ಹೂಬಿಡುವ ಹಂತದಲ್ಲಿ ಬಾಡಿದ ಫಸಲು

06 MDG
Published on

ಮುಂಡರಗಿ: ತಾಲೂಕಿನಲ್ಲಿ ಸಮರ್ಪಕವಾಗಿ ಮಳೆ ಸುರಿಯದೆ ರೈತರು ಸಂಕಷ್ಟದ ಸ್ಥಿತಿ ಎದುರಿಸುವಂತಾಗಿದೆ. ಹಲವು ಕಡೆ ಬಿತ್ತನೆ ಮಾಡಿದ ಬೆಳೆಗಳಿಗೆ ತೇವಾಂಶ ಕೊರತೆಯಿಂದ ಬಹುತೇಕ ಬೆಳೆ ಕುಂಠಿತವಾಗಿದೆ.

ತಾಲೂಕಿನಲ್ಲಿ 20,550 ಹೆಕ್ಟೇರ್ ಗೋವಿನಜೋಳ, 4,250 ಹೆಕ್ಟೇರ್ ಶೇಂಗಾ, 7,200 ಹೆಕ್ಟೇರ್ ಸೂರ್ಯಕಾಂತಿ, 155 ಹೆಕ್ಟೇರ್‌ತೊಗರಿ, 55 ಹೆಕ್ಟೇರ್ ಹೆಸರು, ಮತ್ತಿತರ ಬೆಳೆ ಸೇರಿ ಒಟ್ಟು 36,480 ಹೆಕ್ಟೇರ್‌ಪ್ರದೇಶದಲ್ಲಿ ಬಿತ್ತನೆಯಾಗಿದೆ. ಸೂಕ್ತ ಸಮಯಕ್ಕೆ ಮಳೆ ಬಾರದೆ ಬಿತ್ತನೆ ಕ್ಷೇತ್ರ ಕಡಿಮೆಯಾಗಿದೆ. ಬೆಳೆಗೆ ಮಳೆ ಕೊರತೆಯಿಂದ ಬೆಳೆ ಕುಂಠಿತವಾಗಿದೆ. ತೇವಾಂಶ ಕೊರತೆಯಿಂದಾಗಿ ಬೆಣ್ಣಿಹಳ್ಳಿ, ಮಕ್ತುಂಪುರ ಸೇರಿ ಕೆಲವು ಕಡೆ ಗೋವಿನಜೋಳ ಬೆಳೆಯನ್ನು ರೈತರು ಹರಗಿದ್ದಾರೆ. ಇನ್ನೂ ಕೆಲ ರೈತರು ಉಳ್ಳಾಗಡ್ಡಿ, ಮೆಣಸಿನಕಾಯಿ ಬೆಳೆಯನ್ನು ಸಹ ತೆಗೆದು ಹಾಕಿದ್ದಾರೆ.

ಬರ ಪರಿಹಾರಕ್ಕಾಗಿ ತಹಸೀಲ್ದಾರ್ ಖಾತೆಯಲ್ಲಿ ಸದ್ಯ 52ಲಕ್ಷ ರೂ. ಹಣವಿದೆ. ಸರ್ಕಾರದಿಂದ ನಿರ್ದೇಶನ ಬಂದರೆ ತಾಲೂಕು ಆಡಳಿತದಿಂದ ಎಲ್ಲ ಸಿದ್ಧತೆಯನ್ನು ಸಹ ಮಾಡಿಕೊಳ್ಳಲಾಗಿದೆ. ಸೆ.3ರಂದು ಸುರಿದ ರಭಸದ ಮಳೆಯಿಂದ ಕೆಲವು ಬೆಳೆಗಳಿಗೆ ಜೀವಬಂದಂತಾಗಿದೆ. ಆದರೆ, ಅದರಿಂದ ರೈತರಿಗೆ ಲಾಭವಾಗುವುದು ತುಂಬಾ ಕಡಿಮೆ.

ಮುಂಡರಗಿ ತಾಲೂಕಿನಲ್ಲಿ ಆಗಸ್ಟ್‌ನಲ್ಲಿ ಶೇ.40ರಷ್ಟು ಮಳೆ ಕೊರತೆಯಾಗಿದೆ. ಗೋವಿನಜೋಳ ಹೂವಾಡುವ ಹಂತದಲ್ಲಿ ಶೇ.40ರಷ್ಟು ಇಳುವರಿ ಕುಂಠಿತವಾಗಲಿದೆ. ಮುಂಗಾರಿನಲ್ಲಿ 48 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದರೂ 36,480 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಅದರಲ್ಲಿ ಮಳೆ ಕೊರತೆಯಿಂದ 18,451 ಹೆಕ್ಟೇರ್ ಬೆಳೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಆಗಸ್ಟ್‌ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.-ವೆಂಕಟೇಶಮೂರ್ತಿ ಟಿ.ಎಸ್., ಸಹಾಯಕ ಕೃಷಿ ನಿರ್ದೇಶಕ ಮುಂಡರಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net