ತಗ್ಗು-ಗುಂಡಿ ಮುಚ್ಚಲು ಕೋಟಿ ರೂಪಾಯಿ ಪ್ಲ್ಯಾನ್!

Screenshot_2023-08-20-18-06-48-01.jpg
Published on

ಬೆಳಗಾವಿ: ಮಂತಕ್ಕಿಂತ ಉಗುಳು ಜಾಸ್ತಿ ಎನ್ನುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ಅಭಿವೃದ್ಧಿ ಕಾರ್ಯಗಳಿಗಿಂತ ವಿನಾಕಾರಣ ಹೆಚ್ಚು ಹಣ ಖರ್ಚು ಮಾಡುವ ಯೋಜನೆ ಕೈಗೆತ್ತಿಕೊಂಡು ಚರ್ಚೆಗೆ ಗ್ರಾಸವಾಗಿದ್ದಾರೆ.

ಗಣೇಶ ಚತುರ್ಥಿ ಅಂಗವಾಗಿ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆ ಹಾದು ಹೋಗುವ ರಸ್ತೆಗಳಲ್ಲಿನ ತಗ್ಗು-ಗುಂಡಿಗಳನ್ನು ಮುಚ್ಚುವುದು ಹಾಗೂ ಮೂರ್ತಿಗಳ ವಿಸರ್ಜನೆಗೆ ಬಾವಿ-ಹೊಂಡಗಳ ಸ್ವಚ್ಛಗೊಳಿಸುವುದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿರುವುದು ಪ್ರಶ್ನಾರ್ಹವಾಗಿದೆ. ತಗ್ಗು-ಗುಂಡಿ ಮುಚ್ಚುವುದು ಹಾಗೂ ಹೊಂಡಗಳನ್ನು ಸ್ವಚ್ಚಗೊಳಿಸಿ, ನೀರು ತುಂಬಿಸುವ ಕಾರ್ಯಕ್ಕೆ ಪಾಲಿಕೆ ಅಧಿಕಾರಿಗಳು ಬರೋಬ್ಬರಿ 1 ಕೋಟಿ ರೂ. ಖರ್ಚು ಮಾಡುತ್ತಿದ್ದಾರೆ. ಇ- ಪೋಲ್ಯೂರ್‌ಮೆಂಟ್ ಮೂಲಕ `ಐಟಂವಾರು ಟೆಂಡರ್‌ಗಳಿಗೆ ಆಹ್ವಾನಿಸಿದ್ದು, ಖರ್ಚು-ವೆಚ್ಚ ಹೌಹಾರುವಂತಿದೆ.

ಯಾವ ರಸ್ತೆಯಲ್ಲಿ ತಗ್ಗುಗಳಿವೆ ಗೊತ್ತಿಲ್ಲ!: ಗಣೇಶ ವಿಸರ್ಜನಾ ಮೆರವಣಿಗೆ ಸಾಗುವ ಯಾವ ಯಾವ ರಸ್ತೆಗಳಲ್ಲಿ ಎಷ್ಟು ತಗ್ಗುಗಳು ಬಿದ್ದಿವೆ ಎಂದು ಪಾಲಿಕೆಯ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಿಗೆ ಸ್ಪಷ್ಟವಾಗಿ ಗೊತ್ತೇ ಇಲ್ಲ. ಕೇಳಿದರೆ ಒಬ್ಬರ ಮೇಲೆ ಒಬ್ಬರು ಸಬೂಬು ಹೇಳಿ ಸುಮ್ಮನಾಗುತ್ತಾರೆ. ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಎಷ್ಟು ತಗ್ಗುಗಳಿವೆ ಎಂದು ಅಧಿಕಾರಿಗಳಿಗೆ ಸ್ಪಷ್ಟವಾಗಿ ಗೊತ್ತಿಲ್ಲದಿದ್ದರೂ ಕೋಟ್ಯಂತರ ರೂ. ವ್ಯಯಿಸುವುದಕ್ಕೆ ಮುಂದಾಗಿರುವುದು ಸೋಜಿಗದ ಸಂಗತಿ. ಇನ್ನು ಕೆಲ ಕಾಮಗಾರಿಗಳಿಗೆ ಹಣ ವ್ಯಯಿಸುತ್ತಿರುವುದನ್ನು ಗಮನಿಸಿದರೆ ಹುಬ್ಬೇರಿಸುವಂತಿದೆ. ಬೆಳಗಾವಿ ನಗರದ ಉತ್ತರ ಉಪವಿಭಾಗ 1 ಮತ್ತು 2ರ ವ್ಯಾಪ್ತಿಯಲ್ಲಿ ಮೆರವಣಿಗೆ ಸಾಗುವ ಮಾರ್ಗದಲ್ಲಿನ ತಗ್ಗುಗಳನ್ನು ಮುಚ್ಚುವುದಕ್ಕೆ 20 ಲಕ್ಷ ರೂ., ಹಳೇ ಕಪಿಲೇಶ್ವರ ಹೊಂಡ ದುರಸ್ತಿ ಮಾಡುವುದಕ್ಕೆ 11.90 ಲಕ್ಷ ರೂ., ಬೆಳಗಾವಿ ದಕ್ಷಿಣ ಉಪವಿಭಾಗ 1 ಮತ್ತು 2ರ ವ್ಯಾಪ್ತಿಯ ಗಣೇಶ ಮೆರವಣಿಗೆ ಮಾರ್ಗದ ಗುಂಡಿಗಳನ್ನು ಮುಚ್ಚುವುದಕ್ಕೆ 20 ಲಕ್ಷ ರೂ.

