

ಹನೂರು : ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಅಸ್ತೂರು ಗ್ರಾಮದಲ್ಲಿ ಶನಿವಾರ ರಾತ್ರಿ ಕಾಡಾನೆಯೊಂದು ಜಮೀನಿಗೆ ಲಗ್ಗೆ ಇಟ್ಟು ರಾಗಿ ಫಸಲನ್ನು ನಾಶಪಡಿಸಿದೆ.
ಗ್ರಾಮದ ಡಿ.ಕೆ.ರಾಜು ಎಂಬುವರು ಅರಣ್ಯ ಪ್ರದೇಶದ ಅಂಚಿನಲ್ಲಿರುವ 3 ಎಕರೆಯಲ್ಲಿ ರಾಗಿ ಫಸಲನ್ನು ಬೆಳೆದಿದ್ದು, ತೆನೆಗಳನ್ನು ಕಟಾವು ಮಾಡುವ ಹಂತಕ್ಕೆ ಬಂದಿತ್ತು. ಆದರೆ ರಾತ್ರಿ ಜಮೀನಿಗೆ ಲಗ್ಗೆ ಇಟ್ಟ ಕಾಡಾನೆ ಅರ್ಧ ಎಕರೆಯಲ್ಲಿ ಫಸಲನ್ನು ತುಳಿದು ನಾಶಪಡಿಸಿದೆ.
ಸಾವಿರಾರು ರೂ ನಷ್ಟ ಉಂಟಾಗಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿ ಕೊಟುವಂತೆ ಒತ್ತಾಯಿಸಿದ್ದಾರೆ. ಜತೆಗೆ ಈ ಭಾಗದಲ್ಲಿ ಕಾಡಾನೆಯ ಹಾವಳಿ ಹೆಚ್ಚಾಗಿದೆ.
ಆಗ್ಗಾಗ್ಗೆ ಜಮೀನುಗಳಿಗೆ ಲಗ್ಗೆ ಇಟ್ಟು ಫಸಲನ್ನು ನಾಶಪಡಿಸುತ್ತಿದೆ. ಇದರಿಂದ ರೈತರು ಕೃಷಿಯಲ್ಲಿ ನಷ್ಟವನ್ನು ಅನುಭವಿಸುವಂತಾಗಿದೆ. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಾನೆಯ ಹಾವಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದ್ದಾರೆ.