

ಗುತ್ತಲ: ಸತತ ಮಳೆಯಿಂದಾಗಿ ಗುತ್ತಲ ಸೇರಿ ಹೋಬಳಿಯ 42 ಗ್ರಾಮಗಳ ನೂರಾರು ಹೆಕ್ಟೇರ್ ಬೆಳೆ ಜಲಾವೃತವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಗುತ್ತಲದ ಐತಿಹಾಸಿಕ ದೊಡ್ಡ ಕೆರೆ 2 ವರ್ಷಗಳ ನಂತರ ಕೋಡಿ ಬಿದ್ದಿದ್ದು, ಅಪಾರ ಪ್ರಮಾಣದ ನೀರು ಹರಿಯುತ್ತಿದೆ. ಕಾಲುವೆ ಸ್ವಚ್ಛ ಇಲ್ಲದ್ದರಿಂದ ನೀರು ಜಮೀನುಗಳಿಗೆ ನುಗ್ಗುವ ಹಂತ ತಲುಪಿದೆ. ಕೆಲವೆಡೆ ನೀರು ಜಮೀನುಗಳಿಗೆ ನುಗ್ಗಿದೆ. ಕಟಾವಿಗೆ ಬಂದಿದ್ದ ನೂರಾರು ಹೆಕ್ಟೇರ್ ಪ್ರದೇಶದಲ್ಲಿನ ಮೆಕ್ಕೆಜೋಳ ಬೆಳೆ ಹಾನಿಯಾಗಿದೆ.
ಹಾವೇರಿ ತಾಲೂಕಿನಲ್ಲಿ ಅ. 21ರವರೆಗೆ ಒಟ್ಟು 52 ಮನೆಗಳಿಗೆ ಹಾನಿಯಾಗಿದ್ದು, ಗುತ್ತಲ ಹೋಬಳಿಯಲ್ಲಿ 2, ಹಾವೇರಿ ಹೋಬಳಿಯಲ್ಲಿ 48 ಹಾಗೂ ಕರ್ಜಗಿ ಹೋಬಳಿಯಲ್ಲಿ 2 ಮನೆಗಳಿಗೆ ಹಾನಿಯಾಗಿವೆ.
ಮಳೆಯಿಂದ ಹಾನಿಯಾಗಿರುವ ಜಮೀನುಗಳಿಗೆ ತೆರಳಲು ರಸ್ತೆಗಳು ಹದಗಟ್ಟಿದ್ದು ರೈತರಿಗೆ ಚಿಂತೆಯನ್ನುಂಟು ಮಾಡಿದೆ. ಮಳೆ ಬಿಡುವು ಕೊಟ್ಟರೆ ಮೆಕ್ಕೆಜೋಳದ ಬೆಳೆಯನ್ನು ಜಮೀನಿನಿಂದ ತರಲು ಆಗದ ಸ್ಥಿತಿ ನಿರ್ವಣವಾಗಿದೆ.
ಗುತ್ತಲ ಹೋಬಳಿಯಲ್ಲಿ ಸತತ ಮಳೆಗೆ ಬೆಳೆಗಳು ಹಾನಿಯಾಗಿದೆ. ಗ್ರಾಮ ಲೆಕ್ಕಿಗರು ಹಾಗೂ ಕೃಷಿ ಇಲಾಖೆಯಿಂದ ಜಂಟಿ ಸಮೀಕ್ಷೆ ನಂತರ ಹಾನಿಯ ನಿಖರ ಪ್ರಮಾಣ ತಿಳಿಯುತ್ತದೆ. ಪ್ರಸ್ತುತ ಸುಮಾರು 305 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. | ಧನುಷ್.ಕೆ.ಎಸ್., ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಗುತ್ತಲ