ಖರ್ಚು ಮಾಡುತ್ತಿದ್ದಾರೆ. ಬೆಳಗಾವಿ ದಕ್ಷಿಣ ಉಪವಿಭಾಗ-2ರಲ್ಲಿ ಹೊಸ ಕಪಿಲೇಶ್ವರ ಟ್ಯಾಂಕ್‌ನಲ್ಲಿ ನೀರು ತೆಗೆದು ಬಣ್ಣ ಹಚ್ಚಿ ರಿಪೇರಿ ಮಾಡುವುದು ಮತ್ತು ವಿಸರ್ಜನೆ ನಂತರ ಸ್ವಚ್ಛಗೊಳಿಸಿ ನೀರು ತುಂಬಿಸುವುದಕ್ಕೆ 6.20 ಲಕ್ಷ ರೂ. ವ್ಯಯಿಸುತ್ತಿದ್ದಾರೆ. ಬೆಳಗಾವಿ ನಗರ ಉತ್ತರ ಉಪವಿಭಾಗ 1ರ ವ್ಯಾಪ್ತಿಯ ರಸ್ತೆಯಲ್ಲಿನ ತಗ್ಗು ಮುಚ್ಚುವುದಕ್ಕೆ 10 ಲಕ್ಷ ರೂ. ಖರ್ಚು

ಮಾಡುತ್ತಿದ್ದಾರೆ. ದಕ್ಷಿಣ ಉಪವಿಭಾಗ 2ರಲ್ಲಿ ಜಕ್ಕೇರಿ ಹೊಂಡ ಸ್ವಚ್ಛಗೊಳಿಸಿ ಬಣ್ಣ ಹಚ್ಚಿ ನೀರು ತುಂಬಿಸುವುದು ಹಾಗೂ ವಿಸರ್ಜನೆ ನಂತರ ಸ್ವಚ್ಛಗೊಳಿಸಿ ಬಣ್ಣ ಹಚ್ಚುವುದಕ್ಕೆ 6.97 ಲಕ್ಷ ರೂ. ಖರ್ಚು ಮಾಡುತ್ತಿದ್ದಾರೆ. ವಡಗಾವಿ ಕಲ್ಲೇಶ್ವರ ಹೊಂಡ ಸ್ವಚ್ಛಗೊಳಿಸಿ ಬಣ್ಣ ಹಚ್ಚಿ ನೀರು ತುಂಬಿಸುವುದಕ್ಕೆ 3.85 ಲಕ್ಷ ರೂ. ವ್ಯಯ ಮಾಡುತ್ತಿದ್ದಾರೆ.

