ಬೆಳೆ ವಿಮೆ, ಬರ ಪರಿಹಾರ ಧನ ವಿತರಿಸಿ

Crop Insurance, Drought Relief, Kolhara, Tehsildar, Farmers, Maize, Sorghum, Ullagaddi, Groundnut,
ಮಲಘಾಣ ಗ್ರಾಮದ ರೈತರು ತಹಸೀಲ್ದಾರ್ ಎಸ್‌ಎಸ್.ನಾಯಕಲಮಠ ಅವರಿಗೆ ಮನವಿ ಸಲ್ಲಿಸಿದರು. ಸುರೇಶ ಗರಸಂಗಿ, ಪಾಂಡು ದಳವಾಯಿ, ಗಂಗಾಧರ ಬಿರಾದಾರ, ಶ್ರೀಶೈಲ ಹಂಚಿನಾಳ ಇತರರಿದ್ದರು.
Published on

ಕೊಲ್ಹಾರ: ತಾಲೂಕಿನ ರೈತರ 2023-24ನೇ ಸಾಲಿನ ಬೆಳೆ ವಿಮೆ ಮತ್ತು ಬರ ಪರಿಹಾರ ಧನವನ್ನು ವಿತರಿಸುವಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ತಾಲೂಕಿನ ರೈತರು ತಹಸೀಲ್ದಾರ್ ಎಸ್.ಎಸ್.ನಾಯಕಲಮಠ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಅಧಿಕಾರಿಗಳು ಬೆಳೆ ಹಾಳಾದ ಜಮೀನನ್ನು ಬಿಟ್ಟು ಉತ್ತಮ ಬೆಳೆಯನ್ನು ತೊರಿಸಿ ಇನ್ಶೂರೆನ್ಸ್ ಕಂಪನಿ ಜೊತೆ ಶಾಮೀಲಾಗಿ ಬೇಕಾಬಿಟ್ಟಿ ಬೆಳೆ ವಿಮೆ ಮತ್ತು ಬರ ಪರಿಹಾರದ ರೈತರನ್ನು ಆಯ್ಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮುಂಗಾರಿನ ಮೆಕ್ಕೆ ಜೋಳ, ತೊಗರಿ ಹಾಗೂ ಹಿಂಗಾರಿನ ಉಳ್ಳಾಗಡ್ಡಿ, ಶೇಂಗಾ ಬೆಳೆ ಫಸಲು ಬಂದು ಕಟಾವು ಆಗುವ ಸಮಯದಲ್ಲಿ ಬರಗಾಲ ಆವರಿಸಿ ಸಂಪೂರ್ಣ ಬೆಳೆಗಳು ಹಾಳಾಗಿವೆ. ಇನ್ನೊಮ್ಮೆ ಪರಿಶೀಲಿಸಿ ಬರ ಪರಿಹಾರ ಧನ ಬಾರದ ರೈತರಿಗೆ ಹಣ ಬರುವಂತೆ ಮಾಡಬೇಕು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕೆಲವೊಂದು ಸೊಸೈಟಿಯಲ್ಲಿ ರೈತರ ಸಾಲ ಮನ್ನಾ ಆಗಿದೆ. ಕೆಲವು ರೈತರಿಗೆ ಸಾಲ ಮನ್ನಾದ ಹಣ ಜಮಾ ಆಗಿರುವುದಿಲ್ಲ. ಇದರ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ರೈತಪರ ಹೋರಾಟಗಾರ ಸುರೇಶ ಗರಸಂಗಿ ಮಾತನಾಡಿ, ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ರೈತರಿಗೆ ಹೆಚ್ಚುವರಿ ಕಬ್ಬಿನ ಬಿಲ್ ಟನ್‌ಗೆ 150 ರಂತೆ ಕೊಡಬೇಕೆಂದು ಎಲ್ಲ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಆದೇಶ ಮಾಡಲಾಗಿದೆ. ಇದುವರೆಗೂ ರೈತರ ಖಾತೆಗೆ ಕಾರ್ಖಾನೆ ಮಾಲೀಕರು ಹಣ ಜಮಾ ಮಾಡಿಲ್ಲ. ಕೂಡಲೇ ರೈತರ ಹೆಚ್ಚುವರಿ ಕಬ್ಬಿನ ಬಿಲ್ ಹಣ ಪಾವತಿ ಮಾಡದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಪಾಂಡು ದಳವಾಯಿ, ಗಂಗಾಧರ ಬಿರಾದಾರ, ಶ್ರೀಶೈಲ ಹಂಚಿನಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net