

ಗದಗ: ಈಗಾಗಲೇ ರಾಜ್ಯದ 191 ತಾಲೂಕುಗಳನ್ನು ಸರ್ಕಾರ ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿದೆ. ಗದಗ ಜಿಲ್ಲೆಯ 7 ತಾಲೂಕುಗಳ ಪೈಕಿ ಮುಂಡರಗಿ ಹೊರತುಪಡಿಸಿ ಉಳಿದ 6 ತಾಲೂಕುಗಳನ್ನು ತೀವ್ರ ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದ್ದು ಬರಪರಿಸ್ಥಿತಿ ಸಮರ್ಪಕವಾಗಿ ನಿಭಾಯಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಸಚಿವ ಡಾ.ಎಚ್.ಕೆ.ಪಾಟೀಲ ಅವರು ಸೂಚಿಸಿದರು.
ಜಿಲ್ಲಾಡಳಿತ ಭವನದಲ್ಲಿ ಮಂಗಳವಾರದಂದು ಜರುಗಿದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. ಗದಗ ಜಿಲ್ಲೆಯ 6 ತಾಲೂಕುಗಳನ್ನು ಈಗಾಗಲೇ ತೀವ್ರ ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದ್ದು ಮುಂಡರಗಿ ತಾಲೂಕಿನ ಅಧ್ಯಯನ ಇನ್ನೂ ನಡೆದಿದೆ. ಅಧ್ಯಯನ ವರದಿ ನಂತರ ಘೋಷಣೆ ಮಾಡಲಾಗುವುದು.
ಜಿಲ್ಲೆಯಲ್ಲಿ 2,13,941 ಹೆಕ್ಟೇರ್ ಪ್ರದೇಶ ಹಾನಿಗೊಳಗಾಗಿದೆ. 1,38,898 ರೈತರು ಇದರಿಂದ ತೊಂದರೆಗೊಳಗಾಗಿದ್ದಾರೆ. ಎನ್.ಡಿ.ಆರ್.ಎಫ್. ಪ್ರಕಾರ ಹೆಕ್ಟೇರ್ ಗೆ ಒಣಬೇಸಾಯಕ್ಕೆ 8500 ರೂ, ಹಾಗೂ ನೀರಾವರಿ ಜಮೀನಿಗೆ 17,000 ರೂ. ಹೆಕ್ಟೇರ್‍ನಂತೆ ಲೆಕ್ಕ ಮಾಡಲಾಗಿ ಜಿಲ್ಲೆಯಲ್ಲಿ ಒಟ್ಟು 215.53 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. 1,515.25 ಕೋಟಿ ರೂ. ನೈಜ ಹಾನಿಯಾಗಿದ್ದು ಈ ಕುರಿತು ರಾಜ್ಯ ಸರ್ಕಾರಕ್ಕೆ ಮಾಹಿತಿ ಒದಗಿಸಲಾಗಿದೆ.
ಮುಂಬರುವ ದಿನಗಳಲ್ಲಿ ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿ ಮಾಡಲು ಸರ್ಕಾರವು ಸಕಲ ಪ್ರಯತ್ನ ಮಾಡಲಾಗುತ್ತಿದೆ. ಬರಪರಿಸ್ಥಿತಿ ಸಮರ್ಪಕವಾಗಿ ನಿಭಾಯಿಸಲು ಜಾನುವಾರುಗಳಿಗೆ ಅನುಕೂಲವಾಗುವಂತೆ ಪಂಚಾಯತ್ ಮಟ್ಟದಲ್ಲಿ ಹಾಗೂ ಹೋಬಳಿ ಮಟ್ಟಗಳಲ್ಲಿ ಮೇವು ಬ್ಯಾಂಕ್ ಪ್ರಾರಂಭಿಸಲಾಗುವುದು. ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ( ನರೇಗಾ) ಯೋಜನೆಯಡಿ ಇದ್ದ 100 ಮಾನವ ದಿನಗಳನ್ನು 150 ಕ್ಕೆ ಹೆಚ್ಚಿಸಲಾಗುವುದು. ಇದರಿಂದ ಕೂಲಿ ಕಾರ್ಮಿಕರಿಗೆ, ಬಡವರಿಗೆ, ಉದ್ಯೋಗ ಒದಗಿಸಿ ಆರ್ಥಿಕ ಸಹಾಯ ದೊರಕಿದಂತಾಗುತ್ತದೆ ಎಂದು ಸಚಿವರು ತಿಳಿಸಿದರು.
ಬರ ಪರಿಸ್ಥಿತಿ ನಿಭಾಯಿಸುವಲ್ಲಿ ಜಿಲ್ಲೆಯ ಸಿಂಗಟಾಲೂರು ಮತ್ತು ನವಿಲು ತೀರ್ಥದಲ್ಲಿ ಅಗತ್ಯ ನೀರು ಸಂಗ್ರಹಣೆ ಮಾಡಲಾಗಿದ್ದು ಸಂಗ್ರಹಿಸಲಾದ ನೀರನ್ನು ಕುಡಿಯಲು ಮಾತ್ರವೇ ಬಳಕೆಗೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಅಗತ್ಯವಿರುವ ಕಡೆಗೆ ಬೋರ್‍ವೆಲ್ ಕೊರೆಸುವ ವ್ಯವಸ್ಥೆ ಮಾಡಲಾಗುವುದು. ಒಂದು ವೇಳೆ ಜಲಸಂಪನ್ಮೂಲಗಳ ಕೊರೆತೆಯಿರುವ ಪ್ರದೇಶಗಳಲ್ಲಿ ಟ್ಯಾಂಕರ್‍ಗಳ ಮೂಲಕ ನೀರು ಸರಬರಾಜಿಗೆ ಕ್ರಮ ವಹಿಸಲಾಗುವುದು. ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಲ್ಲಿ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಲು ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ವಿಶೇಷ ಸಹಾಯವಾಣಿ ತೆರೆಯಲಾಗುವುದು. ಒಟ್ಟಾರೆಯಾಗಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಜಿಲ್ಲಾಡಳಿತ ಕ್ರಿಯಾಶೀಲವಾಗಿ ಸಾರ್ವಜನಿಕರ ತೊಂದರೆಗೆ ಸ್ಪಂದಿಸಿ ಪರಿಹಾರ ಒದಗಿಸಲಿದೆ ಎಂದು ಸಚಿವ ಎಚ್.ಕೆ.ಪಾಟೀಲ ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು