

ಚಿಕ್ಕಬಳ್ಳಾಪುರ: ಬರದ ಹಿನ್ನೆಲೆಯಲ್ಲಿ ತೀವ್ರ ನಷ್ಟ ಅನುಭವಿಸಿರುವ 97,278 ರೈತರಿಗೆ 17,70,69,155 ರೂ (ಏ.೩೦ ಕ್ಕೆ) ಬೆಳೆ ಪರಿಹಾರ ಒದಗಿಸಲಾಗಿದೆ.
ಕಳೆದ ಸಾಲಿನಲ್ಲಿ ಮಳೆಯ ತೀವ್ರ ಅಭಾವದಿಂದ ಜಿಲ್ಲೆಯಲ್ಲಿ 75,208 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಉಂಟಾಗಿದ್ದರ ಬಗ್ಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು 68,551 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾದ ಬೆಳೆಗಳಿಗೆ ಪರಿಹಾರವನ್ನು ಒದಗಿಸಲಾಗಿದೆ.
ಈ ಭಾಗವು 2.26 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶದಲ್ಲಿ 1.39 ಹೆಕ್ಟೇರ್ (ಶೇ.62 ರಷ್ಟು) ಮಳೆಯಾಶ್ರಿತ ಪ್ರದೇಶವಾಗಿದ್ದು ಕಳೆದ ಸಾಲಿನ ಮುಂಗಾರು ಅವಧಿಗೆ ರೈತರು ಹೆಚ್ಚಿನ ಬೆಳೆ ನಷ್ಟಕ್ಕೆ ಒಳಗಾಗಿದ್ದರು. ವಾರ್ಷಿಕ 736 ಮಿ.ಮೀ ವಾಡಿಕೆ ಮಳೆಗೆ ಕೇವಲ 164 ಮಿ.ಮೀ ಮಳೆ ಬಿದ್ದಿದ್ದು ತೀವ್ರತರದ ಮಳೆ ಕೊರತೆಗೆ ಬಿತ್ತನೆ ಗುರಿ, ಇಳುವರಿ ಪ್ರಮಾಣ ಕಡಿಮೆಯಾಗಿದೆ.
1,48,592 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಪೈಕಿ 1,09,025 ಪ್ರದೇಶದಲ್ಲಿ (ಶೇ.73) ಬಿತ್ತನೆ ಕಾರ್ಯ ನಡೆದಿದ್ದರ ನಡುವೆ 75,208 ಹೆಕ್ಟೇರ್ ಪ್ರದೇಶದ ಕೃಷಿ ಬೆಳೆಗಳು ಹಾನಿಯಾಗಿದ್ದು ಜಿಲ್ಲೆಯಲ್ಲಿ ಬರೋಬ್ಬರಿ 463.49 ಕೋಟಿ ರೂ ನಷ್ಟ ಅಂದಾಜಿಸಲಾಗಿತ್ತು.
ರಾಜ್ಯ ಸರ್ಕಾರವು ಜಿಲ್ಲೆಯ ಎಲ್ಲ 6 ತಾಲೂಕುಗಳನ್ನು ತೀವ್ರ ಬರ ಪೀಡಿತ ಪ್ರದೇಶಗಳೆಂಬುದಾಗಿ ಘೋಷಿಸಿದ್ದು ಕೇಂದ್ರ ಅಧ್ಯಯನ ತಂಡವು ಬರ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಮಳೆಯ ಅಭಾವದಿಂದ ಉದ್ಭವವಾಗಿರುವ ಸಮಸ್ಯೆಗಳು, ನಷ್ಟದ ಪ್ರಮಾಣ, ನಿರೀಕ್ಷೆಯ ಪರಿಹಾರ ಕೆಲಸಗಳ ಬಗ್ಗೆ ಜಿಲ್ಲಾಡಳಿತವು ಗಮನ ಸೆಳೆದಿದ್ದರ ಜತೆಗೆ ರೈತರು ನೋವನ್ನು ಹೇಳಿಕೊಂಡಿದ್ದರು.
*ಬರ ಪರಿಹಾರ
ಈಗಾಗಲೇ ರಾಜ್ಯ ಸರ್ಕಾರವು ಮೊದಲ ಕಂತಿನ ಹಣ ತಲಾ 2 ಸಾವಿರ ರೂಗಳನ್ನು ರೈತರ ಖಾತೆಗೆ ಜಮಾಗೊಳಿಸಿದೆ. ಇದರ ನಡುವೆ ಕೇಂದ್ರ ಸರ್ಕಾರವು ಇತ್ತೀಚೆಗೆ ರಾಜ್ಯಕ್ಕೆ ಬರ ಪರಿಹಾರದ ಅನುದಾನವನ್ನು ಬಿಡುಗಡೆಗೊಳಿಸಿದ್ದು ಇದರಲ್ಲಿ ಅರ್ಹರ ರೈತರಿಗೆ ಪರಿಹಾರವನ್ನು ನೀಡಲಾಗುತ್ತಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತ್ವರಿತವಾಗಿ ನಿಯಮಗಳ ಪಾಲನೆ, ಪರಿಶೀಲನೆ, ಬ್ಯಾಂಕ್ ಖಾತೆ ಜಮಾ ಹಣ ಪ್ರಕ್ರಿಯೆ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.
*ಆಗಾಗ ಬರ ಸಮಸ್ಯೆ
ಕಳೆದ 15 ವರ್ಷದಲ್ಲಿ ಹಲವು ಬಾರಿ ಜಿಲ್ಲೆಯು ಬರಕ್ಕೆ ತುತ್ತಾಗಿದ್ದು ಕೋಟ್ಯಂತರ ರೂ ವೆಚ್ಚದ ಬೆಳೆ ಹಾನಿಯಾಗಿದೆ. 2023 ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಮಳೆ ಕೈ ಕೊಟ್ಟಿದೆ. ಇದರ ತೀವ್ರ ಬರಕ್ಕೆ ಇನ್ನೂ ಕೃಷಿ ವಲಯಕ್ಕೆ ಭಾರಿ ಹೊಡೆದಿದ್ದು ಆರ್ಥಿಕ ಸಂಕಷ್ಟದಿಂದ ರೈತರು ಚೇತರಿಸಿಕೊಂಡಿಲ್ಲ. ಮತ್ತೊಂದೆಡೆ ಇಳುವರಿ ಕುಸಿತದಿಂದ ಕೃಷಿ ಉತ್ಪನ್ನಗಳ ಬೆಲೆಯು ದುಬಾರಿಯಾಗಿದೆ.