ರೈತರಿಂದಲೇ ಬೆಳೆ ಸರ್ವೇ: ಶೀಘ್ರ ಮೊಬೈಲ್ ಆ್ಯಪ್ ಬಿಡುಗಡೆ ನಿಖರ ದತ್ತಾಂಶ ದಾಖಲೆಗೆ ಪ್ರಯೋಗ

app
Published on

ಬೆಂಗಳೂರು ಗ್ರಾಮಾಂತರ: ಇನ್ನು ಮುಂದೆ ಬೆಳೆ ಸಮೀಕ್ಷೆಯನ್ನು ರೈತರೇ ಮಾಡಬಹುದಾಗಿದ್ದು, ಇದಕ್ಕಾಗಿ ಶೀಘ್ರವೇ ಸರ್ಕಾರ ಮೊಬೈಲ್ ಆ್ಯಪ್ ಬಿಡುಗಡೆಗೊಳಿಸಲಿದೆ.

2020-21ನೇ ಸಾಲಿನ ಮುಂಗಾರು ಹಂಗಾಮಿನ ಸಮೀಕ್ಷೆಗೆ ಸಿದ್ಧತೆ ನಡೆದಿದ್ದು, ಬೆಳೆ ಸಂಗ್ರಹಣೆ ಮಾಹಿತಿ ಹಾಗೂ ನಿಖರ ದತ್ತಾಂಶ ಅಲಭ್ಯತೆ ಸಮಸ್ಯೆ ನಿವಾರಣೆಯಲ್ಲಿ ಈ ಆ್ಯಪ್ ಸಹಕಾರಿಯಾಗಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಯೋಜನೆಗಳಿಂದ ವಂಚಿತರಾಗಬಾರದು: 2017ರ ಮುಂಗಾರು ಹಂಗಾಮಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಇಲಾಖೆಯೂ ಅಭಿವೃದ್ಧಿಪಡಿಸಿದ ಮೊಬೈಲ್ ತಂತ್ರಾಂಶ ಬಳಕೆಯಿಂದ ಬೆಳೆ ಸಮೀಕ್ಷೆ ಆರಂಭಿಸಲಾಯಿತು. ಜತೆಗೆ 2018-19ನೇ ಸಾಲಿನ ಮುಂಗಾರು ಮತ್ತು ಹಿಂಗಾರಿನಲ್ಲಿ ಖಾಸಗಿ ವ್ಯಕ್ತಿಗಳಿಂದ (ಪಿಆರ್) ಬೆಳೆ ಸಮೀಕ್ಷೆ ಕೈಗೊಳ್ಳಲಾಗಿತ್ತು. ಆದರೆ ಕೆಲವು ರೈತರು ಬೆಳೆ ಮಾಹಿತಿ ತಪ್ಪಾಗಿರುವುದಾಗಿ ದೂರಿದ್ದರು. ಜತೆಗೆ ಸರ್ಕಾರದ ಯೋಜನೆಯಿಂದ ವಂಚಿತರಾಗಿರುವ ಬಗ್ಗೆ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಬೆಳೆಗಳಿಗೆ ಸರ್ಕಾರದ ಎಲ್ಲ ಯೋಜನೆ ಪಡೆದುಕೊಳ್ಳುವ ಸಲುವಾಗಿ ಈ ಬಾರಿ ಸರ್ಕಾರ ರೈತರಿಂದಲೇ ಬೆಳೆ ಸರ್ವೇ ಮೂಲಕ ಹೊಸ ಬದಲಾವಣೆ ತರಲಿದೆ.

ಗ್ರಾಮಮಟ್ಟದ ಮೇಲ್ವಿಚಾರಕರು: ಪ್ರತಿ ಗ್ರಾಮಗಳಿಗೆ ಒಂದು ಅಥವಾ ಹೆಚ್ಚು ಗ್ರಾಮಮಟ್ಟದ ಸರ್ಕಾರಿ ಅಧಿಕಾರಿಗಳನ್ನು ಮೇಲ್ವಿಚಾರಕರನ್ನಾಗಿ ನೇಮಿಸಲಾಗುವುದು. ರೈತರು ಮತ್ತು ಖಾಸಗಿ ನಿವಾಸಿಗಳು ನಮೂದಿಸಿದ ಬೆಳೆ ಮಾಹಿತಿ ಪರಿಶೀಲಿಸಿ ಛಾಯಾಚಿತ್ರ ಹಾಗೂ ನಮೂದಿಸಿದ ಹೆಸರನ್ನು ತಾಳೆ ಮಾಡಲಾಗುವುದು. ಸರಿ ಇದ್ದರೆ ಅನುಮೋದಿಸುವುದು ಇಲ್ಲವಾದರೆ ಮರು ಸಮೀಕ್ಷೆಗೆ ಹಿಂತಿರುಗಿಸಲಾಗುವುದು. ರೈತರು ನಿಗದಿತ ಸಮಯದಲ್ಲಿ ಬೆಳೆ ಮಾಹಿತಿ ಅಪ್‌ಲೋಡ್ ಮಾಡದಿದ್ದಲ್ಲಿ ಸರ್ಕಾರದಿಂದ ನೇಮಕವಾದ ಖಾಸಗಿ ವ್ಯಕ್ತಿಗಳು (ಪ್ರೈವೇಟ್ ರೆಸಿಡೆಂಟ್) ಉಳಿದ ಜಮೀನು ಸಮೀಕ್ಷೆ ನಡೆಸಲಿದ್ದಾರೆ.

