ಬೆಳೆ ಸಮೀಕ್ಷೆ ನಿಖರವಾಗಿ ಮಾಡಬೇಕು

sarve
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಜಿಲ್ಲೆಯ ಪ್ರತಿ ರೈತರು ಬೆಳೆ ವಿಮೆ ಮಾಡಿಸುವಂತೆ ಸೂಕ್ತ ಮಾರ್ಗದರ್ಶನ ಹಾಗೂ ಅರಿವು ಮೂಡಿಸಬೇಕು ಅಧಿಕಾರಿಗಳು ಬೆಳೆ ಸಮೀಕ್ಷೆಯನ್ನು ನಿಖರವಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಸೂಚಿಸಿದರು.

ದೇವನಹಳ್ಳಿಯ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ, ಬೆಳೆ ಸಮೀಕ್ಷೆ, ಎಣ್ಣೆಕಾಳು ಅಭಿಯಾನ ಯೋಜನೆಯ ಜಿಲ್ಲಾ ಮಟ್ಟದ ಸಭೆಯಲ್ಲಿ ಮಾತನಾಡಿದರು.

ಕೃಷಿ, ತೋಟಗಾರಿಕೆ ಅಧಿಕಾರಿಗಳು ಮತ್ತು ಬೆಳೆ ವಿಮಾ ಸಂಸ್ಥೆಗಳು ಜಂಟಿಯಾಗಿ ಸ್ಥಳೀಯ ಮಟ್ಟದಲ್ಲಿ ರೈತರಿಗೆ ಬೆಳೆ ವಿಮೆ ಬಗ್ಗೆ ಹಾಗೂ ಅದರಿಂದ ಆಗುವ ಅನುಕೂಲಗಳ ಬಗ್ಗೆ ಅರಿವು ಮೂಡಿಸುವ ಮೂಲಕ ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಲು ಪ್ರೇರೆಪಿಸಬೇಕು ಎಂದು ಸೂಚಿಸಿದರು. ರೈತರು ಬೆಳೆ ವಿಮೆ ಮಾಡಿಸುವುದರಿಂದ ಅತಿವೃಷ್ಟಿ, ಅನಾವೃಷ್ಟಿ ಹಾಗೂ ಇನ್ನೂ ಮುಂತಾದ ಪ್ರಕೃತಿ ವಿಕೋಪಗಳಿಂದ ಬೆಳೆಗಳಿಗೆ ಹಾನಿಯಾದರೆ ಅಂತಹ ಸಂದರ್ಭದಲ್ಲಿ ಬೆಳೆ ನಷ್ಟ ಪರಿಹಾರ ಸಿಗಲಿದೆ. ಹಾಗಾಗಿ ಅಧಿಕಾರಿಗಳು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಬಗ್ಗೆ ಜಿಲ್ಲೆಯ ರೈತರಿಗೆ ಜಾಗೃತಿ ಮೂಡಿಸಿ ಬೆಳೆ ವಿಮೆಗೆ ನೋಂದಾಯಿಸಲು ತಿಳಿಸಬೇಕು ಎಂದು ಹೇಳಿದರು.

