

ಆಲಮಟ್ಟಿ: ಸದ್ಯ ತುರ್ತಾಗಿ ಬೆಳೆಗಳಿಗೆ ನೀರಿನ ಅಗತ್ಯವಿದ್ದು, ಲಾಲ್ ಬಹಾದುರ್ ಶಾಸಿ ಜಲಾಶಯದ ವ್ಯಾಪ್ತಿಯ ಎಲ್ಲ ಕಾಲುವೆಗಳಿಗೆ ನೀರು ಹರಿಸಿ ಹಿಂಗಾರು ಹಂಗಾಮಿನ ಬೆಳೆಗಳನ್ನು ರಕ್ಷಣೆ ಮಾಡಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದಿಂದ ಬೃಹತ್ ಪ್ರತಿಭಟನೆ ನಡೆಸಿ ಕೆ.ಬಿ.ಜೆ.ಎನ್.ಎಲ್ ಮುಖ್ಯ ಇಂಜಿನಿಯರ್ ಡಿ.ಬಸವರಾಜ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಅಖಂಡ ಕರ್ನಾಟಕ ರೈತ ಸಂಘದ ನೂರಾರು ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಆಲಮಟ್ಟಿಯ ರಾಮಲಿಂಗೇಶ್ವರ ದೇವಸ್ಥಾನದ ಬಳಿ ಜಮಾಯಿಸಿ ಮೆರವಣಿಗೆಯ ಮೂಲಕ ಘೋಷಣೆ ಕೂಗುತ್ತ ಮುಖ್ಯ ಇಂಜಿನಿಯರ್ ಕಚೇರಿಗೆ ತೆರಳಿ ಕೆಲ ಹೊತ್ತು ಧರಣಿ ನಡೆಸಿ ಮನವಿ ಸಲ್ಲಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆಯ ಎಲ್ಲ ಕಾಲುವೆಗಳ ಮೂಲಕ ಹಿಂಗಾರು ಹಂಗಾಮಿನ ಬೆಳೆಗಳಿಗೆ ನೀರು ಕೊಡಲು ಕಳೆದ ನ.16 ರಂದು ಆಲಮಟ್ಟಿಯ ಎಂಡಿ ಕಚೇರಿಯಲ್ಲಿ ನಡೆದ ಐ.ಸಿ.ಸಿ ಸಭೆಯಲ್ಲಿ ತಿರ್ಮಾನಿಸಲಾಗಿತ್ತು. 14 ದಿನ ನೀರು ಹರಿಸುವುದು 10 ದಿನ ಬಂದ್ ಇಡುವ ವಾರಾಬಂದಿ ಪದ್ಧತಿ ಅನುಸರಿಸಿ ಮಾರ್ಚ್‌ವರೆಗೆ ನೀರು ಹರಿಸಲಾಗುವುದೆಂದು ಸಭೆಯಲ್ಲಿ ತಿರ್ಮಾನಿಸಿದ್ದು, ಅದರಂತೆ ನಡೆದುಕೊಂಡಿಲ್ಲ. ಇಲ್ಲಿಯವರೆಗೂ ಯಾವ ಕಾಲುವೆಗಳಿಗೂ ನೀರು ಹರಿಸಿಲ್ಲ ಎಂದರು.
ಎಲ್ಲವನ್ನೂ ತ್ಯಾಗ ಮಾಡಿದ ಜಿಲ್ಲೆಯ ರೈತರಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳು ಕುಂಭಕರ್ಣ ನಿದ್ರೆಯಿಂದ ಎಚ್ಚೆತ್ತು ರೈತರಿಗೆ ನ್ಯಾಯ ದೊರಕಿಸಿ ಕೊಡಬೇಕು. ಸದ್ಯ ತುರ್ತಾಗಿ ನೀರಿನ ಅಗತ್ಯವಿದ್ದು, ಹಂತಗಳ ನೆಪ ಹೇಳದೆ ಮುಳವಾಡ ಹಾಗೂ ಚಿಮ್ಮಲಗಿ ಏತ ನೀರಾವರಿಯ ಎಲ್ಲ ಕಾಲುವೆಗಳಿಗೆ ನೀರು ಹರಿಸಬೇಕು.
ಬಸವನಬಾಗೇವಾಡಿ, ಕುದರಿಸಾಲವಾಡಗಿಯ ಮುಖ್ಯ ಕಾಲುವೆಗೆ ತುರ್ತಾಗಿ ನೀರು ಹರಿಸಬೇಕು. ಜಿಲ್ಲೆಯಲ್ಲಿಯ ಎಲ್ಲ ಕೆರೆಗಳಿಗೆ ನೀರು ಹರಿಸಿ ಸಂಪೂರ್ಣ ಭರ್ತಿ ಮಾಡಬೇಕು. ಇಲ್ಲದಿದ್ದರೆ ಆಲಮಟ್ಟಿ ಕೆ.ಬಿ.ಜೆ.ಎನ್.ಎಲ್ ಮುಖ್ಯ ಇಂಜಿನಿಯರ್ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದರು.
ವಿಠ್ಠಲ ಬಿರಾದಾರ, ಲಾಲಸಾಬ ಹಳ್ಳೂರ, ಹಣಮಂತರಾಯ ಗುಣಕಿ, ಸೀತಪ್ಪ ಗಣಿ, ರವಿ ಕೊತೀನ, ರ‌್ಯಾವಪ್ಪಗೌಡ ಪೋಲೆಸಿ ಇತರರಿದ್ದರು.