ಜಿಲ್ಲೆಗೆ 34.99 ಕೋಟಿ ಹೆಸರು ಬೆಳೆ ವಿಮೆ ! ರಾಜ್ಯದಲ್ಲೇ ಅತೀ ಹೆಚ್ಚು ಹೆಸರು ಬೆಳೆ ವಿಮೆ.

scan0001
Published on

ಶಿವಾನಂದ ಹಿರೇಮಠ ಗದಗ
ಪ್ರಸಕ್ತ ಸಾಲಿನಲ್ಲಿ ಮುಂಗಾರು ಕೊರತೆ ಹಿನ್ನೆಲೆ ಜಿಲ್ಲೆಯಲ್ಲಿ ಸಂಪೂರ್ಣ ಹೆಸರು ಬೆಳೆ ನಾಶವಾಗಿದ್ದು, ಈ ಬಾರಿ ಜಿಲ್ಲೆಗೆ ಅತೀ ಹೆಚ್ಚು ಹೆಸರು ಬೆಳೆ ವಿಮೆ ಮಂಜೂರಾಗಿದೆ. ರಾಜ್ಯದಲ್ಲಿ ಹೆಸರು ಬೆಳೆಗೆ 42 ಕೋಟಿ ಒನ್​ ಟೈಂ ಸೆಟ್ಲಮೆಂಟ್​(ಓಟಿಎಸ್​) ವಿಮೆ ನೀಡಲು ಖಾಸಗಿ ವಿಮೆ ಕಂಪನಿ ಒಪ್ಪಿಕೊಂಡಿದೆ. ಅದರಲ್ಲಿ ಗದಗ ಜಿಲ್ಲೆಗೆ ಸಿಂಹ ಪಾಲು ದೊರೆತಿದ್ದು ಒಟ್ಟಾರೆ 34.99 ಕೋಟಿ ರೂ. ದೊರೆತಿದೆ.
ಜಿಲ್ಲೆಯ ಪ್ರಸಕ್ತ ಸಾಲಿನ ಮುಂಗಾರು ಆರಂಭದಲ್ಲಿ ಕೆಲವಡೆ ಹೆಸರು ಬಿತ್ತನೆ ಜರುಗಿತ್ತು. ಆದರೆ, ಸಕಾಲಕ್ಕೆ ಮಳೆಯಾಗದ ಕಾರಣ ಕೃಷಿ ಇಲಾಖೆ ಹೊಂದಿದ್ದ 1.25 ಲಕ್ಷ ಹೆಕ್ಟೇರ್​ ಬಿತ್ತನೆ ಗುರಿ ಸಾಧ್ಯವಾಗಲಿಲ್ಲ. ಬಿತ್ತನೆ ಗುರಿ ಪೈಕಿ ಶೇ. 25ಕ್ಕಿಂತ ಕಡಿಮೆ ಬಿತ್ತನೆ ಜರುಗಿದೆ. 27183 ಸಾವಿರ ಹೆಕ್ಟೇರ್​(ಶೇ.21.75) ಬಿತ್ತನೆ ಮಾತ್ರ ನಡೆದಿದ್ದು, ಬಿತ್ತದ ಬೆಳೆಯೂ ಸಂಪೂರ್ಣ ನಾಶವಾಗಿದೆ. ಹೆಸರಿ ಬೆಳೆ ಪರಿಹಾರಕ್ಕೆ ರೈತ ಮುಖಂಡರು ಹಲವು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆ ರೈತ ಮುಖಂಡರು, ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ವಿಮೆ ಕಂಪನಿ ಅಧಿಕಾರಿಗಳ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ಸಂಕಷ್ಟ ಸೂತ್ರದ ಮೂಲಕ ವಿಮೆ ಪರಿಹಾರ ಕಂಡುಕೊಳ್ಳಲಾಗಿದೆ. ಅದರಂತೆ ವಿಮೆ ಪರಿಹಾರದ ಶೇ. 25ರಷ್ಟು ವಿಮೆಯನ್ನು ಒಟಿಎಸ್​ ಮೂಲಕ ರೈತರ ಖಾತೆಗೆ ನೀಡಲು ತೀರ್ಮಾಣ ಕೈಗೊಳ್ಳಲಾಗಿತ್ತು.
ಈಗಾಗಲೇ ಡಿಬಿಟಿ ಮೂಲಕ ಬೆಳೆ ವಿಮೆ ಪರಿಹಾರ ನೀಡುವ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, 15 ದಿನದ ಒಳಗಾಗಿ ರೈತರ ಖಾತೆಗೆ ಹೆಸರು ಬೆಳೆ ವಿಮೆ ಪರಿಹಾರ ದೊರೆಯಲಿದೆ.

