

ಮುಖ್ಯಮಂತ್ರಿ ತವರು ಜಿಲ್ಲೆಯಲ್ಲೇ ಸ್ಥಳೀಯ ಸಂಸ್ಥೆ ಸಾಹಿತ್ಯಾಸಕ್ತರು, ಪುಸ್ತಕ ಪ್ರೇಮಿಗಳು ಹಾಗೂ ಓದುಗರನ್ನು ಕಡೆಗಣಿಸಿದೆ.
ನಗರದ ಸ್ಥಳೀಯ ಸಂಸ್ಥೆ ವತಿಯಿಂದ (ಮೈಸೂರು ಮಹಾನಗರ ಪಾಲಿಕೆ) ನಗರ ಗ್ರಂಥಾಲಯ ಪ್ರಾಧಿಕಾರದ ನಿಧಿಗೆ ಪಾವತಿಸಬೇಕಾದ ಕೋಟ್ಯಂತರ ರೂ. ಕರವನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಪರಿಣಾಮ, ಗ್ರಂಥಾಲಯಗಳ ನಿರ್ವಹಣೆ ಕಷ್ಟವಾಗುತ್ತಿದೆ. ಕಳೆದ ಮೇ 31 ರವರೆಗೆ ನಗರ ಪಾಲಿಕೆ ಗ್ರಂಥಾಲಯದ 21 ಕೋಟಿ ರೂ. ಕರವನ್ನು ಬಾಕಿ ಉಳಿಸಿಕೊಂಡಿದೆ. ಇದರಿಂದಾಗಿ ನಗರ ವ್ಯಾಪ್ತಿಯಲ್ಲಿ ಗ್ರಂಥಾಲಯಕ್ಕೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ನಿರ್ವಹಣೆಯೂ ಕಷ್ಟವಾಗುತ್ತಿದೆ. ಪೀಪಲ್ಸ್ ಪಾರ್ಕ್ ಆವರಣದ ಗ್ರಂಥಾಲಯದ ನೂತನ ಕಟ್ಟಡಕ್ಕೆ ಇನ್ನೂ ಹೆಚ್ಚಿನ ಮೂಲಸೌಕರ್ಯ ಕಲ್ಪಿಸಲು ಅಸಾಧ್ಯವಾಗುತ್ತಿದೆ. ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಅವರ ತವರು ಮೈಸೂರಿನಲ್ಲೇ ಇಂತಹ ಪ್ರಸಂಗ ಆಕ್ಷೇಪಾರ್ಹವಾಗಿದೆ.
2019-20ನೇ ಸಾಲಿನಲ್ಲಿ ಪ್ರಾರಂಭಿಕ ಶುಲ್ಕ 17.83 ಕೋಟಿ ರೂ., ಆಸ್ತಿ ತೆರಿಗೆಯಲ್ಲಿ ಸಂಗ್ರಹಿಸಲಾದ ಗ್ರಂಥಾಲಯ ಕರದಲ್ಲಿ 2.74 ಕೋಟಿ ರೂ. ಸೇರಿದಂತೆ ಒಟ್ಟು 22 ಕೋಟಿ ರೂ. ನೀಡಬೇಕಿತ್ತು. ಆದರೆ ಆಗ 4.15 ಕೋಟಿ ರೂ. ಮಾತ್ರ ನೀಡಿ, 18.42 ಕೋಟಿ ರೂ. ಬಾಕಿ ಉಳಿಸಿಕೊಂಡಿತ್ತು. 2020-21ನೇ ಸಾಲಿನಲ್ಲಿ ಪ್ರಾರಂಭಿಕ ಶುಲ್ಕ 18.42 ಕೋಟಿ ರೂ. ಸೇರಿದಂತೆ ಆಸ್ತಿ ತೆರಿಗೆಯಲ್ಲಿ ಸಂಗ್ರಹಿಸಲಾದ ಗ್ರಂಥಾಲಯ ಕರದಲ್ಲಿ 3.2 ಕೋಟಿ ರೂ. ನೀಡಬೇಕಿತ್ತು. ಅದರಂತೆ 3.05 ಕೋಟಿ ರೂ. ನೀಡಲಾಗಿತ್ತು. 