

ಬೆಂಗಳೂರು: ಯಾವುದೇ ಶುಲ್ಕವನ್ನು ಬಾಕಿ ಉಳಿಸಿಕೊಳ್ಳಬೇಡಿ, ಸರಿಯಾದ ಸಮಯಕ್ಕೆ ತೆರಿಗೆ ಪಾವತಿಸಿ, ತೆರಿಗೆ ಪಾವತಿಸದಿದ್ದರೆ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತವೆ ಎನ್ನುವ ಸರ್ಕಾರದ ಹಲವು ಇಲಾಖೆಗಳೇ ಜಲಮಂಡಳಿಗೆ ಕೋಟ್ಯಂತರ ರೂ.ಗಳ ನೀರಿನ ಬಿಲ್ ಪಾವತಿಸದೆ ಬಾಕಿ ಉಳಿಸಿಕೊಂಡಿವೆ!
ಹೌದು. 2019ರ ಡಿಸೆಂಬರ್ವರೆಗೆ 100 ಸಂಸ್ಥೆಗಳಿಂದ ಜಲಮಂಡಳಿಗೆ ಒಟ್ಟಾರೆ 28 ಕೋಟಿ ರೂ. ಬಾಕಿ ಬರಬೇಕಿದೆ. ಈ ಪೈಕಿ ಬಿಬಿಎಂಪಿ, ರೈಲ್ವೆ ಸೇರಿ ವಿವಿಧ ಇಲಾಖೆಗಳು, ವಾಣಿಜ್ಯ ಸಂಸ್ಥೆಗಳು ಮುಂಚೂಣಿಯಲ್ಲಿವೆ.
ಬಿಬಿಎಂಪಿ ಮೊದಲ ಸ್ಥಾನ: ಜಲಮಂಡಳಿಯ ಬಾಕಿ ಉಳಿಸಿಕೊಂಡ ಟಾಪ್ 100 ಸಂಸ್ಥೆಗಳ ಪೈಕಿ ಬಿಬಿಎಂಪಿ ಮೊದಲ ಸ್ಥಾನದಲ್ಲಿದೆ. ಜಲಮಂಡಳಿಯ ಉಪವಿಭಾಗ ಎನ್ಇ-3, ಎಸ್ಡಬ್ಲ್ಯು-4, ಸಿ-1 ಸೇರಿ ನಗರದ 11 ಭಾಗಗಳಿಂದ ಒಟ್ಟಾರೆ 10.25 ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಂಡಿದೆ. ಹೆಬ್ಬಾಳ, ಜಯನಗರ, ಎಚ್ಎಎಲ್, ನಗರ್ತರಪೇಟೆ. ಸೌತ್ ಎಂಡ್ ಸರ್ಕಲ್, ಕಾಪೋರೇಷನ್ ಮಾರುಕಟ್ಟೆ ಜಯನಗರ, ಬಿಟಿಎಂ ಸೇರಿ ನಗರದ ವಿವಿಧ ಭಾಗಗಳಲ್ಲಿ ಕಚೇರಿಗಳ ಬಿಲ್ ಬಾಕಿ ಉಳಿದಿದೆ.
ವಾಣಿಜ್ಯ ಕಟ್ಟಡಗಳಿಂದಲೂ ಬಾಕಿ
ಬಾಕಿ ಉಳಿಸಿಕೊಂಡ ಟಾಪ್ 100ರಲ್ಲಿ ವಾಣಿಜ್ಯ ಕಟ್ಟಡಗಳು ಎರಡನೇ ಸ್ಥಾನದಲ್ಲಿವೆ. 38 ವಿಭಾಗಗಳಿಂದ ಒಟ್ಟು 4.77 ಕೋಟಿ ರೂ. ಬಿಲ್ ಬಾಕಿ ಬರಬೇಕಿದೆ.
ಬಿಲ್ ಪಾವತಿಸದವರಿಗೆ ಬಾಕಿ ಮೊತ್ತದ ಮೇಲೆ ವಾರ್ಷಿಕ ಶೇ.20 ದಂಡವನ್ನು ಜಲಮಂಡಳಿ ವಿಧಿಸುತ್ತಿದೆ. ಆದರೂ ಕೆಲವರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಬಾಕಿದಾರರಿಗೆೆ ಮೂರು ತಿಂಗಳು ಗಡುವು ನೀಡಲಾಗುವುದು. ಆಗಲೂ ಬಿಲ್ ಪಾವತಿಸದಿದ್ದರೆ ಸಂಪರ್ಕ ಕಡಿತಗೊಳಿಸಲಾಗುವುದು. | ಕೆಂಪರಾಮಯ್ಯ ಜಲಮಂಡಳಿ ಪ್ರಧಾನ ಮುಖ್ಯ ಇಂಜಿನಿಯರ್
150 ಕೋಟಿ ರೂ. ಮಾಸಿಕ ಖರ್ಚು
ಕಾವೇರಿ ಕಣಿವೆಯಿಂದ ಬೆಂಗಳೂರಿಗರಿಗೆ 1,450 ಎಂಎಲ್ಡಿ ನೀರು ಸರಬರಾಜು ಮಾಡಲಾಗುತ್ತಿದೆ. ಮೊದಲು ಈ ವ್ಯವಸ್ಥೆಗೆ ಪ್ರತಿತಿಂಗಳು 110 ಕೋಟಿ ರೂ. ಖರ್ಚಾಗುತ್ತಿತ್ತು. ವಿದ್ಯುತ್ ವೆಚ್ಚ, ರಿಪೇರಿ, ಸಿಸ್ಟಮ್ ಆಪರೇಟಿಂಗ್ ಹಾಗೂ ಮಂಡಳಿ ನಿರ್ವಹಣೆ ವೆಚ್ಚ ಹೆಚ್ಚಳವಾಗಿದೆ. ಈಗ ಮಾಸಿಕ ವೆಚ್ಚ 150 ಕೋಟಿ ರೂ. ತಲುಪಿದೆ. ಸರಿಯಾದ ಸಮಯಕ್ಕೆ ಶುಲ್ಕ ವಸೂಲಿಯಾದರೆ, ಈ ವೆಚ್ಚದ ನಿರ್ವಹಣೆಗೆ ತಕ್ಕಮಟ್ಟಿಗೆ ಅನುಕೂಲವಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇಂದಿರಾ ಕ್ಯಾಂಟೀನ್ ಬಾಕಿ 1.31 ಕೋಟಿ ರೂ.
ಶಿವಾಜಿನಗರ, ಮಹದೇವಪುರ, ಶಾಂತಿನಗರ, ಕನಕಪುರ ಮುಖ್ಯರಸ್ತೆ ಸೇರಿ ಬಿಬಿಎಂಪಿ ವ್ಯಾಪ್ತಿಯ 13 ಇಂದಿರಾ ಕ್ಯಾಂಟೀನ್ಗಳಿಂದ ಒಟ್ಟು 1.31 ಕೋಟಿ ರೂ. ನೀರಿನ ಬಿಲ್ ಬಾಕಿ ಬರಬೇಕಿದೆ. ನೋಟಿಸ್ ನೀಡಿದರೂ ಬಾಕಿ ವಸೂಲಿಯಾಗಿಲ್ಲ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
| ದ್ವಾರಕಾನಾಥ್ ಎಲ್