ರೈತರೇ ಅಪ್‌ಲೋಡ್ ಮಾಡಬಹುದು: ಈ ಯೋಜನೆಯಡಿ ರೈತರೇ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ಅಪ್ಲೋಡ್ ಮಾಡಬಹುದು. ಆ.31ರವರೆಗೆ ಈ ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಪಯೋಗಗಳೇನು?: ಸಾಂಖ್ಯಿಕ ಇಲಾಖೆ, ಕೃಷಿ, ರೇಷ್ಮೆ ಹಾಗೂ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ ಎಣಿಕೆ ಮಾಡಲು, ಬೆಳೆ ಕಟಾವು ಪ್ರಯೋಗ ಹಾಗೂ ತಾಕಿನ ಸರ್ವೇ ಸಂಖ್ಯೆ ಆಯ್ಕೆ ಮಾಡಲು, ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಹಾನಿಯಾದಲ್ಲಿ ಸಹಾಯಧನಕ್ಕೆ ಅರ್ಹ ಲಾನುಭವಿಗಳ ಆಯ್ಕೆ ಮಾಡಲು, ಬೆಳೆ ವಿಮಾ ಯೋಜನೆಯಲ್ಲಿ ತಾಲೂಕು ಹಂತದ ಬೆಳೆ ಪರಿಶೀಲಿಸಲು, ಕನಿಷ್ಠ ಬೆಂಬಲ ಬೆಲೆ ನಿಗದಿ ಹಾಗೂ ಪಹಣಿಯಲ್ಲಿ ಬೆಳೆ ವಿವರ ದಾಖಲಾತಿಗೆ ಅನುಕೂಲವಾಗಲಿದೆ.

ರೈತರಿಗೆ ಅರಿವು ಕಾರ್ಯಕ್ರಮ: ಈ ಯೋಜನೆಯಲ್ಲಿ ರೈತರು ಮೊಬೈಲ್ ಆ್ಯಪ್ ಮೂಲಕ ಅಪ್ಲೋಡ್ ಮಾಡುವ ಬಗ್ಗೆ ಪಿಆರ್ ತರಬೇತಿ ಹಾಗೂ ಮಾರ್ಗದರ್ಶನ ನೀಡಲಿದ್ದಾರೆ. ಇಲಾಖೆ ಅಧಿಕಾರಿಗಳಿಂದಲೂ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಮೊಬೈಲ್ ಪ್ಲೇಸ್ಟೋರ್‌ನಲ್ಲಿ ರೈತರ ಬೆಳೆ ಸಮೀಕ್ಷೆ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, ಬೆಳೆಯ ೆಟೋ ಮತ್ತಿತರ ವಿವರಗಳನ್ನು ಅಪ್‌ಲೋಡ್ ಮಾಡಬೇಕು. ಸಂಬಂಧಿಸಿದ ರೈತರ ಮೊಬೈಲ್ ನಂಬರ್ ಕಡ್ಡಾಯವಾಗಿರಬೇಕು. ಡೌನ್‌ಮಾಡಿಕೊಳ್ಳುವಾಗ ಬರುವ ಒಟಿಪಿ ಬಳಸಿ ದಾಖಲೆ ಮಾಡಿಕೊಳ್ಳಬೇಕು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪಿಆರ್‌ಗಳು ನಡೆಸುತ್ತಿದ್ದ ಬೆಳೆ ಸರ್ವೇಯಲ್ಲಿ ಕೆಲವು ಲೋಪದೋಷಗಳಿವೆ ಎಂಬ ಆರೋಪ ಕೇಳಿಬಂದಿತ್ತು. ಕೆಲವೊಂದು ಸಮಸ್ಯೆ ಪರಿಹರಿಸಲು ನಿಖರ ಮಾಹಿತಿ ಸಂಗ್ರಹಣೆಗೆ ರೈತರಿಂದಲೇ ಬೆಳೆ ಸಮೀಕ್ಷೆ ಅಪ್ಲೋಡ್ ಮಾಡುವ ನೂತನ ಆ್ಯಪ್ ಸಿದ್ಧವಾಗಿದ್ದು, ಶೀಘ್ರವೇ ಬಿಡುಗಡೆಯಾಗಲಿದೆ. ಇದನ್ನು ಎಲ್ಲ ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ಜಯಸ್ವಾಮಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net