ವಿಮಾ ಕಂತು ಮತ್ತು ಪರಿಹಾರ:
ಪ್ರತಿ ಹೆಕ್ಟೇರ್​ಗೆ ರೈತರು 665 ರೂ. ವಿಮಾ ಕಂತು ಪಾವತಿಸಿದ್ದಾರೆ. ಜಿಲ್ಲೆಯಿಂದ 2.60 ಕೋಟಿ ರೂ.ವಿಮಾ ಕಂತು ಪಾವತಿ ಆಗಿದೆ. ನಿಯಮ ಪ್ರಕಾರ ಹೆಕ್ಟೇರ್​ ಪ್ರದೇಶಕ್ಕೆ 33250 ಹೆಸರು ಬೆಳೆ ವಿಮೆ ಪರಿಹಾರ ಜಮೆ ಆಗಬೇಕು. ಆದರೆ ಶೇ.25 ಕ್ಕಿಂತ ಬಿತ್ತನೆ ಜರುಗಿ, ಕೆಲವಡೆ ಬಿತ್ತನೆಯೇ ಆಗದ ಹಿನ್ನೆಲೆ ಒಟ್ಟಾರೆ ಹೆಕ್ಟೇರ್​ಗೆ ಬೆಳೆ ವಿಮೆ ಪರಿಹಾರದ ಶೇ.25 ರಷ್ಟು ವಿಮೆ ಪರಿಹಾರ ಪಾವತಿ ಮಾಡಲಾಗುತ್ತಿದೆ. ಈ ಪ್ರಕಾರ ಪ್ರತಿ ಹೆಕ್ಟೇರ್​ಗೆ ರೈತನ ಖಾತೆಗೆ ಸರಾಸರಿ 8312.5 ರೂ.ಗಳು ಜಮೆ ಆಗಲಿದೆ.

ತಾಲೂಕುವಾರು(ಹೆಕ್ಟೇರ್​ಗಳಲ್ಲಿ):
ತಾಲೂಕು - ಹೆಸರು ಬಿತ್ತನೆ ಗುರಿ - ಬಿತ್ತನೆ - ಬೆಳೆವಿಮೆ ಪರಿಹಾರ(ಕೋಟಿ)

ಗದಗ - 35500 ಹೆ. - 8249 ಹೆ. - 9.49 ಕೋಟಿ
ಗಜೇಂದ್ರಗಡ - 16350 ಹೆ. - 3839 ಹೆ. - 6.75 ಕೋಟಿ
ಲಕ್ಷ್ಮೇಶ್ವರ - 4800 ಹೆ. - 1250 ಹೆ. - 9.50 ಕೋಟಿ
ನರಗುಂದ - 17600 ಹೆ. - 4500 ಹೆ. - 6 ಕೋಟಿ
ರೋಣ - 37750 ಹೆ. - 8893 ಹೆ. - 11.25 ಕೋಟಿ
ಶಿರಹಟ್ಟಿ - 4000 ಹೆ. - 403 ಹೆ. - 4.56 ಕೋಟಿ

ಬಾಕ್ಸ್​:
ಮುಂಡರಗಿಯಲ್ಲಿ 9000 ಹೆಕ್ಟೇರ್​ ಬಿತ್ತನೆ ಗುರಿ ಪೈಕಿ 55 ಹೆಕ್ಟೇರ್​ ಪ್ರದೇಶದಲ್ಲಿ ಹೆಸರು ಬಿತ್ತನೆ ಆಗಿದೆ. ಆದರೆ, ಮುಂಡರಗಿ ಜಿಲ್ಲೆಯ ಹೆಸರು ಬೆಳೆಗೆ ವಿಮೆ ಪರಿಹಾರ ನೀಡಲಾಗಿಲ್ಲ.

ಕೋಟ್​:
ರಾಜ್ಯದಲ್ಲೇ ಅತ್ಯಧಿಕ 34.99 ಕೋಟಿ ಹೆಸರು ಬೆಳೆ ವಿಮೆಗೆ ಮಂಜೂರಾತಿ ದೊರೆತಿದೆ. ಆಡಳಿತಾತ್ಮಕ ಪ್ರಕ್ರಿಯೆ ಮುಗಿದಿದ್ದು ಸದ್ಯದಲ್ಲೆ ರೈತರ ಖಾತೆಗೆ ಜಮೆ ಮಾಡಲಾಗುವುದು. ವಿಮೆ ಪರಿಹಾರ ವಿಳಂಬ ಆಗುತ್ತದೆ ಎಂದು ರೈತರು ಆತಂಕಕ್ಕೆ ಒಳಪಡುವ ಅಗತ್ಯತೆ ಇಲ್ಲ
- ವೈಶಾಲಿ ಎಂ.ಎಲ್​. ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net