

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮುಂಗಾರುವ ಪೂರ್ವ ಕೈಗೊಂಡಿದ್ದ ಕೃಷಿ ಜಮೀನಿನ ಬೆಳೆ ಸಮೀಕ್ಷೆಯಲ್ಲಿ ಶೇ.97.31 ರಷ್ಟು ಸಾಧನೆ ಕಂಡು ಬಂದಿದೆ.
ಜಿಲ್ಲೆಯಲ್ಲಿ 5,05,057 ಕೃಷಿ ಜಮೀನುಗಳನ್ನು ಸಮೀಕ್ಷೆಗೆ ಗುರುತಿಸಿದ್ದು ಈ ಪೈಕಿ 491507 ಜಮೀನುಗಳಲ್ಲಿ ಮಾಹಿತಿ ಸಂಗ್ರಹ ಪ್ರಕ್ರಿಯೆ ಪೂರ್ಣಗೊಂಡಿದೆ. ಪ್ರಸ್ತುತ ಶೇ.97.31 ರಷ್ಟು ಸಾಧನೆಯಾಗಿದೆ. ಇನ್ನೂ 13550 ಜಮೀನುಗಳಲ್ಲಿ ಸರ್ವೆ ಕೈಗೊಳ್ಳುವುದು ಬಾಡಿಕೆ ಇದ್ದು ಮೂರ್ನಾಲ್ಕು ದಿನಗಳಲ್ಲಿ ಬಾಕಿ ಉಳಿದಿರುವ ಕಡೆ ಕೆಲಸ ಮುಗಿಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೃಷಿ ಇಲಾಖೆಯ ಜತೆಗೆ ಕಂದಾಯ ಇಲಾಖೆ ಸಹ ಸಮೀಕ್ಷಾ ಕಾರ್ಯಕ್ಕೆ ಕೈ ಜೋಡಿಸಿದ್ದು ಬಾಗೇಪಲ್ಲಿ 107, ಗುಡಿಬಂಡೆ 36, ಚಿಂತಾಮಣಿ 143, ಶಿಡ್ಲಘಟ್ಟ 122, ಗೌರಿಬಿದನೂರು 110, ಚಿಕ್ಕಬಳ್ಳಾಪುರ 101 ಸೇರಿದಂತೆ 619 ಮಂದಿ ಖಾಸಗೀ ಸಿಬ್ಬಂದಿಯನ್ನು ನಿಯೋಜಿಸಿದ್ದು ಗ್ರಾಮವಾರು ರೈತರ ಜಮೀನುಗಳಿಗೆ ಭೇಟಿ ನೀಡಿ, ಮಾಹಿತಿ ಸಂರಹಿಸಲಾಗಿದೆ.
*ಸಮೀಕ್ಷೆಯ ಅನುಕೂಲ
ಅತಿವೃಷ್ಟಿ, ಅನಾವೃಷ್ಟಿಯಿಂದಾದ ಬೆಳೆನಾಶಕ್ಕೆ ನಷ್ಟ ಪರಿಹಾರ, ಬೆಂಬಲ ಬೆಲೆ ಯೋಜನೆಯಡಿ ಉತ್ಪನ್ನ ಖರೀದಿ, ಬೆಳೆ ವಿಮೆ, ಋತುಮಾನವಾರು ವಿವಿಧ ಬೆಳೆಗಳ ವಿಸ್ತೀರ್ಣ ವರದಿ ಕಾರ್ಯ, ಬೆಳೆ ಕಟಾವು ಪ್ರಯೋಗ, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿಗಳ ಆಧಾರಿತ ಯೋಜನೆಗಳ ಅನುಷ್ಠಾನ ಹಾಗೂ ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಬೆಳೆ ಸಮೀಕ್ಷೆ ಅನುಕೂಲಕರ.
