ಬೆಳೆ ಸಮೀಕ್ಷೆ ನಡೆಸಿದ ವಿಜ್ಞಾನಿಗಳ ತಂಡ

mkg1a
Published on

ಬಸವಾಪಟ್ಟಣ: ಮಳೆ ಕೊರತೆಯಿಂದಾಗಿ ಬೆಳೆ ನಾಶವಾದ ಹಿನ್ನಲೆಯಲ್ಲಿ ಕೃಷಿ ವಿವಿ ವಿಜ್ಞಾನಿಗಳ ತಂಡ ದಾಗಿನಕಟ್ಟೆ ಕೃಷಿ ಭೂಮಿಗೆ ಭೇಟಿ ನೀಡಿ ಬೆಳೆ ಸಮೀಕ್ಷೆ ನಡೆಸಿತು.

ಕಳೆದ ವರ್ಷ ಹೆಚ್ಚಿನ ಮಳೆಯಿಂದ ಬೆಳೆಗಳು ನಾಶವಾಗಿದ್ದವು. ಈ ವರ್ಷ ಮಳೆ ಇಲ್ಲದೆ ಬೆಳೆಗಳು ಒಣಗಿವೆ. ದುಬಾರಿ ಬಿತ್ತನೆ ಬೀಜ, ಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ್ದೆವು. ಆದರೆ, ಮಳೆ ಕೊರತೆಯಿಂದ ಬೆಳೆಗಳು ನಾಶವಾಗಿದೆ ಎಂದು ರೈತರಾದ ರುದ್ರಪ್ಪ, ಹಾಲೇಶಪ್ಪ, ವೀರಪ್ಪ, ಪ್ರಕಾಶ್ ವಿಜ್ಞಾನಿಗಳ ಮುಂದೆ ಅಳಲು ತೋಡಿಕೊಂಡರು.

ಶೇ. 70ರಷ್ಟು ಪ್ರಮಾಣದ ಬೆಳೆ ಒಣಗಿದ್ದು ಶೇ. 30ರಷ್ಟು ಬೆಳೆ ಹಸಿರಾಗಿದ್ದರೂ ಮಳೆ ಇಲ್ಲದೆ ಸಸಿಗಳ ಬೆಳವಣಿಗೆ ಆಗಿಲ್ಲ. ಕಾಳು ಕಟ್ಟುವ ಸಾಧ್ಯತೆಯೂ ಇಲ್ಲ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಎನ್. ಲತಾ ತಿಳಿಸಿದರು.

ಕೃಷಿ ಇಲಾಖೆ ಸಹಾಯಕ ತಾಂತ್ರಿಕ ಅಧಿಕಾರಿ ಅವಿನಾಶ್ ಮಾತನಾಡಿ, ಬಹುಪಾಲು ರೈತರು ಬೆಳೆ ವಿಮೆ ಮಾಡಿಸಿಲ್ಲ. ಅಂಚೆ ಕಚೇರಿ, ಸ್ಥಳೀಯ ಬ್ಯಾಂಕ್ ಮತ್ತು ಸಹಕಾರ ಸಂಘಗಳಲ್ಲದೆ ಖಾಸಗಿ ಏಜೆಂಟರ ಮೂಲಕವೂ ಬೆಳೆ ವಿಮೆ ಮಾಡಿಸಬಹುದು. ಸರ್ಕಾರ ನೀಡಿರುವ ಸೌಲಭ್ಯಗಳನ್ನು ರೈತರು ಸಕಾಲದಲ್ಲಿ ಬಳಸಿಕೊಳ್ಳಬೇಕು ಎಂದರು.

ಕೃಷಿ ವಿವಿ ವಿಜ್ಞಾನಿಗಳಾದ ಡಾ. ಸಣ್ಣತಿಮ್ಮಣ್ಣ, ಗಂಗಪ್ಪ ಬಿರಾದರ್, ದಾವಣಗೆರೆ ಕೃಷಿ ಉಪನಿರ್ದೇಶಕ ತಿಪ್ಪೇಸ್ವಾಮಿ, ಹೊನ್ನಾಳಿ ಕೃಷಿ ಉಪನಿರ್ದೇಶಕ ಸಿದ್ದೇಶ್ವರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net