ಬೆಳೆಗೆ ಕೀಟಬಾಧೆ ವಿಜ್ಞಾನಿಗಳಿಂದ ಜಾಗೃತಿ: ಕೃಷಿ ಇಲಾಖೆ ಸಹಯೋಗದಲ್ಲಿ ಆಯೋಜನೆ

Crop pest awareness by scientists Mandya
Published on

ಮಂಡ್ಯ: ಮಳೆಯ ಅಭಾವದ ನಡುವೆಯೂ ಕೆಆರ್‌ಎಸ್ ಡ್ಯಾಂನಿಂದ ನಾಲೆಗೆ ನೀರು ಬಿಟ್ಟ ಜಿಲ್ಲೆಯಲ್ಲಿ ಎಂದಿನಂತೆ ಕೃಷಿ ಚಟುವಟಿಕೆ ನಡೆದಿವೆ. ಆದರೆ ಇದೀಗ ಬೆಳೆಗಳಿಗೆ ಕೀಟಬಾಧೆ ಕಾಡಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಹಾಗೂ ವಿ.ಸಿ ಫಾರ್ಮ್ ವಲಯ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ರೈತರ ಜಮೀನಿಗೆ ಭೇಟಿ ಕೊಟ್ಟು ಬೆಳೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಮಂಡ್ಯ ತಾಲೂಕಿನ ಮನುಗನಹಳ್ಳಿ, ಬೇವಿನಹಳ್ಳಿ ಗ್ರಾಮ, ಪಾಂಡವಪುರ ತಾಲೂಕಿನ ಅರಳಕುಪ್ಪೆ, ಹಾರೋಹಳ್ಳಿ, ಹೊಸಕೊಪ್ಪಲು, ಎಲೆಕೆರೆ ಗ್ರಾಮ ಮತ್ತು ಶ್ರೀರಂಗಪಟ್ಟಣ ತಾಲೂಕಿನ ಬೆಳೆ ಉತ್ಪಾದನೆ ಆಧಾರಿತ ಸಮೀಕ್ಷೆ ಕೈಗೊಂಡು ಭತ್ತ ಹಾಗೂ ಕಬ್ಬು ಬೆಳೆಯಲ್ಲಿ ಕಂಡುಬಂದಿರುವ ಪೋಷಕಾಂಶಗಳ ಕೊರತೆ ಮತ್ತು ಕೀಟ, ರೋಗ ಬಾಧೆಗಳ ನಿರ್ವಹಣಾ ಕ್ರಮಗಳ ಕುರಿತು ತಾಂತ್ರಿಕ ಮಾಹಿತಿ ನೀಡಿದರು.
ಮುಖ್ಯವಾಗಿ ಅಸಮತೋಲಿತ ರಸಗೊಬ್ಬರ ಬಳಕೆ ಹಾಗೂ ಅತಿ ಹೆಚ್ಚಿನ ಯೂರಿಯಾ ರಸಗೊಬ್ಬರ ಬಳಕೆಯಿಂದ ಕೃಷಿ ಬೆಳೆಗಳಲ್ಲಿ ಪ್ರಧಾನ ಪೋಷಕಾಂಶ(ಪೊಟ್ಯಾಷ್) ಹಾಗೂ ಲಘುಪೋಷಕಾಂಶಗಳ(ಜಿಂಕ್) ಕೊರತೆ ಜತೆಗೆ ಹೆಚ್ಚಿನ ಪ್ರಮಾಣದ ರೋಗ ಕೀಟ ಬಾಧೆ ಕಂಡುಬರುತ್ತಿದೆ. ಪೊಟ್ಯಾಷ್ ಕೊರತೆಯಿಂದ ಹಳೆಯ ಎಲೆಗಳ ತುದಿ ಹಾಗೂ ಅಂಚು ಹಳದಿ ಬಣ್ಣಕ್ಕೆ ತಿರುಗುತ್ತದೆ. ಪೊಟ್ಯಾಷ್ ಅಂಶವು ಸಸ್ಯಗಳಿಗೆ ರೋಗ ಕೀಟ ನಿರೋಧಕ ಶಕ್ತಿ ಒದಗಿಸುವುದು. ಜತೆಗೆ ಕಾಳುಗಳ ಕಟ್ಟುವಿಕೆಯಲ್ಲಿ ಪ್ರಮುಖ ಪಾತ್ರವಹಿಸುವುದರಿಂದ ಕೊರತೆಯಿರುವ ಕಡೆ ಪ್ರತಿ ಎಕರೆಗೆ ಪ್ರಸ್ತುತ 17 ಕೆ.