ಹೊಂಡ ಸ್ವಚ್ಛಗೊಳಿಸಲು ಹಣದ ಹೊಳೆ:

ಗಣೇಶ ಹೊಂಡ ಸ್ವಚ್ಛಗೊಳಿಸಿ ನೀರು ತುಂಬಿಸುವುದು ಹಾಗೂ ಮೆರವಣಿಗೆ ಮಾರ್ಗಗಳ ತಗ್ಗುಗಳನ್ನು ಮುಚ್ಚುವುದು ಇತರ ಕಾಮಗಾರಿಗಳಿಗೆ ಒಟ್ಟಾರೆ 1 ಕೋಟಿ ರೂ. ವೆಚ್ಚದ ಟೆಂಡರ್ ಕರೆಯಲಾಗಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಕೋಟ್ಯಂತರ ರೂ. ವ್ಯಯಿಸಿ ನಗರದ ಕೋಟೆ ಕೆರೆಯನ್ನು ನವೀಕರಣ ಮಾಡಲಾಗಿದೆ. ಮತ್ತೆ ಪಾಲಿಕೆಯವರು ಕೋಟೆಕೆರೆಯ ಗಣೇಶ ವಿಸರ್ಜನಾ ಹೊಂಡದ ಹೂಳು ತೆಗೆಯುವುದಕ್ಕೆ ಈಗ 2.80 ಲಕ್ಷ ರೂ. ಮೀಸಲಿಟ್ಟಿದ್ದಾರೆ. ಕಣಬರ್ಗಿ ಕೆರೆಯ ಹೊಂಡದ ಹೂಳು ತೆಗೆಯುವುದಕ್ಕೂ ಮತ್ತೆ 1 ಲಕ್ಷ ರೂ. ವ್ಯಯಿಸುತ್ತಿದ್ದಾರೆ. ಹೊಸ ಕಪಿಲೇಶ್ವರ ಹೊಂಡ ಹಾಗೂ ಜಕ್ಕೇರಿ ಹೊಂಡ ಸ್ವಚ್ಛಗೊಳಿಸುವುದಕ್ಕೆ 2.90 ಲಕ್ಷ ರೂ. ವ್ಯಯಿಸುತ್ತಿದ್ದಾರೆ.

ಮಾಡಿದ್ದನ್ನೇ ಮಾಡುತ್ತಿರುವುದಕ್ಕೆ ಅಸಮಾಧಾನ:

ಗಣೇಶ ವಿಸರ್ಜನಾ ಮೆರವಣಿಗೆ ಸಾಗುವ ರಸ್ತೆಯಲ್ಲಿನ ತಗ್ಗು-ಗುಂಡಿಗಳು ಹಾಗೂ ವಿಸರ್ಜನಾ ಹೊಂಡಗಳನ್ನು ಸ್ವಚ್ಛಗೊಳಿಸುವುದಕ್ಕೆ ಪ್ರತಿವರ್ಷವೂ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಾರೆ. ಮತ್ತದೇ ಕಾಮಗಾರಿಗಳಿಗೆ ಮತ್ತೆ ಕೋಟ್ಯಂತರ ರೂ. ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳುವುದು ಅಧಿಕಾರಿಗಳಿಗೆ ರೂಢಿಯಾಗಿಬಿಟ್ಟಿದೆ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಆಯುಕ್ತರ ಪ್ರತಿಕ್ರಿಯೆ: 

ಗಣೇಶ ವಿಸರ್ಜನಾ ಮೆರವಣಿಗೆ ಸಾಗುವ ರಸ್ತೆಗಳ ತಗ್ಗು-ಗುಂಡಿಗಳ ಮುಚ್ಚುವುದು, ಹೊಂಡಗಳ ಸ್ವಚ್ಛತೆ ಇತರ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಟೆಂಡರ್ ಮುಂದೆ ಕಡಿಮೆ ಆಗುತ್ತದೆ. ಮಾಡಿದ ಕಾಮಗಾರಿಗಳನ್ನು ಮತ್ತೆ ಮಾಡುತ್ತಿದ್ದರೆ, ಅಂಥವುಗಳನ್ನು ಪರಿಶೀಲಿಸುತ್ತೇವೆ. ಅನವಶ್ಯಕ ವೆಚ್ಚ ತಡೆಯುತ್ತೇನೆ ಎಂದು ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net