

ಬಂಗಾರಪೇಟೆ: ಪಟಾಕಿ ಚೀಟಿ ಹೆಸರಿನಲ್ಲಿ ಸಾಮಗ್ರಿ ನೀಡುವುದಾಗಿ ಹೇಳಿ ಖಾತೆಗೆ ಹಣ ಹಾಕಿಸಿಕೊಂಡ ಆಸಾಮಿ ನಾಲ್ಕೆ$ದು ದಿನಗಳಿಂದ ಕಣ್ಮರೆಯಾಗಿದ್ದು, ಚೀಟಿ ನೆಪದಲ್ಲಿ ಕೋಟ್ಯಂತರ ರೂಪಾಯಿ ವಂಚಿಸಲಾಗಿದೆ ಎನ್ನಲಾಗಿದೆ.
ಪಟ್ಟಣದ ಭರತ್ ಎಂಬುವವರ ಒಡೆತನದ ಶ್ರೀ ಚೌಡೇಶ್ವರಿ ಟ್ರೇಡರ್ಸ್ ಮತ್ತು ಡೀರ್ಲಸ್ ಎಂಬ ಹೆಸರಿನ ಸಂಸ್ಥೆಗೆ ಸುಮಾರು 15 ರಿಂದ 20 ಸಾವಿರ ಜನರು ತಿಂಗಳಿಗೆ 500 ರೂ. ನಂತೆ ವರ್ಷಕ್ಕೆ ತಲಾ 6 ಸಾವಿರ ರೂ.ವರೆಗೆ ಚೀಟಿ ಕಟ್ಟಿದ್ದರು. ಚೀಟಿ ಕಟ್ಟಿದವರಿಗೆ ವಿವಿಧ ಸಾಮಗ್ರಿ ನೀಡುವ ಆಮಿಷವೊಡ್ಡಲಾಗಿತ್ತು. ಹಬ್ಬ ಹತ್ತಿರ ಬರುತ್ತಿದ್ದಂತೆ ಹಣ ಕಟ್ಟಿಸಿಕೊಂಡವರು ನಾಪತ್ತೆಯಾಗಿದ್ದು, ಈಗ ಪಟ್ಟಣದ ಪುರಸಭೆ ಕಚೇರಿ ರಸ್ತೆಯಲ್ಲಿರುವ ಸಂಸ್ಥೆಯ ಕಚೇರಿ ಬಳಿ ಚೀಟಿ ಕಟ್ಟಿದ ಸಾವಿರಾರು ಮಂದಿ ಹಗಲು&ರಾತ್ರಿ ಎನ್ನದೇ ಜಮಾಯಿಸಿ ಅಲ್ಲೇ ಬಿಡಾರ ಹೂಡಿದ್ದಾರೆ.
ಕೋಲಾರ, ಬಂಗಾರಪೇಟೆ, ಕೆಜಿಎಫ್, ಮುಳಬಾಗಿಲು, ಚಿಂತಾಮಣಿ, ಹೊಸಕೋಟೆ, ಬೆಂಗಳೂರು ಸೇರಿ ಸುತ್ತಮುತ್ತಲಿನ ತಾಲೂಕುಗಳ ಸಾವಿರಾರು ಮಂದಿ ಏಜೆಂಟ್ಗಳು ಹಣ ಸಂಗ್ರಹಿಸಿ ಭರತ್ಗೆ ಪಾವತಿಸಿದ್ದಾರೆ. ಏಜೆಂಟ್ಗಳು ಸಂಸ್ಥೆ ಹೆಸರಿನಲ್ಲಿದ್ದ ಖಾತೆಗೆ ಡಿಜಿಟಲ್ ಪೇಮೆಂಟ್ ಮಾಡಿದ್ದು, 10 ರಿಂದ 12 ಕೋಟಿ ರೂ. ಜಮೆ ಆಗಿದೆ ಎಂದು ಹೇಳಲಾಗುತ್ತಿದೆ.
ಆಮಿಷ ತಂದಿಟ್ಟ ಸಂಕಷ್ಟ
ಒಬ್ಬ ಏಜೆಂಟ್ 30 ಚೀಟಿದಾರರನ್ನು ನೋಂದಾಯಿಸಿದರೆ ಅಂತಹ ಏಜೆಂಟ್ಗೆ 1 ಚೀಟಿ ಉಚಿತ ನೀಡಲಾಗುವುದು ಎಂಬ ಆಮಿಷ ಒಡ್ಡಿದ್ದ ಹಿನ್ನೆಲೆಯಲ್ಲಿ ಒಬ್ಬೊಬ್ಬ ಏಜೆಂಟ್ 30 ರಿಂದ 600ಕ್ಕೂ ಹೆಚ್ಚು ಚೀಟಿದಾರರನ್ನು ನೋಂದಾಯಿಸಿದ್ದಾರೆ. ಚೀಟಿದಾರರಿಂದ ಹಣ ಪಡೆದು ಭರತ್ ಸಂಸ್ಥೆಯ ಖಾತೆಗೆ ವರ್ಗಾಯಿಸಲಾಗಿದೆ.
