

ಶಿರಸಿ: ಕ್ಷೇತ್ರದ ಅಭಿವೃದ್ಧಿ ನನ್ನ ಮೊದಲ ಆದ್ಯತೆಯಾಗಿದ್ದು, ನಗರ ಹಾಗೂ ಗ್ರಾಮೀಣ ಭಾಗ ಎಂಬ ತಾರತಮ್ಯವಿಲ್ಲದೇ ಸರ್ಕಾರದಿಂದ ಮೊದಲ ಹಂತದಲ್ಲಿ ಕೋಟ್ಯಂತರ ರೂ. ಅನುದಾನ ಮಂಜೂರಿ ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ತಾಲೂಕಿನ ಕುಳವೆ ಗ್ರಾಪಂ ವ್ಯಾಪ್ತಿಯ ಚೌಡಿಹಳ್ಳ ಸೇತುವೆಯ ತಡೆಗೋಡೆ ನಿರ್ವಣಕ್ಕೆ 2021-22 ನೇ ಸಾಲಿನ 5054 ಗ್ರಾಮೀಣ ರಸ್ತೆಗಳು ಯೋಜನೆಯಡಿ ಮಂಜೂರಾದ 20 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಸಣ್ಣ ನೀರಾವರಿ ಇಲಾಖೆಗೆ 5 ಕೋಟಿ ರೂ., ಲೋಕೋಪಯೋಗಿ ಇಲಾಖೆಗೆ 40 ಕೋಟಿ ರೂ., ಸೇತುವೆ ನಿರ್ವಣಕ್ಕೆ 11 ಕೋಟಿ ರೂ. ಮಂಜೂರಿ ಮಾಡಿಸಿದ್ದೇನೆ. ಕುಳವೆ ಗ್ರಾಪಂ ಭಾಗದ ನಾಗರಿಕರು ಚೌಡಿಹಳ್ಳ ಸೇತುವೆಯ ತಡೆಗೋಡೆ ನಿರ್ವಣಕ್ಕೆ 20 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ಗ್ರಾಪಂ ಸದಸ್ಯ ಸಂದೇಶ ಭಟ್ಟ ಬೆಳಖಂಡ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಸಕರು ತಮ್ಮ ಒಂದು ವರ್ಷದ ಅವಧಿಯಲ್ಲಿ ಕುಳವೆ ಗ್ರಾಪಂ ವ್ಯಾಪ್ತಿಗೆ ವಿವಿಧ ಇಲಾಖೆಯ ಮೂಲಕ 56 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ತರಲು ಒದಗಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ಇನ್ನಷ್ಟು ಅನುದಾನ ತರಿಸಲು ನಾವೆಲ್ಲರೂ ಪ್ರಯತ್ನಿಸಬೇಕು ಎಂದರು.
ಗ್ರಾಪಂ ಅಧ್ಯಕ್ಷ ರಂಜಿತಾ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಗ್ರಾಪಂ ಉಪಾಧ್ಯಕ್ಷ ಶ್ರೀನಾಥ ಶೆಟ್ಟಿ, ಪ್ರಮುಖರಾದ ನಾಗೇಶ ಹೆಗಡೆ ಕೆಂಚಗದ್ದೆ, ಭರತ ಹೆಗಡೆ ಕೆಂಚಗದ್ದೆ, ಪ್ರತಿಭಾ ಭಟ್ಟ, ಎಂ.ಜಿ. ಭಟ್ಟ ಬೆಳಖಂಡ, ಜಾಫಿ ಪೀಟರ್, ಇತರರಿದ್ದರು.
56 ಲಕ್ಷ ರೂ. ವೆಚ್ಚದ ಕಾಮಗಾರಿ ಕೈಪಿಡಿ ಬಿಡುಗಡೆ:
ಭೀಮಣ್ಣ ನಾಯ್ಕ ಶಾಸಕರಾಗಿ ಆಯ್ಕೆಯಾದ ಒಂದು ವರ್ಷ ಅವಧಿಗೆ ಕುಳವೆ ಗ್ರಾಪಂ ವ್ಯಾಪ್ತಿಗೆ ವಿವಿಧ ಯೋಜನೆಯ ಮೂಲಕ ಮಂಜೂರಿ ಮಾಡಿದ 56 ಲಕ್ಷ ರೂ. ವೆಚ್ಚದ ಕಾಮಗಾರಿಯ ಕೈಪಿಡಿ ಬಿಡುಗಡೆಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿದ ಶಾಸಕರು, ಹಂತ ಹಂತವಾಗಿ ಸಮಸ್ಯೆ ಬಗೆಹರಿಸಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.