

ಮಡಿಕೇರಿ: ಬಿರುನಾಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಡಗರಕೇರಿ ಗ್ರಾಮದಲ್ಲಿ ಕಾಡಾನೆ ಹಿಂಡುಗಳು ಕಾಫಿ ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದಲ್ಲಿ ನಷ್ಟ ಮಾಡಿದ್ದು ಅರಣ್ಯ ಇಲಾಖೆ ನಷ್ಟಕೊಂಡ ಬೆಳೆಗಾರರಿಗೆ ಸೂಕ್ತ ಪರಿಹಾರ ತಕ್ಷಣ ನೀಡಬೇಕೆಂದು ಬೆಳೆಗಾರರು ಒತ್ತಾಯಿಸಿದ್ದಾರೆ.
ಗ್ರಾಮದ ಬಲ್ಯಮೀದೇರಿರ ಎಂ.ರನ್ನು ಮತ್ತು ಮಂಜುರವರ ಕಾಫಿ ತೋಟದಲ್ಲಿ ಕಾಡಾನೆ ಮರಿ ಹಾಕಿ ಅಲ್ಲಿಯೇ ಕಾಡಾನೆ ಹಿಂಡುಗಳು ಬೀಡುಬಿಟ್ಟ ಹಿನ್ನಲೆ ಕಾಫಿ, ಕಾಳುಮೆಣಸು ಬೆಳೆಗಳನ್ನು ಅಪಾರ ಪ್ರಮಾಣದಲ್ಲಿ ನಷ್ಟ ಮಾಡಿದ್ದು ಕಾಫಿ ಗಿಡಗಳು ಬೇರು ಸಹಿತ ನೆಲಕ್ಕೆ ಬಿದ್ದಿವೆ. ಕಾಫಿ ಗಿಡಗಳನ್ನು ಕಾಡಾನೆಗಳು ಕಾಲಿನಲ್ಲಿ ತುಳಿದು ಬೇರು ಸಹಿತ ಎಳೆದು ಹಾಕಿವೆ. ಫಸಲು ಬರುವ ಗಿಡಗಳು ನಷ್ಟವಾಗಿದ್ದು ಈ ಬಗ್ಗೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ವದಗಿಸಬೇಕೆಂದು ನಷ್ಟಗೊಳಗಾದ ಬೆಳೆಗಾರರು ಒತ್ತಾಯಿಸಿದ್ದಾರೆ.
ರಾತ್ರಿ ಕಾಡಾನೆ ಬಂದಿರುವ ಸುಳಿವು ತಿಳಿದು ಮರುದಿನ ಹಗಲು ತೋಟ ಪರಿಶೀಲಿಸಲು ತೆರಳಿದ ಬೆಳೆಗಾರ ಬಲ್ಯಮೀದೇರಿರ ರನ್ನುರವರ ಮೇಲೆ ಏಕಾಏಕಿ ಕಾಡಾನೆ ಎದುರಾಗಿದ್ದು ಸ್ವಲ್ಪದರಲ್ಲಿ ಬೆಳೆಗಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೊಡಗು ಬೆಳೆಗಾರರ ಒಕ್ಕೂಟ ತೀವ್ರ ಖಂಡನೆ: ಫಸಲು ಸಹಿತ ನೂರಾರು ಕಾಫಿ ಗಿಡಗಳು ಕಾಡಾನೆ ಹಿಂಡುಗಳಿಂದ ನಷ್ಟವಾಗಿದ್ದು ಬೆಳೆಯೊಂದಿಗೆ ಕಾಫಿ ಗಿಡಗಳು ಸಹ ಬೇರುಸಹಿತ ನಷ್ಟವಾಗಿದ್ದು, ಇಂತಹ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಪ್ರಶ್ನಿಸಿದ್ದ ಬೆಳೆಗಾರನ ವಿರುದ್ಧ ಅರಣ್ಯ ಇಲಾಖೆಯ ಫಾರೆಸ್ಟರ್ ಲಿಂಗಪ್ಪ ನೀಡಿರುವ ದೂರಿನ ಹಿನ್ನೆಲೆ ಪೋಲಿಸ್ ಇಲಾಖೆ ಪ್ರಕರಣ ದಾಖಲಿಸಿರುವುದನ್ನು ಕೊಡಗು ಬೆಳೆಗಾರರ ಒಕ್ಕೂಟ ತೀವ್ರವಾಗಿ ಖಂಡಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಒಕ್ಕೂಟದ ಅಧ್ಯಕ್ಷ ಕೇಚಂಡ ಎಂ.ಕುಶಾಲಪ್ಪ, ಕಾಡಾನೆ ದಾಳಿಯಿಂದ ನೂರಾರು ಫಸಲು ಬರುವ ಕಾಫಿ ಗಿಡಗಳು ನಷ್ಟವಾಗಿದ್ದು ಇದನ್ನು ನೋಡಿ ಬೆಳೆಗಾರ ಕಣ್ಣೀರಿಡುವಂತಾಗಿದೆ. ಈ ಬಗ್ಗೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ಪ್ರಶ್ನಿಸಿದ್ದ ಬೆಳೆಗಾರ ಬಿ.ಎಂ.ರನ್ನು ಅವರ ಮೇಲೆ ಕೊಲೆ ಬೆದರಿಕೆ, ಅವಾಚ್ಯ, ಶಬ್ದಗಳಿಂದ ನಿಂದನೆ ಮತ್ತು ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಸುಳ್ಳು ಪ್ರಕರಣವನ್ನು ದಾಖಲಿಸಲಾಗಿದೆ. ತಮಗೆ ಆದ ನಷ್ಟವನ್ನು ಬೆಳೆಗಾರರು ಪ್ರಶ್ನಿಸುವುದೇ ಅಪರಾಧವಾಗಿದೆ.
ಅರಣ್ಯ ಇಲಾಖೆ ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿ ವನ್ಯ ಪ್ರಾಣಿಗಳನ್ನು ಗ್ರಾಮಕ್ಕೆ ನುಸುಳದಂತೆ ಕರ್ತವ್ಯ ನಿರ್ವಹಿಸಿ ಅಮಾಯಕರ ಜೀವ ಹಾನಿ ಹಾಗೂ ರೈತರ ಬೆಳೆ ನಷ್ಟ ಮಾಡುವುದನ್ನು ತಪ್ಪಿಸಬೇಕು. ಬೆಳೆ ನಷ್ಟಗೊಂಡ ಬೆಳೆಗಾರನ ಮೇಲೆ ಬೆಳೆ ನಷ್ಟದ ನೋವು ಒಂದು ಕಡೆ ಅನುಭವಿಸುತ್ತಿರುವಾಗ ಅವರ ಮೇಲೆಯೇ ಪ್ರಕರಣ ದಾಖಲಿಸಿ ಕಿರುಕುಳ ನೀಡುವ ಅರಣ್ಯ ಇಲಾಖೆಯ ಉದ್ಧಟತನವನ್ನು ಬೆಳೆಗಾರರ ಒಕ್ಕೂಟ ಖಂಡಿಸುತ್ತದೆ. ಈ ಪ್ರಕರಣವನ್ನು ಕೂಡಲೇ ವಾಪಸು ಪಡೆಯಬೇಕು. ಇಲ್ಲದಿದ್ದರೆ ಅರಣ್ಯ ಇಲಾಖೆಯ ಕಚೇರಿ ಎದುರು ಬೆಳೆಗಾರರನ್ನು ಸಂಘಟಿಸಿ ಪ್ರತಿಭಟನೆ ನಡೆಸುವ ಸಿದ್ಧತೆ ನಡೆಸುವುದಾಗಿ ಎಚ್ಚಸಿದ್ದಾರೆ.