

ಚಳ್ಳಕೆರೆ: ತಾಲೂಕಿನ ಮಳೆಯಾಶ್ರಿತ ಶೇಂಗಾ ಮತ್ತು ಇತರ ಬೆಳೆಗಳ ಪರಿಸ್ಥಿತಿಯ ಅವಲೋಕನಕ್ಕೆ ಬಬ್ಬೂರು ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿ ಡಾ.ಓಂಕಾರಪ್ಪ ನೇತೃತ್ವದ ತಂಡ ಜಮೀನುಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
ತಾಲೂಕಿನ ಬಾಲೇನಹಳ್ಳಿ ಭಾಗದ ಟೊಮೋಟೋ, ಈರುಳ್ಳಿ ಬೆಳೆ ಪರಿಶೀಲಿಸಿ ಮಾತನಾಡಿದ ಡಾ.ಓಂಕಾರಪ್ಪ, ನಾಟಿ ಮಾಡಿದಾಗಿನಿಂದ ಬೆಳೆ ಉತ್ತಮವಾಗಿ ಬರುವಂತೆ ನೋಡಿಕೊಳ್ಳಲಾಗಿದೆ.
ತೇವಾಂಶ ಮತ್ತು ಶೀತ ವಾತಾವರಣಕ್ಕೆ ನುಸಿ ರೋಗ ಕಾಣಿಸಿಕೊಳ್ಳಬಹುದು.
ತಕ್ಷಣವೇ ಇಮಿಡಾಕ್ಲೋಫೈಡ್ ಅರ್ಧ ಎಂಎಲ್‌ನ್ನು ಪ್ರತಿ ಲೀಟರ್‌ನಲ್ಲಿ ಮಿಶ್ರಣ ಮಾಡಿ ಸಿಂಪಡಣೆ ಮಾಡುವಂತೆ ಸೂಚಿಸಿದರು.
ಚಿಕ್ಕೇನಹಳ್ಳಿ ಭಾಗದ ಬಾಳೆ ತೋಟ ವೀಕ್ಷಣೆ ಮಾಡಿದ ಅವರು, ಚುಕ್ಕೆ ಬಾಳೆ ಬೆಳೆಗೆ ಬಿಳಿ ನೊಣದ ಬಾಧೆ ಇದೆ.
ಇದರ ಹತೋಟಿಗೆ ಇಮಿಡಾಕ್ಲೋಫೈಡ್ ಮತ್ತು ಬೇವಿನ ಎಣ್ಣೆ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಣೆ ಮಾಡಬೇಕು.
ಶೇಂಗಾ ಮತ್ತು ತೊಗರಿ ಬೆಳೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆ ಚುಕ್ಕೆ ಮತ್ತು ಹಳದಿ ಎಲೆ ರೋಗಕ್ಕೆ ಅಜಾಕ್ಸಿಕ್ಲೋಬಿನ್ ಮತ್ತು ಟುಬುಕೊನೋಜೆಲ್ ಪ್ರತಿ ಲೀಟರ್‌ಗೆ ಮಿಶ್ರಣ ಮಾಡಿ ಸಿಂಪಡಿಸಿ ಬೆಳೆ ರಕ್ಷಣೆ ಮಾಡಿಕೊಳ್ಳಬೇಕು ಎಂದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜೆ.ಅಶೋಕ್, ತೋಟಗಾರಿಕಾ ಇಲಾಖೆ ಅಧಿಕಾರಿ ಆರ್.ವಿರೂಪಾಕ್ಷಪ್ಪ, ರೈತರಾದ ಒ.ತಿಪ್ಪೇಸ್ವಾಮಿ, ರಾಮಣ್ಣ, ಪರಮೇಶ್ವರಪ್ಪ, ಚಿದಾನಂದಪ್ಪ, ಪ್ರಶಾಂತ್‌ರೆಡ್ಡಿ, ಪಾಂಡುರಂಗಪ್ಪ, ಗುರುಮೂರ್ತಿ ಮತ್ತಿತರರು ಇದ್ದರು.