2 ತಿಂಗಳ ಹಿಂದೆಯೇ ಏಜೆಂಟರ ಮೂಲಕ ಚೀಟಿದಾರರಿಗೆ ಪಟಾಕಿ ಸಾಮಗ್ರಿ ಕಳುಹಿಸಿ ಕೊಡುವುದಾಗಿ ಭರತ್ ತಿಳಿಸಿದ್ದು, ಅದರಂತೆಯೇ ನೂರಾರು ಮಂದಿ ಏಜೆಂಟರು ಆತನ ಕಚೇರಿಗೆ ಆಗಮಿಸಿ ಸಂಪರ್ಕಿಸಿದಾಗ ಯಶವಂತಪುರ ಗೋದಾಮಿನಲ್ಲಿ ಸಾಮಗ್ರಿಗಳ ಪ್ಯಾಕಿಂಗ್ ನಡೆಯುತ್ತಿದೆ ಎಂದು ಹೇಳಿ ದಿನ ದೂಡಿದ್ದಾನೆ. ದೀಪಾವಳಿ ಹತ್ತಿರ ಬರುತ್ತಿದ್ದಂತೆಯೇ ಭರತ್ ಕಚೇರಿ ಕಡೆ ಬರುವುದನ್ನು ಕಡಿಮೆ ಮಾಡಿ, ಏಜೆಂಟ್ರ ಸಂಪರ್ಕಕ್ಕೆ ಸಿಗದೆ ಇರುವುದು ಚೀಟಿದಾರರಲ್ಲಿ ಆತಂಕ ಸೃಷ್ಟಿಸಿದೆ.
ಏಜೆಂಟ್ಗಳಿಗೂ ಆತಂಕ
ಚೀಟಿ ಕಟ್ಟಿದವರೆಲ್ಲರೂ ಏಜೆಂಟ್ಗಳ ಮೂಲಕ ಕಟ್ಟಿದ್ದು, ಈಗ ಕಚೇರಿ ಬಳಿ ಅಲೆದಾಡಿದರೂ ಭರತ್ ಸುಳಿವು ಸಿಗದೆ ಇರುವುದರಿಂದ ಚೀಟಿ ಹಾಕಿರುವವರು ಏಜೆಂಟರಿಗೆ ತರಾಟೆ ತೆಗೆದುಕೊಂಡು ಚೀಟಿ ಹಣ ವಾಪಸ್ ಕೊಡಿ, ಇಲ್ಲವೇ ಪಟಾಕಿ ಸಾಮಗ್ರಿ ಕೊಡಿ ಎಂದು ಬೆನ್ನು ಬಿದ್ದಿದ್ದಾರೆ.
ಪಟಾಕಿ ಸಾಮಗ್ರಿಗಳು
ಎಸ್.ಎನ್.ಅಕ್ಕಿ 25 ಕೆಜಿ, ಹಂಸ ಬ್ರಾಂಡ್ ಅಕ್ಕಿ 25 ಕೆಜಿ, ಗೋಲ್ಡ್ ವಿನ್ನರ್ ಆಯಿಲ್ 15 ಕೆಜಿ, ಸಕ್ಕರೆ 5 ಕೆಜಿ, ಮೈದಾ 5 ಕೆಜಿ, ಗೋದಿಹಿಟ್ಟು 5 ಕೆಜಿ, ಬೆಲ್ಲ 3 ಕೆಜಿ, ಕೆಂಪು ಅಕ್ಕಿ 3 ಕೆಜಿ, ರವೆ 3 ಕೆಜಿ, ತೊಗರಿ ಬೇಳೆ 3 ಕೆಜಿ, ಉದ್ದಿನಬೇಳೆ 1 ಕೆಜಿ, ಹೆಸರುಕಾಳು 1 ಕೆಜಿ, ಕಡಲೆ 1 ಕೆಜಿ, ಬಟಾಣಿ 1 ಕೆಜಿ, ಅವಲಕ್ಕಿ 1 ಕೆಜಿ, ಕಡಲೆ ಹಿಟ್ಟು 1 ಕೆಜಿ, ಕಲ್ಲುಪ್ಪು 1 ಕೆಜಿ, ಕಳ್ಳೆ ಪೊಪ್ಪು ತಲಾ ಒಂದು ಕೆಜಿ, ಸಬ್ಬಕ್ಕಿ ನೂಡಲ್ಸ್, ಸೊಯಾ ಬೀನ್ಸ್, ಶುಂಠಿ ಬೆಳ್ಳುಳ್ಳಿ ಪೇಸ್ಟ್ ತಲಾ 250 ಗ್ರಾಮ್, ದ್ರಾಕ್ಷಿ&ಗೋಡಂಬಿ, ತುಪ್ಪ, ಟೀ ಪುಡಿ, ಹರಿಶಿನ ಪುಡಿ, ಮೆಣಸಿನ ಪುಡಿ, ದನಿಯಾ ಪುಡಿ, ಸಾಂಬರ್ ಪುಡಿ, ಪುಳಿಯೊಗರೆ ತಲಾ 100 ಗ್ರಾಂ, ರಸಂ ಪುಡಿ, ಚಿಕನ್ ಮಸಾಲ, ಮಟನ್ ಮಸಾಲ, ಗರಂ ಮಸಾಲ, ಬಿಳಿ ಎಳ್ಳು, ಸೋಂಪು, ಮೆಣಸು, ಜೀರಿಗೆ, ಸಾಸಿವೆ, ಮೆಂತ್ಯ ತಲಾ 50 ಗ್ರಾಂ, ಸೇಮಿಯಾ, ಹರಿಶಿಣ ಕುಂಕುಮ ತಲಾ ಎರಡು ಪ್ಯಾಕೆಟ್, ಅಪ್ಪಳ, ಉಪ್ಪಿನ ಕಾಯಿ, ಹರಿಶಿನ ಕೊಂಬು, ನೋಮು ಅಡಕೆ, ನೋಮು ದಾರ ಒಂದು ಪ್ಯಾಕೆಟ್, ಸ್ವೀಟ್ ಬಾಕ್ಸ್, ಹಸಿರು ಪಟಾಕಿ ತಲಾ ಒಂದು ಬಾಕ್ಸ್ ಸೇರಿ ಒಟ್ಟು 55 ಸಾಮಗ್ರಿ ನೀಡಲಾಗುವುದು ಎಂದು ಕಾರ್ಡ್ನಲ್ಲಿ ತಿಳಿಸಲಾಗಿದೆ. ಹಂಸ ಬ್ರಾ$್ಯಂಡ್ ಅಕ್ಕಿ ಮತ್ತು ಸ್ಟೀಲ್ ಮೂಡಿ ಬಕೇಟ್ ಬೇಡವಾದಲ್ಲಿ ಬದಲಾಗಿ ಸಿಂಗಲ್ ಗ್ಯಾಸ್ ಸ್ಟೌ ಅಥವಾ ರಾಗಿ ಕಳಶ ಬಿಂದಿಗೆ (ವರಲಕ್ಷಿ$್ಮ ಬಿಂದಿಗೆ) ಅಥವಾ 3 ಕೆಜಿ ಪಲಾವ್ ಬಿಂದಿಗೆ ನೀಡಲಾಗುವುದು ಎಂದು ಕಾರ್ಡ್ನಲ್ಲಿ ತಿಳಿಸಿದ್ದಾರೆ.
ಕೋಟ್ಯಂತರ ವ್ಯವಹಾರ! ಐಟಿ ಅಧಿಕಾರಿಗಳೆಲ್ಲಿ?
ಪಟಾಕಿ ಚೀಟಿ ವ್ಯವಹಾರದಲ್ಲಿ ಕೋಟ್ಯಾಂತರ ರೂ. ವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದರೂ ಆದಾಯ ತೆರಿಗೆ ಅಧಿಕಾರಿಗಳು ಕಾನೂನು ಕ್ರಮಕ್ಕೆ ಏಕೆ ಮುಂದಾಗುತ್ತಿಲ್ಲ. ಸಾವಿರಾರು ಮಂದಿ ಡಿಜಿಟಲ್ ಪೇಮೆಂಟ್ ಮಾಡಿ ವ್ಯವಹಾರ ನಡೆಸಿದ್ದರೂ ಇವರಿಗೆ ಮಾಹಿತಿಯೇ ಇಲ್ಲವೇ?. ಪಟಾಕಿ ಚೀಟಿ ಹೆಸರಲ್ಲಿ ಮಿತಿ ಮೀರಿ ಹಣದ ವ್ಯವಹಾರ ನಡೆದಿರುವುದು ಕಂಡು ಬರುತ್ತಿದ್ದರೂ ಐಟಿ ಅಧಿಕಾರಿಗಳು ಏಕೆ ಕ್ರಮಕ್ಕೆ ಮುಂದಾಗಿಲ್ಲ ಅನ್ನೋದು ನಾಗರಿಕರ ಪ್ರಶ್ನೆಯಾಗಿದೆ. ಆದರೆ, ಪೊಲೀಸ್ ಠಾಣೆಗೆ ಇದುವರೆವಿಗೂ ದೂರು ನೀಡಿದೆ ಇರುವುದು ಆಶ್ಚರ್ಯವನ್ನುಂಟು ಮಾಡಿದೆ.