ಬೆಳೆ ಸಮೀಕ್ಷೆ ಅಪ್ಲಿಕೇಶನ್ ಬಿಡುಗಡೆ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯ

29-10kodekal01
ಕೊಡೇಕಲ್ ರೈತ ಶಿವಯ್ಯ ಮಠ ಬೆಳೆದಿರುವ ಚೆಂಡು ಹೂ.
Published on

ಮೈಸೂರು: ಬೆಳೆ ಸಮೀಕ್ಷೆಯ ಭಾಗವಾಗಿ ಕೃಷಿ ಇಲಾಖೆಯು ಪ್ರಸಕ್ತ ಸಾಲಿನ ಹಿಂಗಾರು ರೈತರ ಬೆಳೆ ಸಮೀಕ್ಷೆ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಬಿಡುಗಡೆ ಮಾಡಿದೆ.
ಅಪ್ಲಿಕೇಶನ್ ಅನ್ನು ಬಳಸಿಕೊಂಡು ಸ್ವತಃ ರೈತರೇ ತಮ್ಮ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳ ಸಮೀಕ್ಷೆಯನ್ನು ಮಾಡಿ ವಿವರಗಳನ್ನು ಅಪ್ಲೋಡ್ ಮಾಡಬಹುದಾಗಿದೆ ಎಂದು ಕೃಷಿ ಇಲಾಖೆಯ ಪ್ರಕಟಣೆ ತಿಳಿಸಿದೆ.

ಅಪ್ಲಿಕೇಶನ್ ವೈಶಿಷ್ಟ್ಯಗಳು

ರೈತರ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಮಾಹಿತಿಯನ್ನು ರೈತರು ನಿಖರವಾಗಿ ದಾಖಲಿಸಬಹುದು. ಸದರಿ ಬೆಳೆ ಸಮೀಕ್ಷೆ ಮಾಹಿತಿಯನ್ನು ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ, ಬೆಂಬಲ ಬೆಲೆ, ಕೃಷಿ ಸಾಲ ಸೌಲಭ್ಯ ಮತ್ತು ಸರ್ಕಾರದ ವಿವಿಧ ಯೋಜನೆಗಳಡಿ ಸವಲತ್ತುಗಳನ್ನು ರೈತರಿಗೆ ಒದಗಿಸಲು ಮತ್ತು ಆರ್.ಟಿ.ಸಿ ಯಲ್ಲಿ ಬೆಳೆ ಮಾಹಿತಿ ಅಳವಡಿಸಲು ಬಳಸಲಾಗುತ್ತದೆ.

ಸಾರ್ವಜನಿಕರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹಿಂಗಾರು ರೈತ ಬೆಳೆ ಸಮೀಕ್ಷೆ-2023 ಎಂದು ಟೈಪ್ ಮಾಡಿ ಅಥವಾ https://play.google.com/store.apps.details?id=com.csk.farmer23_24.cropsurvey ಲಿಂಕ್ ಅನ್ನು ಬಳಸಿ ಡೌನ್ಲೋಡ್ ಮಾಡಿಕೊಳ್ಳಬಹುದು. ನಂತರ ತಮ್ಮ ಆಧಾರ್ ಕಾರ್ಡ್‌ನ ಮೂಲಕ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ ನೋಂದಾಯಿಸಿಕೊಂಡು ತಮ್ಮ ಜಮೀನಿನ ವಿವರಗಳನ್ನು ಡೌನ್ಲೋಡ್ ಮಾಡಬೇಕು. ಆನಂತರ ತಮ್ಮ ಜಮೀನಿನಲ್ಲಿ ತೆರಳಿ, ಸಂಬಂಧಪಟ್ಟ ಸರ್ವೇ ನಂಬರ್‌ನಲ್ಲಿ ಬೆಳೆದಿರುವ ಬೆಳೆಗಳ ಛಾಯಾಚಿತ್ರಗಳನ್ನು ತೆಗೆದು ಅಪ್‌ಲೋಡ್ ಮಾಡಬೇಕು.

ರೈತರು ತಾವು ಬೆಳೆದ ಬೆಳೆ ವಿವರಗಳನ್ನು ಅಪ್‌ಲೋಡ್ ಮಾಡದಿದ್ದಲ್ಲಿ ಸರ್ಕಾರದ ವಿವಿಧ ಯೋಜನೆಗಳಿಂದ ದೊರೆಯುವ ಸವಲತ್ತುಗಳನ್ನು ಪಡೆಯುವುದರಿಂದ ವಂಚಿತರಾಗುವ ಸಂಭವವಿರುತ್ತದೆ. ಆದ್ದರಿಂದ ಎಲ್ಲ ರೈತರು ಆಸಕ್ತಿಯೊಂದಿಗೆ ಪ್ರಸಕ್ತ ಹಂಗಾಮಿನಲ್ಲಿ ಬೆಳೆ ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಂಡು ತಮ್ಮ ಜಮೀನಿನ ಬೆಳೆ ಮಾಹಿತಿಯನ್ನು ತಾವೇ ಖುದ್ದಾಗಿ ದಾಖಲಿಸುವಂತೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ರೈತರ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ, ರೇಷ್ಮೆ, ಕಂದಾಯ ಇಲಾಖೆ ಕಚೇರಿಗಳನ್ನು ಅಥವಾ ಆಯಾ ಗ್ರಾಮಗಳಿಗೆ ನಿಯೋಜಿಸಲಾಗಿರುವ ಖಾಸಗಿ ನಿವಾಸಿಗಳನ್ನು ಅಥವಾ ಬೆಳೆ ಸಮೀಕ್ಷೆ ಸಹಾಯವಾಣಿ 18004253553 ಅನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net