ಬೆಳೆ ನಷ್ಟ ಅನುಭವಿಸುತ್ತಿರುವ ರೈತರಿಗೆ ಆಧುನಿಕ ಕೃಷಿ ಪದ್ಧತಿಯ ಜಾಗೃತಿ ಮೂಡಿಸಿ: ಎಡಿಸಿ ಡಾ.ಎಚ್.ಎಲ್.ನಾಗರಾಜು ಸಲಹೆ

Crop Insurance Scheme Steering Committee Meeting mandya
Published on

ಮಂಡ್ಯ: ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ, ಪ್ರಕೃತಿ ವಿಕೋಪ ಸೇರಿದಂತೆ ಹಲವು ಕಾರಣದಿಂದ ಬೆಳೆ ನಷ್ಟವಾಗಿ ರೈತರು ಸಂಕಷ್ಟಕ್ಕೆ ಸಿಲುಕಿತ್ತಿದ್ದಾರೆ. ಆದ್ದರಿಂದ ಆಧುನಿಕ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಿ ಎಂದು ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್.ನಾಗರಾಜು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಬೆಳೆ ವಿಮಾ ಯೋಜನೆ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರ ಹಿತ ದೃಷ್ಟಿಯಿಂದ ರೈತ ಸುರಕ್ಷಾ-ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆ ಜಾರಿಗೆ ತರಲಾಗಿದೆ. ಹಿಂಗಾರು ಹಾಗೂ ಬೇಸಿಗೆ ಹಂಗಾಮುಗಳಲ್ಲಿ ಬೆಳೆಗೆ ಸಂಬಂಧಿಸಿದಂತೆ ಯಾವ ಯಾವ ಬೆಳೆಗಳನ್ನು ಬೆಳೆದರೆ ಉತ್ತಮ ಲಾಭ ಸಿಗುತ್ತದೆ. ಯಾವ ಬೆಳೆಯ ಮೇಲೆ ವಿಮೆ ಮಾಡಿಸಿಕೊಳ್ಳಬೇಕೆಂದು ರೈತರಿಗೆ ಇದರ ಬಗ್ಗೆ ಅರಿವು ಮೂಡಿಸಿ ಎಂದು ಕೃಷಿ ಅಧಿಕಾರಿಗೆ ಸೂಚಿಸಿದರು.

ಜಿಲ್ಲೆಗೆ ಸಂಬಂಧಿಸಿದಂತೆ ಎಸ್.ಬಿ.ಐ ಜನರಲ್ ಇನ್ಸೂರೆನ್ಸ್ ಕಂಪನಿಯನ್ನು ವಿಮಾ ಸಂಸ್ಥೆಯಾಗಿ ನಿಗದಿಪಡಿಸಲಾಗಿದೆ. ಇದರ ಅನುಸಾರವಾಗಿ ರೈತರು ಸಂಬಂಧಪಟ್ಟ ಬ್ಯಾಂಕ್, ಸಾಮಾನ್ಯ ಸೇವಾಕೇಂದ್ರ ಅಥವಾ ಗ್ರಾಮಒನ್ ಕೇಂದ್ರಗಳಲ್ಲಿ ನಿಗದಿತ ದಿನಾಂಕದೊಳಗೆ ವಿಮಾ ಕಂತನ್ನು ಪಾವತಿ ಮಾಡಬೇಕಾಗಿರುತ್ತದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಿಂಗಾರು ಹಂಗಾಮಿಗೆ ಮದ್ದೂರು, ಮಂಡ್ಯ ನಾಗಮಂಗಲ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲೂಕಿನ ಅನುಸೂಚಿತ ಗ್ರಾಪಂನಲ್ಲಿ ಹುರುಳಿ(ಮಳೆಯಾಶ್ರಿತ) ಬೆಳೆಗೆ ರೈತರು ಬೆಳೆ ವಿಮೆ ನೋಂದಾಯಿಸಿಕೊಳ್ಳಬೇಕು. ಬೇಸಿಗೆ ಹಂಗಾಮಿಗೆ ಮಂಡ್ಯ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲೂಕಿನ ಅಧಿಸೂಚಿತ ಗ್ರಾಪಂನಲ್ಲಿ ಭತ್ತ(ನೀರಾವರಿ) ಬೆಳೆಗೆ ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಕೊಳ್ಳಬಹುದು ಎಂದು ಹೇಳಿದರು.

ಹೋಬಳಿ ಮಟ್ಟದಲ್ಲಿ ಹಿಂಗಾರು ಹಂಗಾಮಿಗೆ ಅಧಿಸೂಚಿತ ಹೋಬಳಿಗಳಲ್ಲಿ ಭತ್ತ(ನೀರಾವರಿ), ರಾಗಿ(ನೀರಾವರಿ), ರಾಗಿ(ಮಳೆಯಾಶ್ರಿತ) ಮತ್ತು ಹುರುಳಿ(ಮಳೆಯಾಶ್ರಿತ) ಬೆಳೆಗೆ ಹಾಗೂ ಪಾಂಡವಪುರ ತಾಲೂಕು ಚಿನಕುರುಳಿ, ಮೇಲುಕೋಟೆ ಮತ್ತು ಕಸಬಾ ಹೋಬಳಿಯಲ್ಲಿ ಟೊಮ್ಯೊಟೋ ಬೆಳೆಗೆ ಮತ್ತು ಬೇಸಿಗೆ ಹಂಗಾಮಿಗೆ ಅಧಿಸೂಚಿತ ಹೋಬಳಿಗಳಲ್ಲಿ ಭತ್ತ(ನೀರಾವರಿ) ಮತ್ತು ರಾಗಿ (ನೀರಾವರಿ) ಬೆಳೆಗೆ ಹಾಗೂ ಪಾಂಡವಪುರ ತಾಲೂಕು ಮೇಲುಕೋಟೆ ಹೋಬಳಿಯಲ್ಲಿ ಟೊಮ್ಯೊಟೋ ಬೆಳೆಗೆ ವಿಮೆ ನೋಂದಾಯಿಸಿಕೊಳ್ಳಬಹುದು ಎಂದು ವಿವರಿಸಿದರು.

ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್ ಮಾತನಾಡಿ, ಹನಿ ನೀರಾವರಿ ಬಳಸಿ ಉತ್ತಮ ಇಳುವರಿ ಕಬ್ಬನ್ನು ಬೆಳೆಯಬಹುದು. ಇದಕ್ಕಾಗಿ ಶೇ.45 ರಿಂದ 90ರಷ್ಟು ಸಹಾಯಧನವನ್ನು ಕೃಷಿ ಇಲಾಖೆಯಿಂದ ರೈತರಿಗೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಹಿರಿಯ ಕೃಷಿ ವಿಜ್ಞಾನಿ ಡಾ.ನರೇಶ್, ಬೇಸಾಯ ಶಾಸ್ತ್ರಜ್ಞ ಡಾ.ಕೇಶವಯ್ಯ, ಪಾಂಡವಪುರ ಉಪ ಕೃಷಿ ನಿರ್ದೇಶಕಿ ಮಮತಾ, ಮಂಡ್ಯ ಉಪ ಕೃಷಿ ನಿರ್ದೇಶಕಿ ಮಾಲತಿ ಹಾಗೂ ಎಲ್ಲ ತಾಲೂಕು ತಹಸೀಲ್ದಾರ್, ಸಹಾಯಕ ಕೃಷಿ ನಿರ್ದೇಶಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net