ಕಾರ್ಯಾಗಾರ ಆಯೋಜನೆ ಮಾಡಬೇಕು: ರೈತರಿಗೆ ಕೃಷಿ ಕಾರ್ಯಾಗಾರವನ್ನು ಆಯೋಜನೆ ಮಾಡಿ, ರೋಗ ಬಾಧೆಯಿಂದ ಬೆಳೆಯ ರಕ್ಷಣೆ, ಗೊಬ್ಬರ ಪೂರೈಕೆ, ಇಳುವರಿ ಹೆಚ್ಚಿಸುವ ಬೆಳೆಗಳ ಕುರಿತು ಜಾಗೃತಿ ಮೂಡಿಸಿ. ಸಿರಿಧಾನ್ಯ, ಎಣ್ಣೆ ಕಾಳುಗಳ ಬೆಳೆಗೆ ಹೆಚ್ಚಿನ ಪ್ರೊತ್ಸಾಹ ಕಲ್ಪಿಸಿಕೊಡುವತ್ತ ಅಧಿಕಾರಿಗಳು ಗಮನ ನೀಡಬೇಕು ಎಂದ ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ ಈ ಸಾಲಿನ ಬೆಳೆ ಸಮೀಕ್ಷೆ ಆರಂಭಗೊಳ್ಳುತ್ತಿದ್ದು ಸಮೀಕ್ಷೆಯು ಸರಿಯಾದ ಕ್ರಮದಲ್ಲಿ ಆಗಬೇಕಿದೆ. ಸಮೀಕ್ಷೆ ಮಾಡುವವರಿಗೆ ಸೂಕ್ತ ತರಬೇತಿ ನೀಡಬೇಕು. ಮೊಬೈಲ್ ಅಪ್ಲಿಕೇಶನ್‌ನಲ್ಲಿ ಸಮೀಕ್ಷೆ ನಡೆಸಿ ನಿಖರ ಅಂಕಿ ಅಂಕಿಅಂಶಗಳ ಕ್ರೂಡಿಕರಣ ಮಾಡಿ ಬೆಳೆ ಸಮೀಕ್ಷೆಯಿಂದ ಸೆರೆ ಹಿಡಿಯಲಾದ ದತ್ತಾಂಶವನ್ನು ಸರ್ಕಾರದ ವಿವಿಧ ಯೋಜನೆಗಳಲ್ಲಿ ಕನಿಷ್ಠ ಬೆಂಬಲ, ಸಬ್ಸಿಡಿ ಪಾವತಿ, ಬೆಳೆ ಪ್ರದೇಶದ ಅಂದಾಜು ಕೃಷಿ ಮತ್ತು ತೋಟಗಾರಿಕೆ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳ ಆಯ್ಕೆಗೆ ಮುಂತಾದ ಸೌಲಭ್ಯ ಒದಗಿಸಲು ಸಹಕಾರಿಯಾಗಲಿದೆ. ಆದ್ದರಿಂದ ಬೆಳೆ ಸಮೀಕ್ಷೆ ನಿಖರವಾಗಿ ಇರಲಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಯಾವ ಬೆಳೆಗೆ ಎಷ್ಟು ವಿಮೆ ಸಿಗಲಿದೆ? ರಾಗಿ (ಮಳೆಯಾಶ್ರಿತ) ರೈತರು ಪ್ರೀಮಿಯಂ ಮೊತ್ತ ಎಕರೆಗೆ 340 ರೂ.ಪಾವತಿಸಿದರೆ ವಿಮಾ ಮೊತ್ತ 17 ಸಾವಿರ ರೂ.ಪಡೆಯಬಹುದು. ರಾಗಿ (ನೀರಾವರಿ ) 406 ರೂ.ಪಾವತಿಸಿದರೆ ವಿಮಾ ಮೊತ್ತ 20,300 ರೂ.ಪಡೆಯಬಹುದು. ಭತ್ತ (ನೀರಾವರಿ) 746 ರೂಗೆ 37,300 ರೂಪಾಯಿ,

ಮುಸುಕಿನ ಜೋಳ (ನೀರಾವರಿ) 452 ರೂಪಾಯಿಗೆ ವಿಮಾ ಮೊತ್ತ 22600 ರೂ.

ಮುಸುಕಿನ ಜೋಳ (ಮಳೆಯಾಶ್ರಿತ) ಎಕರೆಗೆ 516 ರೂ.ಪಾವತಿಸಿದರೆ ವಿಮಾ ಮೊತ್ತ 25800 ಪಡೆಯಬಹುದು. ಹುರಳಿ (ಮಳೆಯಾಶ್ರಿತ) 164 ಪಾವತಿಸಿದರೆ ವಿಮಾ ಮೊತ್ತ 8200 ರೂ. ಪಡೆಯಬಹುದು. ನೆಲಗಡಲೆ ರೈತರು ಪ್ರೀಮಿಯಂ ಮೊತ್ತ ಎಕರೆಗೆ 436 ರೂ.ಪಾವತಿಸಿದರೆ 21800 ರೂಪಾಯಿ ಪಡೆಯಬಹುದು. ತೊಗರಿ (ಮಳೆಆಶ್ರಿತ)ಎಕರೆಗೆ 384 ಪಾವತಿಸಿದರೆ 19200 ರೂ.ವಿಮಾ ಮೊತ್ತ ಸಿಗಲಿದೆ. ತೊಗರಿ (ನೀರಾವರಿ) ರೈತರು ಪ್ರೀಮಿಯಂ ಮೊತ್ತ ಎಕರೆಗೆ 402 ರೂಪಾಯಿ ಪಾವತಿಸಿದರೆ ವಿಮಾ ಮೊತ್ತ 20100 ರೂ. ಪಡೆಯಬಹುದು. ಟಮೊಟೊ ಬೆಳೆಗೆ ಎಕರೆಗೆ 1132 ಪಾವತಿಸಿದರೆ ವಿಮಾ ಮೊತ್ತ 56600 ರೂಪಾಯಿ ಪಡೆಯಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net