ಬೆಳೆ ಸಮೀಕ್ಷೆ, ಆಧಾರ್ ಭಯ ಬೇಡ: ಕೃಷಿ, ತೋಟಗಾರಿಕೆ ಅಧಿಕಾರಿಗಳ ಮಾಹಿತಿ

samvadha new
Published on

ಮಂಗಳೂರು: ಕರಾವಳಿ ಜಿಲ್ಲೆಗಳ ಕೆಲವಡೆ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇರುವುದರಿಂದ ರೈತರೇ ಬೆಳೆ ಸಮೀಕ್ಷೆ ಮಾಡಲು ಕಷ್ಟ ಎಂಬ ಕಾರಣಕ್ಕೆ ಖಾಸಗಿ ಪ್ರತಿನಿಧಿಗಳ ಸಹಾಯ ಪಡೆದುಕೊಳ್ಳಲು ಸರ್ಕಾರ ಸಮ್ಮತಿಸಿದೆ. ಆಧಾರ್ ಸಂಖ್ಯೆ ನೀಡುವುದರಿಂದ ಕೃಷಿಕರಿಗೆ ತೊಂದರೆ ಆಗದು ಎಂದು ಕೃಷಿ ಇಲಾಖೆ ಉಡುಪಿ ಜಂಟಿ ನಿರ್ದೇಶಕ ಡಾ.ಕೆಂಪೇಗೌಡ ಸ್ಪಷ್ಟಪಡಿಸಿದರು.

ಶುಕ್ರವಾರ ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಕೃಷಿಕರ ನಡುವಿನ ‘ವಿಜಯವಾಣಿ ಫೋನ್‌ಇನ್’ನಲ್ಲಿ ಈ ಮಾಹಿತಿ ನೀಡಿದರು.

ಕೃಷಿಕರ ಉಪಸ್ಥಿತಿಯಲ್ಲೇ ಸಮೀಕ್ಷೆ ನಡೆದಿರುವುದನ್ನು ಖಚಿತಪಡಿಸಿಕೊಳ್ಳಲು ಆಧಾರ್ ದಾಖಲೆ ಕೇಳುತ್ತೇವೆ. ದಾಖಲೆ ನೀಡಲು ಇಷ್ಟವಿಲ್ಲದವರು ಸ್ಮಾರ್ಟ್‌ಫೋನ್ ಹಾಗೂ ಆ್ಯಪ್ ಬಳಸಿ ಸ್ವಯಂ ಸಮೀಕ್ಷೆ ಮಾಡಬಹುದು. ಸದ್ಯ ದ.ಕ.ಜಿಲ್ಲೆಯಲ್ಲಿ ಶೇ.27.8, ಉಡುಪಿಯಲ್ಲಿ 27.5 ಬೆಳೆ ಸಮೀಕ್ಷೆ ಪೂರ್ಣಗೊಂಡಿದೆ. ಕೃಷಿಕರು ಸೆ.23 ಹಾಗೂ ಖಾಸಗಿ ಪ್ರತಿನಿಧಿಗಳು 30ರ ಮೊದಲು ಬೆಳೆ ಸಮೀಕ್ಷೆ ಮಾಡಿ ದಾಖಲೆ ಅಪ್‌ಲೋಡ್ ಮಾಡಬೇಕು ಎಂದರು.

ದ.ಕ.ಜಿಲ್ಲೆಯಲ್ಲಿ 9,62,012 ಜಮೀನುಗಳಿವೆ. ಇದರಲ್ಲಿ 2.31 ಲಕ್ಷ ರೈತರು ಬೆಳೆ ಸಮೀಕ್ಷೆ ಮಾಹಿತಿ ಅಪ್‌ಲೋಡ್ ಮಾಡಿದ್ದು, 842 ಖಾಸಗಿ ಪ್ರತಿನಿಧಿಗಳು 30,855 ಜಮೀನುಗಳ ಸಮೀಕ್ಷೆ ಪೂರ್ಣಗೊಳಿಸಿದ್ದಾರೆ. ಉಡುಪಿಯಲ್ಲಿ 847 ಖಾಸಗಿ ಪ್ರತಿನಿಧಿಗಳು 88,000 ಜಮೀನುಗಳ ಸಮೀಕ್ಷೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 9,41,000 ಜಮೀನುಗಳಿದ್ದು, 1,71,181 ಜಮೀನುಗಳ ಮಾಹಿತಿಯನ್ನು ರೈತರೇ ಅಪ್‌ಲೋಡ್ ಮಾಡಿದ್ದಾರೆ ಎಂದರು.

