

ಮೈಸೂರು: ಮಗ ಮಾಡಿದ ಭಾರಿ ಮೊತ್ತದ ಸಾಲಕ್ಕೆ ತಾನು ಹೊಣೆ ಆಗಬೇಕು ಎಂದು ಹಣ ನೀಡಲು ನಿರಾಕರಿಸಿದ್ದ ಮಹಿಳೆಯ ಮನವೊಲಿಸುವಲ್ಲಿ ಯಶಸ್ವಿಯಾದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ರವೀಂದ್ರ ಹೆಗಡೆ ಸಾಲ ಮರು ಪಾವತಿಗೆ ಸಮ್ಮತಿಸುವಂತೆ ಮಾಡಿದರು.
ನಗರದ ಪೋರ್ಟ್ ಮೊಹಲ್ಲಾದ ಲಕ್ಷ್ಮಣ್ ಅವರು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ತನ್ನ 16 ಸ್ನೇಹಿತರಿಂದ 17 ಕೋಟಿ ರೂ. ಬೃಹತ್ ಮೊತ್ತದ ಸಾಲ ಪಡೆದಿದ್ದರು. ಸಾಲ ಪಡೆದಿದ್ದ ಹಣವನ್ನು ಲಕ್ಷ್ಮಣ್ ಅವರು ಜಮೀನು, ನಿವೇಶನ ಮತ್ತು ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡಿದ್ದರು. ಆದರೆ ಅವರು ಅಕಾಲಿಕ ನಿಧನರಾಗಿದ್ದರಿಂದ ಸಾಲ ಮರುಪಾವತಿಸಲು ಕುಟುಂಬದವರಿಗೆ ಸಾಧ್ಯವಾಗಿರಲಿಲ್ಲ.
ಸಾಲ ಮರುಪಾವತಿಗೆ ಸಾಲಕೊಟ್ಟವರು ಕೇಳಿದಾಗ ನಮಗೆ ಗೊತ್ತಿಲ್ಲದೆ ಮಗ ಮಾಡಿದ್ದ ಸಾಲಕ್ಕೆ ನಾನೇಕೆ ಹೊಣೆಯಾಗಬೇಕು. ಅವರ ತಪ್ಪಿಗೆ ನಾನೇಕೆ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಪ್ರಶ್ನಿಸಿದ್ದರಿಂದ ಸ್ನೇಹಿತರು ನ್ಯಾಯಾಲಯದ ಮೊರೆ ಹೋಗಿದ್ದರು.
ನ್ಯಾಯಾಲಯದ ಮೆಟ್ಟಿಲೇರಿದ್ದ ಸಾಲ ಕೊಟ್ಟವರು, ಕಳೆದ ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಅಲೆಯುತ್ತಿದ್ದರು. ಅಂತಿಮವಾಗಿ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ರಾಜೀ ಸಂಧಾನಕ್ಕೆ ಸಮ್ಮತಿಸಿದರು.
ಮೈಸೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ರವೀಂದ್ರ ಹೆಗಡೆ ಅವರು ಸಾಲ ಮರು ಪಾವತಿಗೆ ತಕರಾರು ತೆಗೆದಿದ್ದ ಮಹಿಳೆಗೆ ಕಾನೂನು ಪ್ರಕಾರ ಹೋದರೆ ಏನಾಗಬಹುದು ಎಂಬುದರ ಬಗ್ಗೆ ತಿಳಿ ಹೇಳಿ ಸೌಹಾದರ್ಯುತವಾಗಿ ಬಗೆಹರಿಸಿಕೊಂಡರೆ ಎಲ್ಲರಿಗೂ ಅನುಕೂಲ ಎಂದು ಸಲಹೆ ನೀಡಿ ಅವರ ಮನವೊಲಿಸುವಲ್ಲಿ ಯಶಸ್ವಿಯಾದರು. ಅದಕ್ಕೆ ಸಮ್ಮತಿಸಿದ ಮಹಿಳೆಯೂ ರಾಜೀ ಸಂಧಾನಕ್ಕೆ ಒಪ್ಪಿಗೆ ನೀಡಿ ಸಹಿ ಹಾಕಿದರು.
ಸರಳತೆ ಮರೆದ ನ್ಯಾಯಾಧೀಶರು
ರಾಜೀ ಸಂಧಾನಕ್ಕೆ ಸಮ್ಮತಿಸಿದ ಲಕ್ಷ್ಮಣ್ ತಾಯಿ, ಪತ್ನಿ ಮಹಡಿ ಹತ್ತಲು ಸಾಧ್ಯವಾಗದಿದ್ದರಿಂದ ನ್ಯಾಯಾಧೀಶ ರವೀಂದ್ರ ಹೆಗಡೆ ಅವರೇ ಕಲಾಪದ ಸಭಾಂಗಣದ ಮಹಡಿಯಿಂದ ಕೆಳಗಿಳಿದು ಬಂದು ತಮ್ಮ ಸಮ್ಮುಖದಲ್ಲಿ ಮಹಿಳೆಯರ ಸಮ್ಮತಿ ಪತ್ರದ ಸಹಿ ಪಡೆಯುವ ಮೂಲಕ ಸರಳತೆ ಮರೆದರು.
ಸಾಲ ಮರು ಪಾವತಿಗೆ ವಕೀಲರ ಮೂಲಕ ಒಪ್ಪಿಗೆ ಸೂಚಿಸಿದ ಮಹಿಳೆಯನ್ನು ನ್ಯಾಯಾಲಯದ ಹೊರ ಆವರಣದಲ್ಲಿ ನೇರವಾಗಿ ಭೇಟಿ ಮಾಡಿ, ರಾಜೀ ಸಂಧಾನ ಪತ್ರಕ್ಕೆ ಸಹಿ ಹಾಕಿಸಿದರು. ಅಲ್ಲದೆ ಕೇಸ್ ಹಾಕಿದ್ದ ವೃದ್ಧೆಗೂ ಸಹ ರಾಜೀ ಸಂಧಾನ ಪತ್ರಕ್ಕೆ ಸಹಿ ಹಾಕಿಸಿ ಇಡೀ ಪ್ರಕರಣವನ್ನು ಇತ್ಯರ್ಥಗೊಳಿಸಿದರು.