2021-22ನೇ ಸಾಲಿನಲ್ಲಿ ಪ್ರಾರಂಭಿಕ ಶುಲ್ಕ 19.33 ಕೋಟಿ ರೂ. ಸೇರಿದಂತೆ ಆಸ್ತಿ ತೆರಿಗೆಯಲ್ಲಿ ಸಂಗ್ರಹಿಸಲಾದ ಗ್ರಂಥಾಲಯ ಕರದಲ್ಲಿ 4.77 ಕೋಟಿ ರೂ. ನೀಡಬೇಕಿತ್ತು. ಆದರೆ 3 ಕೋಟಿ ರೂ. ಮಾತ್ರ ನೀಡಲಾಗಿತ್ತು. 2022-23ನೇ ಸಾಲಿನಲ್ಲೂ 3 ಕೋಟಿ ರೂ.ಗೂ ಹೆಚ್ಚಿನ ಕರ ಸಂಗ್ರಹಿಸಿದ್ದನ್ನು ನೀಡಬೇಕಿತ್ತು. ಪ್ರಸಕ್ತ ಸಾಲಿನ ಮೇ 31ರವರೆಗೆ ಒಟ್ಟು 23 ಕೋಟಿ ರೂ. ಕರ ಬಾಕಿ ಉಳಿಸಿಕೊಂಡಿತ್ತು. ಇತ್ತೀಚೆಗೆ 2 ಕೋಟಿ ರೂ. ಮಾತ್ರ ನೀಡಿದೆ. ಇನ್ನೂ 21 ಕೋಟಿ ರೂ.ಗೂ ಹೆಚ್ಚಿನ ಹಣವನ್ನು ಪಾಲಿಕೆ ಬಾಕಿ ಉಳಿಸಿಕೊಂಡಿದೆ.
ಕುವೆಂಪುನಗರ, ಸರಸ್ವತಿಪುರಂ, ಸಿದ್ಧಾರ್ಥನಗರ, ಲಕ್ಷ್ಮೀಪುರಂ, ಜಯಲಕ್ಷ್ಮೀಪುರಂ, ಜೆ.ಪಿ.ನಗರ, ಅಶೋಕಪುರಂ, ವಿಶ್ವೇಶ್ವರನಗರ, ಬಸವೇಶ್ವರ ರಸ್ತೆ, ಜಯನಗರ, ಸುಭಾಷ್‌ನಗರ, ಉದಯಗಿರಿ, ಹೆಬ್ಬಾಳ, ಗಾಂಧಿನಗರ, ಪಿ.ಕೆ. ಸ್ಯಾನಿಟೋರಿಯಂ, ವಿವೇಕಾನಂದನಗರ, ರಾಮಕೃಷ್ಣನಗರ ಸೇರಿದಂತೆ ನಗರದ ವಿವಿಧಡೆ 35ಕ್ಕೂ ಹೆಚ್ಚು ಗ್ರಂಥಾಲಯಗಳಿವೆ. ಈ ಪೈಕಿ 17 ಶಾಖಾ ಗ್ರಂಥಾಲಯಗಳು, ಉಳಿದವು ಸೇವಾ ಕೇಂದ್ರ ಗ್ರಂಥಾಲಯಗಳಾಗಿವೆ. ಒಂದು ಇ-ಗ್ರಂಥಾಲಯ, ಒಂದು ಸಂಚಾರಿ ಗ್ರಂಥಾಲಯ ವಾಹನ, 7 ವಾಚನಾಲಯಗಳು, ಒಂದು ಸಮುದಾಯ ಮಕ್ಕಳ ಕೇಂದ್ರ, 2 ಅನುದಾನಿತ ಕೇಂದ್ರಗಳಿವೆ. ಈ ಪೈಕಿ ಶಾಖಾ ಗ್ರಂಥಾಲಯದಲ್ಲಿ ಮಾತ್ರ ಸಿಬ್ಬಂದಿ ಇದ್ದಾರೆ. ಉಳಿದ ಸೇವಾಕೇಂದ್ರ ನೋಡಿಕೊಳ್ಳಲು ಸಿಬ್ಬಂದಿ ಸಮಸ್ಯೆ ಕಾಡುತ್ತಿದೆ.
ಗ್ರಂಥಾಲಯಗಳಲ್ಲಿ 1975ರಲ್ಲಿ ಇದ್ದಷ್ಟೇ ಸಿಬ್ಬಂದಿ ಇದ್ದಾರೆ. ಸದ್ಯ ನಗರದ ಗ್ರಂಥಾಲಯ ಇಲಾಖೆಯಲ್ಲಿ 105 ಹುದ್ದೆಗಳಿಗೆ ಅವಕಾಶವಿದೆ. ಅದರಲ್ಲಿ ಕೇವಲ 18 ಸಿಬ್ಬಂದಿ ಇದ್ದು, ಉಳಿದ ಹುದ್ದೆಗಳು ಖಾಲಿ ಇವೆ. ಇದಲ್ಲದೆ ದಿನೇದಿನೆ ಗ್ರಂಥಾಲಯಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಹುದ್ದೆಗಳನ್ನು ಸರ್ಕಾರ ಸೃಷ್ಟಿ ಮಾಡಬೇಕು. ಆದರೆ ಆ ಕೆಲಸ ಮಾತ್ರ ಆಗುತ್ತಿಲ್ಲ. ಅಲ್ಲದೆ ಹಾಲಿ ಇರುವ ಸಿಬ್ಬಂದಿ ಸಂಖ್ಯೆಯೂ ಮರಣ ಇನ್ನಿತರ ಕಾರಣಗಳಿಂದ ಕಡಿಮೆಯಾಗುತ್ತಿದೆ. ಹೀಗಾಗಿ 60ಕ್ಕೂ ಹೆಚ್ಚು ತಾತ್ಕಾಲಿಕ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. ಈ ಎಲ್ಲ ಸಿಬ್ಬಂದಿಗೆ ಸಂಬಳ, ಗ್ರಂಥಾಲಯಗಳ ನಿರ್ವಹಣೆ, ಪುಸ್ತಕ ಖರೀದಿಯನ್ನು ಸ್ಥಳೀಯ ಸಂಸ್ಥೆಗಳು ನೀಡುವ ಕರದಿಂದಲೇ ಮಾಡಬೇಕಿದೆ. ಆದರೆ ಸದ್ಯ ಪಾಲಿಕೆ ಹೆಚ್ಚಿನ ಕರ ಬಾಕಿ ಉಳಿಸಿಕೊಂಡಿರುವುದರಿಂದ ತಾತ್ಕಾಲಿಕ ಸಿಬ್ಬಂದಿಗೆ ಸಂಬಳ ನೀಡುವುದು, ಗ್ರಂಥಾಲಯಗಳ ನಿರ್ವಹಣೆ ಕಷ್ಟವಾಗಿದೆ.
ಬಾಕಿ ಕರ ನೀಡದ ಕಾರಣ ನಗರದ ಅನೇಕ ಬಡಾವಣೆಗಳಲ್ಲಿ ಹೊಸ ಕಟ್ಟಡ ಸಿದ್ಧವಾಗಿದ್ದರೂ ಮೂಲಸೌಕರ್ಯ ಕಲ್ಪಿಸಲು ಸಂಪನ್ಮೂಲ ಇಲ್ಲದೆ ಗ್ರಂಥಾಲಯ ಆರಂಭಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ನಗರ ಗ್ರಂಥಾಲಯ ಉಪ ನಿರ್ದೇಶಕ ಬಿ.ಮಂಜುನಾಥ್.
