ಬೆಳೆಹಾನಿ ಪರಿಹಾರ ನೀಡಲು ಕ್ರಮ- ಬಿ.ಎಸ್.ಯಡಿಯೂರಪ್ಪ

BSY
Published on

ಬೆಳಗಾವಿ: ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳ ಸಮಸ್ಯೆಗಳು ಗಮನಕ್ಕೆ ಬಂದಿದ್ದು, ಮನೆ ಹಾಗೂ ಬೆಳೆ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ನಗರದ ಸಾಂಬ್ರಾ ವಿಮಾನ ನಿಲ್ದಾಣ ಸಭಾಂಗಣದಲ್ಲಿ ಮಂಗಳವಾರ ಅತಿವೃಷ್ಟಿಗೆ ಸಂಬಂಧಿಸಿದಂತೆ ನಡೆದ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳ ಶಾಸಕರು, ಸಂಸದರು, ಎಂಎಲ್‌ಸಿ, ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಕಂದಾಯ ಸಚಿವ ಆರ್.ಅಶೋಕ ಮಾತನಾಡಿ, ಖುದ್ದಾಗಿ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ವರದಿ ಸಲ್ಲಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷೃವಹಿಸಿದರೆ ಕ್ರಮ ವಹಿಸಲಾಗುವುದು ಎಂದರು.

2019-20ನೇ ಸಾಲಿನಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಹಾನಿಯಾಗಿರುವ ಮನೆಗಳಿಗೆ ಪರಿಹಾರ ಸಿಕ್ಕಿಲ್ಲ. 9 ಸಾವಿರ ಮನೆಗಳನ್ನು ಪರಿಹಾರದ ಪಟ್ಟಿಗೆ ಸೇರಿಸಿ ವಿವಿಧ ಕಂತುಗಳಲ್ಲಿ ಪರಿಹಾರ ಧನವನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿಗಳು ಕ್ರಮ ವಹಿಸಬೇಕು ಎಂದು ವಿಧಾನಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಒತ್ತಾಯಿಸಿದರು.

ಬೆಳೆ ವಿಮೆಯಲ್ಲಿ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ನಡುವೆ ಪ್ರತಿವರ್ಷ ವ್ಯತ್ಯಾಸ ಕಂಡುಬರುತ್ತಿದೆ. ಅದನ್ನು ಸರಿಪಡಿಸಲು ಮುಖ್ಯಮಂತ್ರಿಗಳು ಕ್ರಮ ವಹಿಸಬೇಕು. ಅರ್ಹ ರೈತರಿಗೆ, ಮನೆ ಕಳೆದುಕೊಂಡು ಸಂತ್ರಸ್ತರಿಗೆ ನಿಗದಿತ ಸಮಯದಲ್ಲಿಯೇ ಪರಿಹಾರ ನೀಡಬೇಕು ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಮನವಿ ಮಾಡಿದರು.

ಬೆಳಗಾವಿ ನಗರದ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ 320 ಕೋಟಿ ರೂ.ಅಗತ್ಯವಿದೆ. ಕಳೆದ ವರ್ಷ ಹಾನಿಗೊಳಗಾದ ಮನೆಗಳ ಮರು ಸಮೀಕ್ಷೆ ನಡೆಸಿ ಲಾಗಿನ್ ಆಗಲು ಅನುಕೂಲ ಕಲ್ಪಿಸಬೇಕು. ನಗರೋತ್ಥಾನ ಯೋಜನೆಯಡಿ ಅನುದಾನ ತಕ್ಷಣ ಬಿಡುಗಡೆ ಮಾಡಬೇಕು ಎಂದು ಅಭಯ ಪಾಟೀಲ ಒತ್ತಾಯಿಸಿದರು.

ಡಿಸಿಎಂ ಲಕ್ಷ್ಮಣ ಸವದಿ, ಜವಳಿ ಸಚಿವ ಶ್ರೀಮಂತ ಪಾಟೀಲ, ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಮಹಾದೇವಪ್ಪ ಯಾದವಾಡ, ಅನಿಲ ಬೆನಕೆ, ಮಹೇಶ ಕುಮಠಳ್ಳಿ, ಪಿ.ರಾಜೀವ್, ಉಮೇಶ ಕತ್ತಿ, ಮಹಾಂತೇಶ ದೊಡಗೌಡರ, ದುರ್ಯೋಧನ ಐಹೊಳೆ, ಮಹಾಂತೇಶ ಕೌಜಲಗಿ, ಲಕ್ಷ್ಮೀ ಹೆಬ್ಬಾಳ್ಕರ್, ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಎಲ್.ಅತೀಕ್, ಧಾರವಾಡ ಜಿಲ್ಲೆಯ ಶಾಸಕರಾದ ಅರವಿಂದ ಬೆಲ್ಲದ, ಶಂಕರಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ ಹಾಗೂ ಅಧಿಕಾರಿಗಳು ಇದ್ದರು.

ನದಿಗಳ ಪ್ರವಾಹ ಸಂಭವಿಸುವ ಮುನ್ನ ಮಹಾರಾಷ್ಟ್ರ ಸರ್ಕಾರದ ಜತೆ ಸಮನ್ವಯ ಸಾಧಿಸಿದ್ದರಿಂದ ಪ್ರವಾಹ ನಿರ್ವಹಣೆ ಮಾಡಲು ಸಾಧ್ಯವಾಯಿತು. ಪ್ರವಾಹ ನಿರ್ವಹಣೆಗೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ. ಅಧಿಕಾರಿಗಳು ಮಹಾ ಅಧಿಕಾರಿಗಳ ಜತೆ ಸತತ ಸಂಪರ್ಕ ಸಾಧಿಸಿದ ಪರಿಣಾಮ ಯಾವುದೇ ತೊಂದರೆಯಾಗಿಲ್ಲ. |ರಮೇಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ

ರಾಜ್ಯದಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿ ಕುರಿತು ಶೀಘ್ರದಲ್ಲಿ ಕೇಂದ್ರ ಸರ್ಕಾರಕ್ಕೆ ಹಾನಿ ವರದಿ ಸಲ್ಲಿಸಲಾಗುವುದು. ಯಾವುದೇ ಮಧ್ಯಂತರ ಪರಿಹಾರ ಕೇಳಿಲ್ಲ. ಮುಖ್ಯಮಂತ್ರಿಗಳು ಹಾನಿ ಪರಿಹಾರ ಮತ್ತು ಅಭಿವೃದ್ಧಿ ಕಾಮಗಾರಿಗಳ ಕುರಿತು ಶಾಸಕರೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡಿದ್ದಾರೆ. | ಜಗದೀಶ ಶೆಟ್ಟರ್ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net