

ರವಿ ಬೆಟ್ಟಸೋಗೆ ಅರಕಲಗೂಡು
ತಾಲೂಕಿನಲ್ಲಿ ಹಿಂಗಾರು ಮಳೆ ಕೊರತೆಯಾಗಿದೆ. ಹಿಂಗಾರು ಹಂಗಾಮಿನಲ್ಲಿ ಬಿತ್ತಿದ ಬೆಳೆಗಳು ಈಗ ವರುಣನ ಅವಕೃಪೆಯಿಂದ ಒಣಗುತ್ತಿವೆ. ಇದರಿಂದ ಅನ್ನದಾತರ ಸ್ಥಿತಿ ಚಿಂತಾಜನಕವಾಗಿದೆ. ಕಳೆದ ಕೆಲ ದಿನಗಳಿಂದ ಅಲ್ಲಲ್ಲಿ ಮಳೆ ಮೋಡಗಳು ದಟ್ಟೈಸಿದ್ದವು. ಆದರೆ ಜೋರು ಮಳೆ ಬೀಳದೆ ಹವಾಮಾನವು ಕಣ್ಣಾಮುಚ್ಚಾಲೆಯಾಡಿತು. ತಾಲೂಕಿನ ಕೆಲವು ಕಡೆ ಮಳೆ ಸಿಂಚನವಾದರೂ ಭೂಮಿ ಹದಗೊಳಿಸುವಷ್ಟು ಮಳೆ ಸುರಿಯುತ್ತಿಲ್ಲ. ಹಾಗಾಗಿ ಒಣಗುತ್ತಿರುವ ಬೆಳೆ ಉಳಿಸಿಕೊಳ್ಳಲು ರೈತರು ಮಳೆಗಾಗಿ ಮುಗಿಲಿನತ್ತ ಮುಖ ಮಾಡಿದ್ದಾರೆ.
ಹಿಂಗಾರು ಬೆಳೆಯಾಗಿ ಪ್ರಮುಖ ಆಹಾರದ ಬೆಳೆಯಾದ ರಾಗಿ, ಮುಸುಕಿನ ಜೋಳ, ಅವರೆ, ಅಲಸಂದೆ, ಹುರುಳಿ ಮತ್ತಿತರ ದ್ವಿದಳ ಧಾನ್ಯಗಳನ್ನು ರೈತರು ಬೆಳೆದಿದ್ದಾರೆ. ಬಿತ್ತನೆ ವೇಳೆ ಹದವಾಗಿ ಸುರಿಯುತ್ತಿದ್ದ ಮಳೆ ಈಗ ಬೆಳೆಗಳು ಬೆಳವಣಿಗೆ ಹಂತದಲ್ಲಿರುವ ವೇಳೆ ವರುಣ ಅವಕೃಪೆಗೆ ತುತ್ತಾಗಿವೆ. ಹಾಗಾಗಿ ಅನ್ನದಾತರಲ್ಲಿ ಆತಂಕ ಮೂಡಿಸಿದೆ.
ರಾಗಿ, ಜೋಳಕ್ಕೆ ಗೆ ನೀರಿಲ್ಲ:
ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿ ರಾಮನಾಥಪುರ, ಕೊಣನೂರು ಹೋಬಳಿ ಭಾಗದಲ್ಲಿ ಹೆಚ್ಚಿನದಾಗಿ ಹೊಗೆಸೊಪ್ಪು ಬೆಳೆದಿದ್ದಾರೆ. ತರಕಾರಿ ಬೆಳೆಗಳು ಹಾಗೂ ತೋಟದ ಬೆಳೆಗಳು ಬಾಡಲಾರಂಭಿಸಿವೆ. ಕಸಬಾ, ದೊಡ್ಡಮಗ್ಗೆ ಹೋಬಳಿ ಭಾಗದಲ್ಲಿ ಆಲೂಗಡ್ಡೆ, ಮುಸುಕಿನ ಜೋಳದ ಬೆಳೆ ಬೆಳೆದಿದ್ದಾರೆ. ತಂಬಾಕು, ಆಲೂಗಡ್ಡೆ, ಶುಂಠಿ ಮತ್ತಿತರ ಮುಂಗಾರು ಬೆಳೆಗಳ ಕಟಾವು ಮುಗಿಸಿ ಹಿಂಗಾರಿನಲ್ಲಿ ಆಹಾರದ ಬೆಳೆಯಾಗಿ ರಾಗಿ ಬಿತ್ತನೆ ಮಾಡುವುದು ವಾಡಿಕೆ. ಬಹುತೇಕ ಕಡೆ ರಾಗಿ ಬಿತ್ತನೆ ಮಾಡಿದ್ದು ಮಳೆಯಿಲ್ಲದೆ ಬೆಳೆ ಬಾಡುತ್ತಿದೆ. ಮಳೆ ಬಿದ್ದರೆ ರಾಗಿ ಫಸಲು ಕೈಗೆ ಸಿಗುತ್ತದೆ. ಮುಸುಕಿನ ಜೋಳದ ಬೆಳೆಗೆ ಭರ್ಜರಿ ಮಳೆ ಬೀಳಬೇಕು. ಆದರೆ ಮಳೆ ಮಾಯವಾಗಿದೆ. ಮಳೆಯಿಲ್ಲದೆ ಕೈಗೆ ಬಂದ ತುತ್ತು ಬಾಯಿಗೆ ಬಾರದಾಗಿದೆ. ಮಳೆಯನ್ನೇ ನೆಚ್ಚಿಕೊಂಡು ಇಂದಲ್ಲ ನಾಳೆ ಉತ್ತಮವಾಗಿ ಮಳೆ ಸುರಿಯಬಹುದು ಎನ್ನುವ ಆಶಾಭಾವನೆಯಲ್ಲಿಯೇ ರೈತರು ದಿನ ದೂಡುವಂತಾಗಿದೆ. ನೀರಾವರಿ ಸೌಲಭ್ಯ ಹೊಂದಿರುವ ಕೆಲವೇ ರೈತರು ಹನಿ ನೀರಾವರಿ ಮೂಲಕ ಬೆಳೆಗಳನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಕೇವಲ ಮಳೆಯನ್ನೇ ನೆಚ್ಚಿಕೊಂಡಿರುವ ರೈತರಿಗೆ ಬೆಳೆಗಳನ್ನು ರಕ್ಷಿಸಿಕೊಳ್ಳುವುದು ಹೇಗೆ ಎನ್ನುವ ಚಿಂತೆ ಈಗ ಗಾಢವಾಗಿ ಕಾಡುತ್ತಿದೆ.