ಸ್ಥಳೀಯ ಸಂಸ್ಥೆಗಳು ನಗರ ಗ್ರಂಥಾಲಯ ಪ್ರಾಧಿಕಾರ ನಿಧಿಗೆ ಪಾವತಿಸಬೇಕಾದ ಕರದ ಬಾಕಿ ಹಣವನ್ನು ನಾಲ್ಕು ವರ್ಷದಲ್ಲಿ ನಾಲ್ಕು ಕಂತುಗಳಾಗಿ ಪಾವತಿಸುವಂತೆ ಈ ಹಿಂದಿನ ಸರ್ಕಾರ ಆದೇಶಿಸಿತ್ತು. ಈ ಆದೇಶ ನೀಡಿಯೇ ಮೂರು ವರ್ಷ ಕಳೆದಿದೆ. ಈ ಆದೇಶದ ಪ್ರಕಾರ ಪಾಲಿಕೆ ಈವರೆಗೆ ಗ್ರಂಥಾಲಯಕ್ಕೆ 21 ಕೋಟಿ ರೂ. ನೀಡಬೇಕಿತ್ತು. ಆದರೆ, ಕರ ಬಾಕಿ ನೀಡದೆ ಸರ್ಕಾರದ ಆದೇಶವನ್ನು ಉಲ್ಲಂಘಿಸಲಾಗಿದೆ.
ಮಹಾನಗರ ಪಾಲಿಕೆ ನಗರ ಗ್ರಂಥಾಲಯ ಪ್ರಾಧಿಕಾರ ನಿಧಿಗೆ ಪಾವತಿಸಬೇಕಾದ 21 ಕೋಟಿ ರೂ. ಕರವನ್ನು ಬಾಕಿ ಉಳಿಸಿಕೊಂಡಿದೆ. ಪರಿಣಾಮ, ಗ್ರಂಥಾಲಯ ನಿರ್ವಹಣೆ ಕಷ್ಟವಾಗುತ್ತಿದೆ. ಬಾಕಿ ಕರ ನೀಡದ ಕಾರಣ ತಾತ್ಕಾಲಿಕವಾಗಿ ಸೇವೆ ಸಲ್ಲಿಸುತ್ತಿರುವ 60 ನೌಕರರರಿಗೆ ಸಂಬಳ ನೀಡುವುದು ಕಷ್ಟವಾಗಿದೆ. ಮುಖ್ಯವಾಗಿ ನಗರದ ಗ್ರಂಥಾಲಯಗಳಿಗೆ ತರಿಸುವ ನ್ಯೂಸ್ ಪೇಪರ್ ಬಿಲ್ ಕಟ್ಟಲೂ ಕಷ್ಟವಾಗುತ್ತಿದೆ.ಬಿ.ಮಂಜುನಾಥ್, ಉಪನಿರ್ದೇಶಕ, ನಗರ ಗ್ರಂಥಾಲಯ ಇಲಾಖೆ
ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸಂಗ್ರಹಿಸಿರುವ ಕರವನ್ನು ಗ್ರಂಥಾಲಯಕ್ಕೆ ನೀಡಲಾಗಿದೆ. ಆದರೆ ಅದಕ್ಕೂ ಹಿಂದಿನ ಕರ ಬಾಕಿ ಉಳಿದುಕೊಂಡಿದೆ. ಬಾಕಿ ಉಳಿದಿರುವ ಕರವನ್ನು ಹಂತ ಹಂತವಾಗಿ ನೀಡುವಂತೆ ಆಯುಕ್ತರಿಗೆ ತಿಳಿಸಿದ್ದೇನೆ. ಆದಷ್ಟು ಬೇಗ ಆ ಹಣವನ್ನು ಗ್ರಂಥಾಲಯಕ್ಕೆ ನೀಡಲಾಗುತ್ತದೆ. ಶಿವಕುಮಾರ್, ಮೇಯರ್