ಹಳದಿ ರೋಗ ಸಮೀಕ್ಷೆ ಪೂರ್ಣ

ಅಡಕೆಗೆ ಹಳದಿ ರೋಗ ಬಾಧಿಸಿದ ದ.ಕ.ಜಿಲ್ಲೆಯ ಕೃಷಿಕರು ಪರ್ಯಾಯ ಬೆಳೆ ತೆಗೆಯಲು ಅವಕಾಶ ಒದಗಿಸುವ ಉದ್ದೇಶದಿಂದ ತೋಟಗಾರಿಕಾ ಇಲಾಖೆ ನಡೆಸಿದ್ದ ಸಮೀಕ್ಷೆ ಪೂರ್ಣಗೊಂಡಿದೆ ಎಂದು ತೋಟಗಾರಿಕಾ ಇಲಾಖೆ ದ.ಕ.ಉಪನಿರ್ದೇಶಕ ಎಚ್.ಆರ್.ನಾಯಕ್ ತಿಳಿಸಿದರು.

ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಗಳು ಜತೆಯಾಗಿ ನಡೆಸಿರುವ ಈ ಸಮೀಕ್ಷೆ, ಪರಿಶೀಲನೆ ಮತ್ತು ಅಧ್ಯಯನ ಹಂತದಲ್ಲಿದೆ. ಪ್ರಸ್ತಾವಿತ ಜಿಲ್ಲೆಗಳಲ್ಲಿ ತಾಳೆ, ತೆಂಗು, ರಬ್ಬರ್ ಮುಂತಾದ ಬೆಳೆ ತೆಗೆಯಲು ಮುಂದಿನ ನಾಲ್ಕು ವರ್ಷ ತನಕ ಸರ್ಕಾರ ಸಹಾಯಧನ ನೀಡಿ, ಉತ್ಪನ್ನಗಳನ್ನು ಸರ್ಕಾರವೇ ಖರೀದಿಸಲಿದೆ. ರೈತರು ಗಿಡಗಳನ್ನು ಇಲಾಖೆಯಿಂದಲೇ ಪಡೆಯಬೇಕು. ಫಲಾನುಭವಿ ಗಳು ಕನಿಷ್ಠ ಒಂದು ಎಕರೆ ಜಮೀನು ಹೊಂದಿರಬೇಕೆಂಬ ನಿಯಮವಿದೆ. ಆದರೆ ಈ ಭಾಗದ ರೈತರ ಪರಿಸ್ಥಿತಿ ಗಮನದಲ್ಲಿರಿಸಿ ಕನಿಷ್ಠ ಜಮೀನು ಮಿತಿಯನ್ನು 20 ಗುಂಟೆಗೆ ಇಳಿಸುವಂತೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದ ಅವರು, ಒಪ್ಪಿಗೆ ಸಿಗುವ ವಿಶ್ವಾಸವ್ಯಕ್ತಪಡಿಸಿದರು.

ದ.ಕ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸೀತಾ ಎಂ.ಸಿ ಮತ್ತು ಉಡುಪಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ ರೈತರ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.

ಫ್ರೂಟ್ಸ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿರಿ: ಕೃಷಿಕರು ಯಾವುದೇ ಸೌಲಭ್ಯ ಪಡೆಯಲು ಫ್ರೂಟ್ಸ್ (ಫಾರ್ಮರ್ ರಿಜಿಸ್ಟ್ರೇಷನ್ ಆ್ಯಂಡ್ ಯುನಿಫೈಡ್ ಬೆನಿಫಿಶೆರಿ ಇನ್ಫರ್ಮೇಶನ್ ಸಿಸ್ಟಮ್-ಎಫ್‌ಆರ್‌ಯುಐಟಿಎಸ್) ಪೋರ್ಟಲ್‌ನಲ್ಲಿ ಹೆಸರು ನೋಂದಣಿ ಮಾಡಬೇಕು. ಮೊದಲು ನೋಂದಣಿ ಮಾಡಿದವರಿಗೆ ಆದ್ಯತೆ ಎಂದು ಉಭಯ ಜಿಲ್ಲೆಗಳ ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದರು. ಈ ವರ್ಷ ಯಾಂತ್ರೀಕರಣಕ್ಕೆ ರೈತರಿಂದ ಅರ್ಜಿ ಆಹ್ವಾನಿಸಲಾಗಿದ್ದು, ತಾಲೂಕು ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಹನಿ ನೀರಾವರಿಗೂ ಅರ್ಜಿ ಆಹ್ವಾನಿಸಿದ್ದು, ಕಾರ್ಯಾದೇಶ ಪಡೆದು ಆರಂಭಿಸಬಹುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net