ಜಿ ಪೊಟ್ಯಾಷ್ ಬಳಕೆ ಮಾಡಬೇಕು. 2ನೇ ಬಾರಿ ಕಳೆ ತೆಗೆದಾಗ ಯೂರಿಯಾ ಜತೆ ಮತ್ತೊಮ್ಮೆ 17 ಕೆ.ಜಿ. ಬಳಕೆ ಮಾಡಬೇಕಿದೆ. ಜಿಂಕ್ ಕೊರತೆಯಿಂದ ಎಲೆಗಳ ಮೇಲೆ ಕಂದು ಬಣ್ಣದ ಚುಕ್ಕೆಗಳು ಹಾಗೂ ಗೆರೆ ಕಾಣಿಸಿಕೊಳ್ಳುತ್ತವೆ. ಆನಂತರ ಕಂದು ಬಣ್ಣದ ಚುಕ್ಕೆ ಹಾಗೂ ಗೆರೆಗಳು ಗಾತ್ರದಲ್ಲಿ ಹಿಗ್ಗಿ ಎಲೆಯನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತದೆ. 8 ಕಿ.ಗ್ರಾಂ ಸತುವಿನ ಸಲ್ಫೇಟ್(ಪ್ರತಿ ಎರಡು ಬೆಳೆಗೆ ಒಂದು ಬಾರಿ) ಬಳಕೆ ಮಾಡಬೇಕಿದೆ.
ಇನ್ನು ಭತ್ತಕ್ಕೆ ಗರಿ ಮಡಿಸುವ ಹುಳು, ಕೊಳವೆ ಹುಳುಗಳ ಹಾವಳಿ ಹೆಚ್ಚಾಗಿದೆ. ಇವುಗಳ ನಿರ್ಮೂಲನೆ ಮಾಡಲು 2 ಮಿ.ಲೀ ಕ್ಲೋರೋಫೈರಿಫಾಸ್(20 ಇ.ಸಿ.) ಅಥವಾ 1.5 ಮಿ.ಲೀ ಫಿಪ್ರೋನಿಲ್(5 ಎಸ್.ಸಿ.) ಅಥವಾ 0.1 ಮಿ.ಲೀ ಪ್ಲೂಬೆಂಡಿಅಮೈಡ್ (480 ಎಸ್.ಸಿ.) ಅಥವಾ 0.2 ಗ್ರಾಂ ಪ್ಲೂಬೆಂಡಿಅಮೈಡ್ (20 ಡಬ್ಲು.ಜಿ) ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಪ್ರತಿ ಎಕರೆಗೆ 200 ಲೀಟರ್ ಸಿಂಪರಣಾ ದ್ರಾವಣ ಬೇಕಾಗುತ್ತದೆ. ಇದಲ್ಲದೆ ಕಂದು ಚುಕ್ಕೆ ರೋಗ ಮತ್ತು ದುಂಡಾಣು ಅಂಗಮಾರಿ (ಪಾಂಡವಪುರ ತಾಲೂಕು ಅರಳಕುಪ್ಪೆ ಭಾಗದಲ್ಲಿ ಮಾತ್ರ ಕಂಡುಬಂದಿದೆ. ಮೋಡ ಕವಿದ ವಾತಾವರಣ ಇದ್ದಲ್ಲಿ ರೋಗದ ಬಾಧೆ ಎಲ್ಲೆಡೆ ಹೆಚ್ಚಾಗುವ ಸಾಧ್ಯತೆಯಿದೆ. ಆದ್ದರಿಂದ ಇವುಗಳ ನಿರ್ವಹಣೆಗಾಗಿ 1 ಗ್ರಾಂ ಕಾರ್ಬೆಂಡೈಜಿಂ 50 ಡಬ್ಲು.ಪಿ. ಅಥವಾ 2 ಮಿ.ಲೀ. ಹೆಕ್ಸಾಕೋನಝೋಲ್ (5 ಎಸ್.ಸಿ.) ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಇದಕ್ಕೂ ಪ್ರತಿ ಎಕರೆಗೆ 200 ಲೀಟರ್ ಸಿಂಪರಣಾ ದ್ರಾವಣ ಬೇಕಾಗುತ್ತದೆ. ಇದಲ್ಲದೆ ದುಂಡಾಣು ಅಂಗಮಾರಿ ರೋಗ ನಿರ್ಮೂಲನೆಗೆ 0.2 ಗ್ರಾಂ ಸ್ಟ್ರೆಪ್ರೋಸೈಕ್ಲಿನ್ ಮತ್ತು 1 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಜಾಗೃತಿಯಲ್ಲಿ ವಲಯ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ.ಕೇಶವಯ್ಯ, ಡಾ.ವಿ.ಬಿ.ಸನತ್‌ಕುಮಾರ್, ಡಾ.ಎನ್.ಎಸ್.ಕಿತ್ತೂರಮಠ, ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ, ಸಹಾಯಕ ಕೃಷಿ ನಿರ್ದೇಶಕರಾದ ಜಿ.ಶ್ರೀಹರ್ಷ, ಸುನೀತಾ, ಮಂಜುನಾಥ್, ಪ್ರಿಯದರ್ಶಿನಿ ಇತರರಿದ್ದರು.

ಕಬ್ಬಿಗೆ ಗೊಣ್ಣೆ ಹುಳು ಕಾಟ
ಕಬ್ಬು ಬೆಳೆಯಲ್ಲಿ ಗೊಣ್ಣೆ ಹುಳು ಮತ್ತು ಆದಿ ಸುಳಿ ಕೊರಕ ಕೀಟಗಳ ಬಾಧೆ ಕಂಡುಬಂದಿದೆ. ಗೊಣ್ಣೆಹುಳು ಬಿತ್ತನೆಯ ಕಬ್ಬಿನ ತುಂಡನ್ನು ಕೊರೆಯುವುದರಿಂದ, ಬೇರು ಸೇರಿದಂತೆ ಇತರೆ ಭಾಗಗಳನ್ನು ತಿನ್ನುವುದರಿಂದ ಎಲೆಗಳು ಒಣಗಿದಂತಾಗುತ್ತದೆ. ಅಂತೆಯೇ ಆದಿಸುಳಿ ಕೊರಕ ಮರಿಹುಳುಗಳು ಬುಡದಲ್ಲಿ ಕೊರೆದು ಸುಳಿಯಲ್ಲಿ ಏರಿ ಕಾಂಡವನ್ನು ತಿನ್ನುವುದರಿಂದ ಸುಳಿ ಒಣಗುತ್ತದೆ. ಪರಿಣಾಮ ಕೈಯಿಂದ ಎಳೆದರೆ ಸುಲಭವಾಗಿ ಸುಳಿ ಹೊರಬರುತ್ತದೆ. ಆದ್ದರಿಂದ ಕೀಟಗಳ ನಿರ್ಮೂಲನೆ ಮಾಡಲು 2-5 ಮಿ.ಲೀ. ಕ್ಲೋರೋಫೈರಿಫಾಸ್(20 ಇ.ಸಿ)(ಕೀಟಗಳ ಸಾಂಧ್ರತೆಗೆ ಅನುಗುಣವಾಗಿ) ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು ಅಥವಾ ಬುಡಕ್ಕೆ ಹಾಕಬಹುದು. ಪ್ರತಿ ಎಕರೆಗೆ 300 ಲೀಟರ್ ಸಿಂಪರಣಾ ದ್ರಾವಣ ಬೇಕಾಗುತ್ತದೆ. ಅಥವಾ 9 ಕೆ.ಜಿ. ಕ್ಲೋರಂಟ್ರಾನಿಲಿಪ್ರೋಲ್ (0.4 ಜಿ) ಮರಳಿನೊಂದಿಗೆ ಮಿಶ್ರಣ ಮಾಡಿ ಗಿಡದ ಬುಡಕ್ಕೆ ಹಾಕಿ ನಂತರ ಮಣ್ಣು ಹಾಕಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net