ಮದ್ದೂರು ಕ್ಷೇತ್ರ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ

AUGUST-2025-13-03
ಪಟ್ಟಣದ ಮದ್ದೂರಮ್ಮ ದೇವಾಲಯದ ಬಳಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಬಿಡುಗಡೆಗೊಂಡಿರುವ ಐದು ಕೋಟಿ ರೂ. ವೆಚ್ಚದ ಭೈರನ್ ನಾಲೆಗೆ ಸೇರುವ ರಸ್ತೆ ಮತ್ತು ಆಂತರಿಕ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಎಂ.ಉದಯ ಭೂಮಿ ಪೂಜೆ ನೆರವೇರಿಸಿದರು.
Published on

 ಮದ್ದೂರು: ರಾಜ್ಯದ 224 ಕ್ಷೇತ್ರಗಳಲ್ಲಿ ಅತಿ ಹೆಚ್ಚು ಅನುದಾನ ತಂದಿರುವ ಮೂಲಕ ಮದ್ದೂರು ಕ್ಷೇತ್ರವು ಪ್ರಥಮ ಸ್ಥಾನದಲ್ಲಿದ್ದು, ಇದರಿಂದಾಗಿ ಕ್ಷೇತ್ರದಾದ್ಯಂತ ಕೋಟ್ಯಂತರ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಶಾಸಕ ಕೆ.ಎಂ.ಉದಯ ತಿಳಿಸಿದರು.

ಪಟ್ಟಣದ ಮದ್ದೂರಮ್ಮ ಕಲ್ಯಾಣ ಮಂಟಪದ ಬಳಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಬಿಡುಗಡೆಗೊಂಡಿರುವ ಸುಮಾರು 5 ಕೋಟಿ ರೂ. ವೆಚ್ಚದ ಭೈರನ್ ನಾಲೆಗೆ ಸೇರುವ ರಸ್ತೆ ಮತ್ತು ಆಂತರಿಕ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಈ ಹಿಂದಿನ ಜನಪ್ರತಿನಿಧಿಗಳು ಸಮರ್ಪಕ ಮತ್ತು ಶಾಶ್ವತ ಯೋಜನೆಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಕ್ಷೇತ್ರದಾದ್ಯಂತ ಹಲವಾರು ಸಮಸ್ಯೆಗಳು ಕಾಣಸಿಗುತ್ತಿವೆ. ನಿತ್ಯ ಒಂದಿಲ್ಲೊಂದು ಸಮಸ್ಯೆಗಳ ಬಗ್ಗೆ ಸ್ಥಳೀಯ ನಿವಾಸಿಗಳು ತಮ್ಮ ಗಮನಕ್ಕೆ ತರುತ್ತಿದ್ದು ಈ ಸಂಬಂಧ ವಿವಿಧ ಇಲಾಖೆಯ ಸಚಿವರೊಟ್ಟಿಗೆ ಚರ್ಚಿಸಿ ಸುಮಾರು 300 ಕೋಟಿ ರೂ.ಗೂ ಹೆಚ್ಚು ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪಟ್ಟಣ ಬೆಳೆದಂತೆ ಅಭಿವೃದ್ಧಿ ಕುಂಠಿತಗೊಂಡಿದ್ದು, ಪ್ರತಿ ವಾರ್ಡ್‌ನಲ್ಲೂ ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯುತ್ ಇನ್ನಿತರ ಸಮಸ್ಯೆಗಳು ಕಾಣಸಿಗುತ್ತಿವೆ. ಇಂತಹ ಸಮಸ್ಯೆಗಳಿಗೆ ಮುಕ್ತಿ ನೀಡಬೇಕೆಂಬ ಉದ್ದೇಶದಿಂದ ಪ್ರತಿ ವಾರ್ಡ್‌ಗೂ ಭೇಟಿ ನೀಡಿ, ಸ್ಥಳೀಯರ ಸಮಸ್ಯೆಗಳನ್ನು ಆಲಿಸಿ ಹಂತ ಹಂತವಾಗಿ ಅನುದಾನ ಬಿಡುಗಡೆಗೊಳಿಸಿ ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.

