ ನಿರ್ವಹಣೆ ಸುಧಾರಿಸುವ ಜಾಣ್ಮೆ ರೈತರಲ್ಲಿ ಬೆಳೆಯಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ನಗರದ ಬೆಂಗಳೂರು ರಸ್ತೆಯಲ್ಲಿನ ನರಹರೇಶ್ವರ ದೇವಸ್ಥಾನ ಆವರಣದಲ್ಲಿ ಮಂಗಳವಾರ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಿಶ್ರತಳಿ ಹಸು-ಕರುಗಳ ಪ್ರದರ್ಶನ ಮತ್ತು ಬರಡು ರಾಸುಗಳ ಚಿಕಿತ್ಸಾ ಶಿಬಿರ ಕಾರ್ಯಕ್ರಮದಲ್ಲಿ ಗೋ ಪೂಜೆ ನೆರವೇರಿಸಿ ಮಾತನಾಡಿದರು.

ದನ, ಕರು ಸಾಕಾಣಿಕೆ ಮಾಡಿಕೊಂಡು ಕೃಷಿ ಮಾಡುವ ಮನೆತನಗಳಲ್ಲಿ ಉತ್ತಮ ಆರೋಗ್ಯ ಮತ್ತು ಆರ್ಥಿಕ ಸಬಲೀಕರಣ ಇರುತ್ತದೆ. ಪ್ರಸ್ತುತ ದಿನಗಳಲ್ಲಿ ಕೃಷಿ ಪದ್ಧತಿ ಮತ್ತು ರೈತಾಪಿ ವರ್ಗದಲ್ಲಿ ಬದಲಾವಣೆ ಕಾಣುತ್ತೇವೆ. ಇದರಿಂದ ಗ್ರಾಮೀಣ ಭಾಗದಲ್ಲಿ ಜಾನುವಾರುಗಳ ಸಂತತಿ ಕ್ಷೀಣಿಸುತ್ತಿವೆ ಎಂದರು.

ಸಹಕಾರ ಸಂಘಗಳ ಉದ್ದೇಶ, ರೈತರ ಬಲವರ್ಧನೆ ಮತ್ತು ಹಾಲು ಉತ್ಪಾದಕರ ಪ್ರೋತ್ಸಾಹದಿಂದ ರೈತರಿಗೆ ಸಿಗುವ ಸಬ್ಸಿಡಿ ಯೋಜನೆಗಳು ಸದುಪಯೋಗ ಆಗಬೇಕು. ರೈತರಲ್ಲಿ ಭೂಮಿ ಉಳುಮೆ ಸೇರಿದಂತೆ ಜಾನುವಾರುಗಳನ್ನು ಕುಟುಂಬದ ಸಂಪತ್ತಿನಂತೆ ಸಾಕುವ ಪ್ರವೃತ್ತಿ ಇರಬೇಕು ಎಂದು ತಿಳಿಸಿದರು.

ಶಿಮುಲ್ ನಿರ್ದೇಶಕ ಜಿ.ಬಿ.ಶೇಖರಪ್ಪ ಮಾತನಾಡಿ, ಚಳ್ಳಕೆರೆ ತಾಲೂಕಿನಲ್ಲಿ 60 ಹಾಲು ಉತ್ಪಾದಕರ ಸಂಘ ಕಾರ್ಯ ನಿರ್ವಹಿಸುತ್ತಿವೆ. 7,944 ಸದಸ್ಯರಿದ್ದಾರೆ. ಇದರಲ್ಲಿ 2,937 ರೈತರು ಪ್ರತ್ಯೇಕ ಹಸುಗಳನ್ನು ಸಾಕಿಕೊಂಡು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಪ್ರತಿದಿನ 30,500 ಲೀಟರ್ ಗುಣಮಟ್ಟದ ಹಾಲು ಉತ್ಪಾದನೆ ಆಗುತ್ತಿದೆ. ಹಸು ಸಾಕಾಣಿಕೆ ಸಂಸ್ಕೃತಿ ಉಳಿಯಬೇಕಿದೆ ಎಂದರು.

