

ಕಂಪ್ಲಿ: ಭತ್ತದ ಬೆಳೆಗೆ ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೃಷಿ ವಿಜ್ಞಾನಿಗಳು, ಕೃಷಿ ಅಧಿಕಾರಿಗಳು ಬೆಳಗೋಡುಹಾಳ್, ಅರಳಿಹಳ್ಳಿ, ಸಣಾಪುರ ಗ್ರಾಮಗಳಿಗೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
ಇದನ್ನೂ ಓದಿ:ಬೆಳೆಗಳ ರಕ್ಷಣೆಗೆ ರೈತರಿಗೆ ಸಲಹೆ
ಹಗರಿ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ರೋಗ ತಜ್ಞ ಡಾ.ಪಿ.ಪಾಲಯ್ಯ, ಮಣ್ಣು ವಿಜ್ಞಾನಿ ಡಾ.ಎಸ್.ರವಿ, ಸಹಾಯಕ ಕೃಷಿ ನಿರ್ದೇಶಕ ಸಿ.ಎ.ಮಂಜುನಾಥರೆಡ್ಡಿ, ಕೃಷಿ ಅಧಿಕಾರಿ ಕೆ.ಸೋಮಶೇಖರ ಬೆಳೆ ಪರಿಶೀಲಿಸಿ ರೈತರಿಗೆ ಸಲಹೆ ನೀಡಿದರು.
ಪ್ರಾರಂಭಿಕ ಹಂತದ ರೋಗ ಹತೋಟಿಗೆ ಬ್ಯಾಕ್ಟಿರಿಯಾನಾಶಕ್ 0.5ಗ್ರಾಂ, ತಾಮ್ರದ ಆಕ್ಸಿಕ್ಲೋರೈಡ್ 2.5 ಗ್ರಾಮನ್ನು 1 ಲೀಟರ್ ನೀರಿಗೆ ಮಿಶ್ರಣ ಮಾಡಿ, ಅಂಟು ದ್ರಾವಣ ಸೇರಿಸಿ ಸಿಂಪಡಿಸಬೇಕು. ರೋಗ ಹೆಚ್ಚಾದ ಸಂದರ್ಭದಲ್ಲಿ ಸ್ಟೆಫ್ರೋಸೈಕ್ಲೀನ್ ಸಲ್ಫೇಟ್ 0.5ಗ್ರಾಂ ಮತ್ತು ತಾಮ್ರದ ಆಕ್ಸಿಕ್ಲೋರೈಡನ್ 2.5ಗ್ರಾಮನ್ನು 1ಲೀಟರ್ ದ್ರಾವಣವನ್ನು ತೆನೆ ಹೊಡೆಯದೆ ಇರುವ ಬೆಳೆಗೆ ಸಿಂಪಡಿಸಬೇಕು. ಈಗಾಗಲೇ ತೆನೆ ಬಿಚ್ಚುವ ಹಾಗೂ ಹಾಲು ತುಂಬುವ ಹಂತದ ಬೆಳೆಗೆ ಸ್ಟೆಫ್ರೋಸೈಕ್ಲೀನ್ ಸಲ್ಫೇಟ್ 0.5ಗ್ರಾಂ ಮತ್ತು ಕಾರ್ಬೆಂಡಜಿಮ್ 1ಗ್ರಾಂ ಅನ್ನು 1 ಲೀಟರ್ ದ್ರಾವಣ ಬೆರೆಸಿ ಒಂದು ಎಕರೆಗೆ 180-200ಲೀಟರ್ ಸಿಂಪಡನೆ ದ್ರಾವಣ ಉಪಯೋಗಿಸಿ ಚೆನ್ನಾಗಿ ತೊಯ್ಯುವಂತೆ ಸಿಂಪಡಿಸಬೇಕು. ಎರಡನೇ ಹಂತದಲ್ಲಿ ಲಘು ಪೋಷಕಾಂಶ ಮಿಶ್ರಣವನ್ನು ಪ್ರತಿ ಲೀಟರ್ ನೀರಿಗೆ 3 ಗ್ರಾಂ ದ್ರಾವಣವನ್ನು ಬೆರೆಸಿ ಸಿಂಪಡಣೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿ, ಬೆಳೆ ಪುನಶ್ಚೇತನಕ್ಕೆ ಸಹಾಯವಾಗುತ್ತದೆ ಎಂದು ರೈತರಿಗೆ ಸಲಹೆ ನೀಡಿದರು. ರೈತರಾದ ಕೆ.ಕೃಷ್ಣ, ಕೊಟ್ಟೂರು ರಮೇಶ ಇತರರಿದ್ದರು.