5072.06 ಕೋಟಿ ರೂ. ಸಾಲ ವಿತರಣೆ ಗುರಿ

17_06_Mdy_Margadharsi Bank Meeting
Published on

ಮಂಡ್ಯ: 2020-21ನೇ ಸಾಲಿನಲ್ಲಿ ಜಿಲ್ಲೆಗೆ 5072.06 ಕೋಟಿ ರೂ. ಸಾಲ ವಿತರಣೆಗೆ ಗುರಿ ನಿಗದಿಪಡಿಸಲಾಗಿದೆ ಎಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕದರಪ್ಪ ಹೇಳಿದರು.

ನಗರದ ವಿಬ್‌ಸೆಟಿ ಸಭಾಂಗಣದಲ್ಲಿ ಸಂಸದೆ ಸುಮಲತಾ ಅಂಬರೀಷ್ ಅಧ್ಯಕ್ಷತೆಯಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ನ ಪ್ರಗತಿ ಪರಿಶೀಲನೆ ಹಾಗೂ ಸಲಹಾ ಸಮಿತಿ ಸಭೆಯಲ್ಲಿ ಮಾಹಿತಿ ನೀಡಿದರು.

ಕಳೆದ ಸಾಲಿಗಿಂತ 559.96 ಕೋಟಿ ರೂ ಹೆಚ್ಚುವರಿ ಸಾಲ ಲಭ್ಯವಾಗಿದೆ. ಆದ್ಯತಾ ರಂಗಕ್ಕೆ 4,627 ಕೋಟಿ ರೂ. ಗುರಿ ಹೊಂದಲಾಗಿದ್ದು, ಇದು ಕಳೆದ ಸಾಲಿಗಿಂತ 510 ಕೋಟಿ ರೂ. ಹೆಚ್ಚುವರಿಯಾಗಿದೆ. ಕೃಷಿ ಕ್ಷೇತ್ರಕ್ಕೆ 3,322 ಕೋಟಿ ರೂ ನಿಗದಿಪಡಿಸಿದ್ದು, ಕಳೆದ ಸಾಲಿಗಿಂತ 210 ಕೋಟಿ ರೂ. ಹೆಚ್ಚುವರಿಯಾಗಿದೆ. ಇದರಲ್ಲಿ ಬೆಳೆ ಸಾಲ 2,259 ಕೋಟಿ ರೂ.ಗಳಾಗಿದ್ದು, ಕೃಷಿಯೇತರ ಕ್ಷೇತ್ರಕ್ಕೆ 365 ಕೋಟಿ ರೂ ಹಾಗೂ ಇತರ ಆದ್ಯತಾ ಕ್ಷೇತ್ರಕ್ಕೆ 939 ಕೋಟಿ ರೂ. ನಿಗದಿಪಡಿಸಲಾಗಿದೆ ಎಂದು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದೆ, ಕೃಷಿ ಸಂಬಂಧಿಸಿದ ಅವಧಿ ಸಾಲಗಳಿಗೆ ಹೆಚ್ಚು ಒತ್ತು ನೀಡುವ ಅಗತ್ಯ ಇದೆ. ಆದ್ಯತಾ ವಲಯದಲ್ಲಿ ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳಿಗೆ ಸಾಲ ಸೌಲಭ್ಯ ಸರಳವಾಗಿ ಸಿಗುವಂತೆ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.

ಕದರಪ್ಪ ಪ್ರತಿಕ್ರಿಯಿಸಿ, ಈಗಾಗಲೇ ವಲಯವಾರು ಯೋಜನೆ ರೂಪಿಸಿ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ. ಮಾವಿನ ಬೆಳೆ ಹಾಗೂ ಡೇರಿ ಅಭಿವೃದ್ಧಿಗೆ ಉತ್ತೇಜನ ನೀಡಲಾಗಿದೆ ಎಂದರು.