ಪ್ರವಾಹದಿಂದ ನಷ್ಟವಾಗಿತ್ತು:
ಈ ಬಾರಿಯ ಮುಂಗಾರಿನಲ್ಲಿ ಅತಿಯಾಗಿ ಬಿದ್ದ ಮಳೆಯಿಂದಾಗಿ ಅಪಾರ ಹಣ ವ್ಯಯಿಸಿ ಬೆಳೆದಿದ್ದ ತಂಬಾಕು, ಮುಸುಕಿನ ಜೋಳ ಮತ್ತಿತರ ಬೆಳೆಗಳು ಅತಿವೃಷ್ಟಿ ಹೊಡೆತಕ್ಕೆ ಸಿಲುಕಿ ಬೆಳೆ ನಷ್ಟ ಉಂಟಾಗಿತ್ತು. ಕಾವೇರಿ ಮತ್ತು ಹೇಮಾವತಿ ನದಿ ಉಕ್ಕಿ ಹರಿದು ಪ್ರವಾಹದಿಂದ ನದಿ ಪಾತ್ರದಲ್ಲಿ ಬೆಳೆಗಳು ನಾಶವಾಗಿದ್ದವು. ಶುಂಠಿ ಫಸಲು ಕೊಳೆ ರೋಗಕ್ಕೆ ತುತ್ತಾಗಿತ್ತು. ಅಳಿದುಳಿದ ಅಲ್ಪ ಪ್ರಮಾಣದ ಫಸಲು ರೈತರ ಕೈಸೇರಿದ್ದರೂ ಬೆಲೆ ಕುಸಿತದ ಹೊಡೆತ ಅನುಭವಿಸವಂತಾಗಿತ್ತು. ಹವಾಮಾನ ವೈಪರೀತ್ಯದಿಂದಾಗಿ ಮುಂಗಾರಿನಲ್ಲಿ ಅತಿಯಾಗಿ ಸುರಿದ ಮಳೆ ಈಗ ಕೈ ಕೊಟ್ಟಿದೆ. ಪರಿಣಾಮವಾಗಿ ಹಿಂಗಾರಿನಲ್ಲಿ ಬಿತ್ತಿದ ಬೆಳೆಗಳ ಬೆಳವಣಿಗಗೆ ಹೊಡೆತ ಬಿದ್ದಿದೆ.
ಕೀಟಬಾಧೆಗೆ ಸಿಲುಕಿದ ಭತ್ತದ ಬೆಳೆ:
ಭತ್ತದ ಬೆಳೆಗೆ ಮಳೆ ಇಲ್ಲದೆ ಕೀಟಬಾಧೆಗೆ ಸಿಲುಕಿದೆ. ಇದೂ ಅನ್ನದಾತರನ್ನು ಕಂಗೆಡಿಸಿದೆ. ಹೇಮಾವತಿ, ಹಾರಂಗಿ, ಕಾವೇರಿ ನದಿ ಪಾತ್ರದ ಸಾವಿರಾರು ಅಚ್ಚುಕಟ್ಟಿನಲ್ಲಿ ರೈತರು ಭತ್ತದ ಬೆಳೆ ಬೆಳೆದಿದ್ದಾರೆ. ಭತ್ತದ ನಾಟಿ ಮಾಡಿ ಒಂದು ತಿಂಗಳು ಕಳೆದಿದ್ದು, ಬೆಳೆ ಸಾಕಷ್ಟು ಕಡೆ ಕೀಟಬಾಧೆಗೆ ತುತ್ತಾಗಿ ನಾಶವಾಗುತ್ತಿದೆ. ಇದಕ್ಕಾಗಿ ಔಷಧ ಸಿಂಪಡಣೆ ಮಾಡಿದರೂ ರೋಗ ಹತೋಟಿಗೆ ಬರುತ್ತಿಲ್ಲ. ಜೋರು ಮಳೆ ಸುರಿದರೆ ಹುಳುಗಳ ಹಾವಳಿ ನಿಯಂತ್ರಣಕ್ಕೆ ಬರಲಿದೆ. ಮಳೆ ಅಬ್ಬರಿಸದಿದ್ದರೆ ಬೆಳೆ ಕಳೆದುಕೊಳ್ಳುವ ಆತಂಕವಿದೆ ಎಂದು ಅನ್ನದಾತರು ಅವಲತ್ತುಕೊಂಡಿದ್ದಾರೆ.