ಪುರಸಭೆ ವ್ಯಾಪ್ತಿಯ ವ್ಯವಸ್ಥೆಯನ್ನು ಸರಿಪಡಿಸಬೇಕೆಂಬ ನಿಟ್ಟಿನಲ್ಲಿ ಮುಖ್ಯಮಂತ್ರಿ ಜತೆಗೆ ಚರ್ಚಿಸಿ ಸುಮಾರು 40 ಕೋಟಿ ರೂ.ಗಳ ವಿಶೇಷ ಅನುದಾನ ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದು, ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಮುಂದಿನ ತಿಂಗಳೊಳಗಾಗಿ ಅನುದಾನ ಬಿಡುಗಡೆಯಾಗಲಿದ್ದು, ಪಟ್ಟಣದ ಸಮಗ್ರ ಅಭಿವೃದ್ಧಿಗೆ ಕ್ರಿಯಾಯೋಜನೆ ತಯಾರಿಸಲಾಗುವುದು ಎಂದರು.

ಈ ಹಿಂದೆ ಕೈಗೊಂಡ ಯುಜಿಡಿ ಸಂಪರ್ಕ, ತ್ಯಾಜ್ಯ ನೀರು, ಸಮರ್ಪಕವಾಗಿ ಹರಿಯದೆ ಪಟ್ಟಣದ ಅವ್ಯವಸ್ಥೆಗೆ ಕಾರಣವಾಗಿದ್ದು, ಈ ಸಂಬಂಧ 5 ಕೋಟಿ ರೂ. ವೆಚ್ಚದ ವಿಶೇಷ ಅನುದಾನವನ್ನು ಬಿಡುಗಡೆಗೊಳಿಸಿ ಯು.ಜಿ.ಡಿ ಸಂಪರ್ಕವನ್ನು ದುರಸ್ತಿಗೊಳಿಸಲು ಕ್ರಮ ವಹಿಸುವುದಾಗಿ ಹೇಳಿದರು.

ಮದ್ದೂರು ವಿಧಾನಸಭಾ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಬೇಕೆಂಬ ನಿಟ್ಟಿನಲ್ಲಿ ತಾವು ದಿನದ 24 ಗಂಟೆಯೂ ನಿರಂತರವಾಗಿ ಶ್ರಮಿಸುತ್ತಿದ್ದು, ತಮ್ಮ ಮೇಲೆ ವಿಶ್ವಾಸವಿಟ್ಟ ಪಟ್ಟಣ ವ್ಯಾಪ್ತಿಯ ನಿವಾಸಿಗಳು ತಮಗೆ ಹೆಚ್ಚಿನ ಮತ ನೀಡಿದ್ದು ವಿಶ್ವಾಸಕ್ಕೆ ಧಕ್ಕೆ ಬರದಂತೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸಿದರು.

ಕಳೆದ 2 ದಶಕಗಳಿಂದಲೂ ಮದ್ದೂರಮ್ಮ ಬಡಾವಣೆ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದ ಹಿನ್ನೆಲೆಯಲ್ಲಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ಭಾಗದ ಸಂಪರ್ಕ ಸೇರುವ ರಸ್ತೆಗಳು ಚರಂಡಿ, ಇನ್ನಿತರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಿದ್ದು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸುವ ಭರವಸೆ ನೀಡಿದರು.

ಪುರಸಭೆ ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ, ಸದಸ್ಯರಾದ ಬಿ.ಸಿ.ಸರ್ವಮಂಗಳಾ, ಕಮಲ್‌ನಾಥ್, ವೆಂಕಟೇಶ್, ಎಂ.ಬಿ.ಸಚಿನ್, ಬಸವರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಡಿ.ಮಹಾಲಿಂಗಯ್ಯ, ಗ್ರಾ.ಪಂ. ಮಾಜಿ ಅಧ್ಯಕ್ಷ ಸಿದ್ದರಾಮು, ಪುರಸಭೆ ಮಾಜಿ ಅಧ್ಯಕ್ಷ ಇಂತಿಯಾಜ್ ಉಲ್ಲಾಖಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಲುವರಾಜು, ಯುವ ಕಾಂಗ್ರೆಸ್ ಅಧ್ಯಕ್ಷ ಕೀರ್ತಿ, ಮುಖಂಡರಾದ ಅರುಣ್, ಎಂ.ಎಸ್.ಸಂತೋಷ್‌ಗೌಡ, ಫೈರೋಜ್‌ಖಾನ್, ಎಂ.ಹೊಂಬಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net