ಆರ್ಥಿಕ ವರ್ಷದ ಅಂತ್ಯದ ಪ್ರಗತಿ ಗಮನಿಸಿದರೆ ಶೇ.85ರಷ್ಟು ಸಾಧನೆಯಾಗಿದ್ದು, ಆದ್ಯತಾ ಕ್ಷೇತ್ರಕ್ಕೆ ಶೇ.83ರಷ್ಟು ಸಾಲ ವಿತರಣೆಯಾಗಿದೆ. ವಾಣಿಜ್ಯ ಬ್ಯಾಂಕ್‌ನ ವಾರ್ಷಿಕ ಗುರಿಯ ಶೇ.79ರಷ್ಟು ಸಾಲ ವಿತರಣೆಯಾಗಿದ್ದರೆ, ಶೇ.31ರಷ್ಟು ಸಾಧನೆ ಮಾಡಲಾಗಿದೆ. ತಾಲೂಕುವಾರು ಸಾಧನೆಯಲ್ಲಿ ಕೆ.ಆರ್.ಪೇಟೆ ತಾಲೂಕು ಪ್ರಥಮ ಸ್ಥಾನದಲ್ಲಿದ್ದು, ಶ್ರೀರಂಗಪಟ್ಟಣ ದ್ವಿತೀಯ ಇನ್ನುಳಿದ ಮಳವಳ್ಳಿ, ಪಾಂಡವಪುರ, ಮಂಡ್ಯ, ಮದ್ದೂರು ಹಾಗೂ ನಾಗಮಂಗಲ ತಾಲೂಕುಗಳು ತೃತೀಯ ಸ್ಥಾನದಲ್ಲಿವೆ ಎಂದು ಕದರಪ್ಪ ಹೇಳಿದರು.

ಜಿಲ್ಲೆಯ ದುರ್ಬಲ ವರ್ಗದವರಿಗೆ ಈವರೆಗೆ 1.199 ಕೋಟಿ ರೂ. ಸಾಲ ವಿತರಿಸಲಾಗಿದ್ದು, ಅಲ್ಪಸಂಖ್ಯಾತರಿಗೆ 630 ಕೋಟಿ ರೂ, ಮಹಿಳಾ ಖಾತೆದಾರರಿಗೆ 1,299 ಕೋಟಿ ರೂ. ಸಾಲ ವಿತರಿಸಲಾಗಿದೆ. ಲಾಕ್‌ಡೌನ್ ಆದ ಪರಿಣಾಮ ಮಾರ್ಚ್ ಅಂತ್ಯದ ವೇಳೆಗೆ ನಿಗದಿತ ಸಾಧನೆ ಮಾಡಲು ಸಾಧ್ಯವಾಗಿಲ್ಲ ಎಂದು ಮಾಹಿತಿ ನೀಡಿದರು.

ಸಂಸದೆ ಮಾತನಾಡಿ, ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಹೆಚ್ಚಿನ ಲಾನುಭವಿಗಳನ್ನು ಗುರುತಿಸಿ ಸಾಲ ಮಂಜೂರಾತಿ ಮಾಡಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಮಹಿಳೆಯರಿಗೆ ಜಾರಿ ಮಾಡಲಾಗಿರುವ ಸ್ಟಾಂಡ್ ಆ್ ಯೋಜನೆಯಲ್ಲಿ ಆಗಿರುವ ಪ್ರಗತಿ ಸಮಾಧಾನಕರವಾಗಿಲ್ಲ. ಈ ನಿಟ್ಟಿನಲ್ಲಿ ಎಲ್ಲ ಬ್ಯಾಂಕ್ ಅಧಿಕಾರಿಗಳು ಗಮನ ನೀಡಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿಪಂ ಸಿಇಒ ಕೆ.ಯಾಲಕ್ಕಿಗೌಡ, ಬ್ಯಾಂಕ್ ಆ್ ಬರೋಡಾದ ಪ್ರಾದೇಶಿಕ ವ್ಯವಸ್ಥಾಪಕ ಕೆ. ಸತ್ಯನಾರಾಯಣ ನಾಯಕ್, ನಬಾರ್ಡ್‌ನ ಡಿಡಿಎಂ ಸುಧೀರ್ ಇದ್ದರು. ಜಿಲ್ಲಾ ಮಟ್ಟದ ಅಧಿಕಾರಿಗಳು ಇಲಾಖಾವಾರು ಸಾಲಸೌಲಭ್ಯಗಳ ಕುರಿತಂತೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net