

ಸುಂಟಿಕೊಪ್ಪ: ಇಲ್ಲಿನ ಉಲುಗುಲಿ ಗ್ರಾಮದ ಓಡಿಯಪ್ಪನ ಸುದೇಶ್‌ಕುಮಾರ್ ಅವರ ತೋಟಕ್ಕೆ ಮಂಗಳವಾರ ರಾತ್ರಿ ಒಂಟಿ ಸಲಗವೊಂದು ದಾಳಿ ನಡೆಸಿ ತೆಂಗು, ಕಾಫಿ, ಬಾಳೆ, ಏಲಕ್ಕಿ ಸೇರಿದಂತೆ ಹಲವು ಫಸಲುಭರಿತ ಬೆಳೆಗಳನ್ನು ತಿಂದು, ತುಳಿದು ನಾಶಗೊಳಿಸಿದೆ.
ಕಳೆದ ಎರಡು ದಿನಗಳಿಂದ ಒಂಟಿಸಲಗವೊಂದು ಸುತ್ತಮುತ್ತಲಿನ ತೋಟಗಳಲ್ಲಿ ನೆಲೆನಿಂತು ತೆಂಗು, ಕಾಫಿ, ಬಾಳೆ, ಏಲಕ್ಕಿ ಗಿಡಗಳನ್ನು ತಿಂದು ಹಾಕಿದಲ್ಲದೆ ತೆಂಗು ಮತ್ತು ಬಾಳೆ ಗಿಡಗಳನ್ನು ಬುಡಸಮೇತ ಕಿತ್ತು ಹಾಕಿದೆ. ಇದರಿಂದ ಬೆಳೆಗಾರರಿಗೆ ಸಾಕಷ್ಟು ನಷ್ಟ ಉಂಟಾಗಿದೆ ಎಂದು ಓಡಿಯಪ್ಪ ಸುದೇಶ್‌ಕುಮಾರ್ ಅಳಲು ತೋಡಿಕೊಂಡರು.
ಕಳೆದ ಎರಡು ದಿನಗಳಿಂದ ಕಾಡಾನೆ ಹಾವಳಿಯಿಂದ ತೋಟದಲ್ಲಿ ಕಾರ್ಮಿಕರು ಕೆಲಸ ಕಾರ್ಯನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಭಾಗದಿಂದ ಶಾಲಾ-ಕಾಲೇಜುಗಳಿಗೆ ತೆರಳುವ ಜೀವಭಯದಿಂದ ತೆರಳುವಂತಾಗಿದೆ. ಈ ಭಾಗದ ನಿವಾಸಿಗಳು ಅತಂಕ ವ್ಯಕ್ತಪಡಿಸಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಕಾಡಾನೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.