

ಮುಂಡಗೋಡ: ಮೂರು ಕಾಡಾನೆಗಳು ತಾಲೂಕಿನ ವಿವಿಧ ಭಾಗಗಳಲ್ಲಿ ದಾಳಿ ನಡೆಸಿ ಭತ್ತದ ಬಣವೆ ಹಾಗೂ ಗೋವಿನಜೋಳ, ಅಡಕೆ, ಬಾಳೆ ಬೆಳೆಗಳನ್ನು ನಾಶಪಡಿಸುತ್ತಿರುವುದು ರೈತರು ಹಾನಿ ಅನುಭವಿಸುವಂತಾಗಿದೆ.
ತಾಲೂಕಿನ ಮಲವಳ್ಳಿ, ಲಕ್ಕೊಳ್ಳಿ ಹಾಗೂ ಕರವಳ್ಳಿ ಗ್ರಾಮಗಳ ಸನಿಹದವರೆಗೂ ಆಗಮಿಸಿದ ಮೂರು ಕಾಡಾನೆಗಳು ಹಲವು ರೈತರು ಬೆಳೆದಿದ್ದ ಹಿಂಗಾರು ಬೆಳೆ ಗೋವಿನಜೋಳವನ್ನು ತಿಂದು, ತುಳಿದು ನಾಶಪಡಿಸಿವೆ. ಇದರಿಂದ ರೈತರು ಹಾನಿ ಅನುಭವಿಸುವಂತಾಗಿದೆ.
ಕಾಡಾನೆಗಳ ತಂಡವು ಕುರ್ಲಿ, ಬೆಕ್ಕೋಡ, ಜಂಬೇಕೊಪ್ಪ ಹಾಗೂ ಸುತ್ತಲಿನ ಭಾಗದಲ್ಲಿ ಸಂಚರಿಸುತ್ತಿದ್ದು, ಅಡಕೆ ಬಾಳೆ ಹಾಗೂ ಭತ್ತದ ಬೆಳೆ ಕಟಾವು ಮಾಡಿಟ್ಟಿದ್ದ ಬಣವೆಗಳನ್ನು ನಾಶ ಪಡಿಸಿವೆ. ಸಣ್ಣ ಅಡಕೆ ಗಿಡಗಳನ್ನು ಕಿತ್ತು ಹಾಕಿವೆ. ಹಗಲು ಹೊತ್ತಿನಲ್ಲಿ ಅರಣ್ಯದಲ್ಲಿರುವ ಕಾಡಾನೆಗಳು ಸಂಜೆಯಾಗುತ್ತಿದ್ದಂತೆ ಅರಣ್ಯದಂಚಿನ ತೋಟ ಹಾಗೂ ಗದ್ದೆಗಳಿಗೆ ನುಗ್ಗಿ ದಾಳಿ ನಡೆಸುತ್ತಿವೆ. ರಾತ್ರಿ ಯಾವ ಭಾಗದಲ್ಲಿ ಕಾಡಾನೆಗಳು ದಾಳಿ ನಡೆಸುತ್ತವೆ ಎಂಬುದು ತಿಳಿಯದಾಗಿದೆ. ಈ ಕುರಿತು ಅರಣ್ಯ ಇಲಾಖೆಯವರು ಜಾಗೃತಿ ವಹಿಸಿ ಕಾಡಾನೆಗಳನ್ನು ಓಡಿಸುವ ಮೂಲಕ ಬೆಳೆ ಹಾನಿಯಾಗುತ್ತಿರುವುದನ್ನು ತಪ್ಪಿಸಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.