*ಸಮೀಕ್ಷಾ ಕಾರ್ಯ ಪ್ರಕ್ರಿಯೆ
ಸ್ವಯಂ ರೈತರು ಸಹ ನಿಗದಿತ ಅವಧಿಯೊಳಗೆ ಮೊಬೈಲ್ ಆಪ್ ಮೂಲಕ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಬಹುದು. ಆದರೆ, ಇದಕ್ಕೆ ಉತ್ತಮ ಸ್ಪಂದನೆ ಸಿಗುತ್ತಿಲ್ಲ. ಇದರಿಂದ ಇಲಾಖೆಯ ಅಧಿಕಾರಿಗಳು ಖಾಸಗಿ ಸಿಬ್ಬಂದಿ ಮೂಲಕ ಪ್ರಕ್ರಿಯೆನ್ನು ಕೈಗೊಳ್ಳುತ್ತಿದ್ದಾರೆ.
ಕಳೆದ ಮುಂಗಾರು ಹಂಗಾಮಿನಲ್ಲಿ ಖುದ್ದು ರೈತರೇ ವಿಶೇಷ ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆ ಕಾರ್ಯ ಕೈಗೊಂಡಿದ್ದು ರೈತರು ಜಮೀನಿನಲ್ಲಿ ಬೆಳೆದಿರುವ ಎಲ್ಲ ಬೆಳೆಗಳ ಮಾಹಿತಿಯನ್ನು ಯಾವುದೇ ಲೋಪದೋಷಗಳಿಗೆ ಆಸ್ಪದವಿಲ್ಲದಂತೆ ಸ್ವತ: ದಾಖಲಿಸಲು “ನನ್ನ ಬೆಳೆ ನನ್ನ ಹಕ್ಕು” ಎನ್ನುವ ಧ್ಯೇಯ ವಾಕ್ಯದೊಂದಿಗೆ ಸರ್ಕಾರವು ಅವಕಾಶ ಕಲ್ಪಿಸಿತ್ತು.
*ಮಾಹಿತಿ ಸಂಗ್ರಹ
ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಕೃಷಿ ಇಲಾಖೆಯ ವಿಶೇಷ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು, ಆರ್ಥಿಕ ವರ್ಷ ಹಾಗೂ ಋತು-ಮುಂಗಾರು ಎಂಬುದರ ಆಯ್ಕೆಯ ಬಳಿಕ ಆಧಾರ್‌ನಲ್ಲಿರುವಂತೆ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಸರ್ವೆನಂಬರ್ ಹಿಸ್ಸಾ, ಮಾಲೀಕರ ಹೆಸರು ಸೇರಿದಂತೆ ಅಗತ್ಯ ಮಾಹಿತಿ ದಾಖಲಿಸಬೇಕು. ಜಮೀನಿನ ವಿಸ್ತೀರ್ಣ ನಮೂದಿಸಿದ ಬಳಿಕ ಸರ್ವೆನಂಬರ್ ಗಡಿಯೊಳಗೆ ನಿಂತು ಬೆಳೆ ವಿವರ ದಾಖಲಿಸಿ ಫೋಟೋ ತೆಗೆದು ಅಪ್‌ಲೋಡ್ ಮಾಡಬೇಕು. ದಾಖಲಿಸಿರುವ ಮಾಹಿತಿಯನ್ನು ಮೇಲ್ವಿಚಾರಕರ ಪರಿಶೀಲನೆಗೊಳಪಡಿಸಿ ಅನುಮೋದನೆ ನೀಡಲಾಗುತ್ತದೆ. ಇದೀಗ ಜಿಲ್ಲೆಯಲ್ಲಿ ಇಲಾಖೆಗಳೇ ಲೋಕಸಭಾ ಚುನಾವಣೆಯ ಒತ್ತಡದ ನಡುವೆಯು ಸರ್ವೆ ಪ್ರಕ್ರಿಯೆಯನ್ನು ಕೈಗೊಂಡಿದ್ದಾರೆ.