ಹಾಲು, ತುಪ್ಪ, ಮೊಸರು, ಮಜ್ಜಿಗೆ ಬಳಕೆಯಲ್ಲಿ ಆರೊಗ್ಯವಂತ ಸಮಾಜ ನಿರ್ವಣವಾಗಲಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ 80ರಿಂದ 1 ಲಕ್ಷದವರೆಗೆ ಒಂದು ಹಸುವಿನ ಬೇಡಿಕೆ ಇದೆ. ಖರೀದಿ ಮಾಡಿಕೊಳ್ಳುವ ರೈತರ ಹಸುಗಳಿಗೆ ಸಂಘದಿಂದ ವಿಮೆ ಮಾಡಿಸಿಕೊಡಲಾಗುತ್ತಿದೆ. ಅಕಾಲಿಕ ಹಸು ಸಾವಿಗೀಡಾದಲ್ಲಿ ವಿಮೆ ಹಣ ದೊರೆಯಲಿದೆ ಎಂದು ತಿಳಿಸಿದರು.

ಪ್ರತಿ ಲೀಟರ್​ಗೆ ಸರ್ಕಾರದಿಂದ 5 ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಕರ್ನಾಟಕದ ಹಾಲು ಉತ್ಪಾದನೆಗೆ ವಿವಿಧ ರಾಜ್ಯಗಳಲ್ಲೂ ಬೇಡಿಕೆ ಇದೆ. ಒಟ್ಟಾರೆ ಉತ್ಪಾದನಾ ಹಾಲಿನಲ್ಲಿ ಶೇ.60ಷ್ಟು ಇತರ ಸಿಹಿ ಪದಾರ್ಥಗಳ ತಯಾರಿಕೆಗೆ ಬಳಸಲಾಗುತ್ತದೆ. ಹಾಲು ಉತ್ಪಾದನಾ ಒಂದು ಉದ್ಯಮವಾಗಿ ಬೆಳೆಯುವ ಉದ್ದೇಶದಿಂದ ಶಾಲಾ ಮತ್ತು ಅಂಗನವಾಡಿ ಮಕ್ಕಳಿಗೆ ಹಾಲಿನ ಪೌಡರ್ ವಿತರಿಸುವ ಮೂಲಕ ಸರ್ಕಾರವೂ ಉತ್ತೇಜನ ನೀಡುತ್ತಿದೆ ಎಂದು ಹೇಳಿದರು.

ರಾಸುಗಳಿಗೆ ಬಹುಮಾನ: ಮಿಶ್ರತಳಿ ಹಸು-ಕರುಗಳ ಪ್ರದರ್ಶನದಲ್ಲಿ ಕಸಬಾ ವ್ಯಾಪ್ತಿಗೆ ಒಳಪಟ್ಟ ವಿವಿಧ ಗ್ರಾಮಗಳಿಂದ ಸುಮಾರು 46ಕ್ಕೂ ಹೆಚ್ಚು ರೈತರು ಸಾಕಾಣಿಕೆ ಮಾಡಿರುವ ಹಸು ಕರುಗಳೊಂದಿಗೆ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಎಚ್​ಎಫ್ ತಳಿಯಲ್ಲಿ ಆರೋಗ್ಯಕರವಾಗಿ ಸಾಕಲಾಗಿದ್ದ ಮತ್ತು ದಿನಕ್ಕೆ 10 ರಿಂದ 15 ಲೀಟರ್ ಹಾಲು ಕೊಡುವ, ಯಾವುದೇ ರೋಗ-ರುಜಿನಗೊಳಗಾಗದೆ ಉತ್ತಮ ದೇಹ ಸೌಂದರ್ಯ ಇದ್ದ ಬಸವರಾಜು ಎಂಬ ರೈತರ ಹಸು ಪ್ರಥಮ ಬಹುಮಾನ ಪಡೆಯಿತು.

ಜಯಲಕ್ಷ್ಮಿ ಎಂಬುವರ ಹಸುವಿಗೆ ದ್ವಿತೀಯ, ಜರ್ಸಿ ತಳಿಯಲ್ಲಿ ರೈತರಾದ ನಂಜಮ್ಮ ಎಂಬುವರ ಹಸು ಪ್ರಥಮ, ರೈತ ಧನಂಜಯ ದ್ವಿತೀಯ, ಮಂಜುನಾಥ ಎಂಬುವರ ಹಸುವಿಗೆ ತೃತೀಯ ಬಹುಮಾನ ನೀಡಿ ಗೌರವಿಸಲಾಯಿತು. ಕರು ವಿಭಾಗದಲ್ಲಿ ರೈತರಾದ ಮಂಜುನಾಥ, ಪುಷ್ಪಾ, ಕೆ.ರಮೇಶ, ಹೊನ್ನೂರಪ್ಪ ಎಂಬುವರಿಗೆ ಕ್ರಮವಾಗಿ ಬಹುಮಾನ ವಿತರಿಸಲಾಯಿತು.

