

ಗುಂಡ್ಲುಪೇಟೆ: ಕಾಡಿನಿಂದ ಆಹಾರ ಅರಸಿ ಗ್ರಾಮಗಳತ್ತ ಬಂದ ಒಂಟಿ ಸಲಗವೊಂದು ಕಾಡಂಚಿನ ತಾಲೂಕಿನ ಮಂಚಹಳ್ಳಿ, ಕೋಟೆಕೆರೆಯ ಜಮೀನುಗಳಿಗೆ ಲಗ್ಗೆ ಇಟ್ಟು ಟೊಮ್ಯಾಟೊ, ತೆಂಗನ್ನು ತಿಂದು ನಾಶಪಡಿಸಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ವಲಯದ ಕಾಡಂಚಿನ ಮಂಚಹಳ್ಳಿ ಗ್ರಾಮದ ಮಹೇಶ್, ಕೋಟೆಕೆರೆಯ ಮಾದೇಗೌಡ ಅವರಿಗೆ ಸೇರಿದ ಜಮೀನುಗಳಿಗೆ ಆನೆ ಲಗ್ಗೆ ಇಟ್ಟು ಫಸಲುಗಳನ್ನು ತಿಂದು, ತುಳಿದು ನಾಶಪಡಿಸಿದೆ. ಮಹೇಶ್ ಅವರ ನಾಲ್ಕು ಎಕರೆ ಜಮೀನು ಹಾಗೂ ಮಾದೇಗೌಡ ಅವರಿಗೆ ಸೇರಿದ 3 ಎಕರೆ ಟೊಮ್ಯಾಟೊ, ತೆಂಗಿನ ಮರಗಳನ್ನು ನಾಶಪಡಿಸಿದೆ.
ರಾತ್ರಿ ಗಸ್ತು ಹೆಚ್ಚಿಸುವಂತೆ ಮನವಿ ಮಾಡಿದ್ದರೂ ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳುತ್ತಿಲ್ಲ. ಇನ್ನಾದರೂ ಅರಣ್ಯ ಇಲಾಖೆ ಕಾಡಾನೆಗಳ ಹಾವಳಿ ತಡೆಗಟ್ಟಲು ಹೆಚ್ಚಿನ ಸಿಬ್ಬಂದಿ ನಿಯೋಜಿಸಬೇಕು. ವನ್ಯಜೀವಿ ದಾಳಿ ನಡೆದ ಕೂಡಲೇ ಜಮೀನುಗಳಿಗೆ ತೆರಳಿ ಬೆಳೆ ನಷ್ಟದ ಬಗ್ಗೆ ಮಹಜರು ನಡೆಸಿ ಸೂಕ್ತ ಪರಿಹಾರ ಕೊಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡ ಮಹಾದೇವನಾಯಕ ಒತ್ತಾಯಿಸಿದ್ದಾರೆ.