ಉತ್ತಮವಾಗಿ ಹಸುಗಳನ್ನು ಸಾಕಿ ಬಹುಮಾನ ಪಡೆದುಕೊಂಡ ರೈತರಿಗೆ 20 ಲೀಟರ್ ಹಾಲು ತುಂಬುವ ಕ್ಯಾನ್, ಜಂತು ಹುಳು ನಿವಾರಣೆ ಔಷಧ, ಮೇವು ಲಿಕ್ವಿಡ್ ಪದಾರ್ಥಗಳನ್ನು ವಿತರಿಸಲಾಯಿತು. ತೀರ್ಪಗಾರರಾಗಿ ಪಶು ಇಲಾಖೆಯ ಡಾ.ರಂಗಸ್ವಾಮಿ, ಡಾ.ವಿಜಯಕುಮಾರ್, ಡಾ.ರಾಜಣ್ಣ ಕಾರ್ಯನಿರ್ವಹಿಸಿದ್ದರು.

ಮನವಿ: ಚಳ್ಳಕೆರೆ ತಾಲೂಕಿನ 8 ಹಾಲು ಉತ್ಪಾದನಾ ಸಂಘಗಳಿಗೆ ನಿವೇಶನ ಸೌಲಭ್ಯ ಕಲ್ಪಿಸಬೇಕು. ರೈತರಿಗೆ ಪ್ರತಿ ಲೀಟರ್​ಗೆ ನೀಡುವ 5 ರೂ 2021-23ರ ಅವಧಿಯ ಪ್ರೋತ್ಸಾಹ ಧನ ಬಾಕಿಯಾಗಿ ಉಳಿದಿದೆ. ಅದೇ ರೀತಿ ಶಾಲಾ ಮತ್ತು ಅಂಗನವಾಡಿಗಳಿಗೆ ಸರಬರಾಜು ಮಾಡಿರುವ ಹಾಲಿನ ಪೌಡರ್ ಮೊತ್ತ ಬಾಕಿಯಿದೆ. 18 ಕೋಟಿ ರೂ. ಜಿಲ್ಲಾ ಪಂಚಾಯಿತಿಯಿಂದ ಬಿಡುಗಡೆ ಆಗಬೇಕಿದೆ. ಕೂಡಲೇ ಬಾಕಿ ಹಣ ಬಿಡುಗಡೆಗೆ ಸರ್ಕಾರದ ಹಂತದಲ್ಲಿ ಪ್ರಸ್ತಾಪಿಸಬೇಕು ಎಂದು ಶಾಸಕರಿಗೆ ಮನವಿ ಸಲ್ಲಿಸಿದರು.

ನರಹರಿ ಸದ್ಗುರು ಪೀಠದ ಡಾ.ವೈ.ರಾಜರಾಮ್ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಬಿ.ಸಿ.ಸಂಜೀವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಮಂಗಳಮ್ಮ, ನಗರಸಭೆ ಸದಸ್ಯ ಬಿ.ಟಿ.ರಮೇಶ್​ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಬಿ.ಶಶಿಧರ, ಜಿ.ಪಿ.ರೇವಣಸಿದ್ದಪ್ಪ, ಪಿಡಿಒ ಎಂ.ರಾಮಚಂದ್ರಪ್ಪ, ಡಾ.ಟಿ.ಎಸ್. ರೇವಣ್ಣ, ಡಾ.ಎನ್.ಕುಮಾರ್, ಡಾ.ಶ್ರೀನಿವಾಸ್​ಬಾಬು, ಡಾ.ಬಿ.ಕೆ.ನರೇಶ್, ಡಾ.ಕೆ.ಪಿ.ಸಂಜಯ್, ಬಿ.ವಿ.ಚಿದಾನಂದ ಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net