

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಗ್ರಾಮಾಂತರ ಜಿಲ್ಲೆ ರೈತಾಪಿ ವರ್ಗದ ಸ್ಥಿತಿ ‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ’್ಲ ಎಂಬ ಗಾದೆ ಮಾತಿನಂತಾಗಿದ್ದು, ಕೃಷಿ ಚಟುವಟಿಕೆಗಳಿಗೆ ಬರಸಿಡಿಲು ಬಡಿದಂತಾಗಿದೆ. ಈ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರು ಬೆಳೆ ವಿಮೆ ಆಸರೆಗೆ ಮೊರೆಹೋಗಿದ್ದು. ಇದೇ ಮೊದಲ ಬಾರಿಗೆ 23,477 (ಆ.19ರವರೆಗಿನ ಅಂಕಿ-ಅಂಶದಂತೆ) ರೈತರು ಬೆಳೆ ವಿಮೆಗೆ ನೋಂದಾಯಿಸಿದ್ದು ಜಿಲ್ಲೆಯಲ್ಲಿ ದಾಖಲೆಯಾಗಿದೆ.
ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಗ್ರಾಮಾಂತರ ಜಿಲ್ಲೆಯಲ್ಲಿ ಬರದ ಛಾಯೆ ಗಾಢವಾಗಿಯೇ ಕಾಡುತ್ತಿದೆ. ತೀವ್ರ ಮಳೆಯ ಕೊರತೆಯಿಂದಾಗಿ ಕೈಸುಟ್ಟುಕೊಂಡಿರುವ ರೈತಾಪಿ ವರ್ಗ ಬೆಳೆ ನಷ್ಟ ಪರಿಹಾರಕ್ಕೆ ಮೊರೆ ಹೋಗಿದ್ದು, ಪ್ರಸಕ್ತ ಸಾಲಿನಲ್ಲಿ ಬಹುತೇಕ ರೈತರು ಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆಗೆ ನೋಂದಾಯಿಸಿದ್ದಾರೆ.
ಶೇ.67 ಬಿತ್ತನೆ ಕಾರ್ಯ: ಯಾವುದೇ ನದಿ ಮೂಲವಿಲ್ಲದ ಬಯಲುಸೀಮೆ ಗ್ರಾಮಾಂತರ ಜಿಲ್ಲೆಯಲ್ಲಿ ರಾಗಿ ಪ್ರಧಾನ ಬೆಳೆಯಾಗಿದೆ, ನಂತರದಲ್ಲಿ ಜೋಳ ಮುಂಚೂಣಿಯಲ್ಲಿದ್ದು, ಪ್ರಸಕ್ತ ಸಾಲಿನಲ್ಲಿ 71,460 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಿರೀಕ್ಷಿಸಲಾಗಿತ್ತು. ಜುಲೈ ಅಂತ್ಯದಲ್ಲಿ ಸುರಿದ ಸಾಧಾರಣ ಮಳೆಯನ್ನೇ ನೆಚ್ಚಿಕೊಂಡು ಜಿಲ್ಲೆಯ ಹಲವೆಡೆ ರಾಗಿ ಹಾಗೂ ಜೋಳ ಬಿತ್ತನೆ ಕಾರ್ಯ ಆರಂಭಿಸಿದ್ದರು. ಆದರೆ ಇದುವರೆಗೆ 48,069 ಹೆಕ್ಟೇರ್‌ನಲ್ಲಷ್ಟೇ ಬಿತ್ತನೆ ಕಾರ್ಯ ನಡೆದಿದೆ. ಕಳೆದ ಸಾಲಿನಲ್ಲಿ ಶೇ.98 ಬಿತ್ತನೆ ಕಾರ್ಯವಾಗಿತ್ತು. ಆದರೆ ಈ ಬಾರಿ ಶೇ.67 ಬಿತ್ತನೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೃಷಿ ಇಲಾಖೆಯಿಂದ ಭಾರಿ ಪ್ರಚಾರ: ಜಿಲ್ಲೆಯಲ್ಲಿ ಪ್ರಧಾನ ಬೆಳೆಯಾಗಿರುವ ರಾಗಿ ಹಾಗೂ ಜೋಳದ ಬೆಳೆಗೆ ಪ್ರಧಾನಮಂತ್ರಿ ಸಲ್ ಬಿಮಾ ಯೋಜನೆಯಡಿ ವಿಮೆ ಮಾಡಿಸುವಂತೆ ಕೃಷಿ ಇಲಾಖೆ ಸಾಕಷ್ಟು ಪ್ರಚಾರ ನಡೆಸಿತ್ತು. ಮಳೆ ಕೊರತೆ ಹಿನ್ನೆಲೆಯಲ್ಲಿ ಎರಡು ಬಾರಿ ನೋಂದಣಿ ದಿನಾಂಕವನ್ನು ವಿಸ್ತರಣೆ ಮಾಡಲಾಗಿತ್ತು. ರೈತರ ಮೊಬೈಲ್‌ಗಳಿಗೆ ಸಾಮೂಹಿಕ ಕರೆ ಮಾಡುವ ಮೂಲಕ ಬೆಳೆ ವಿಮೆ ಬಗ್ಗೆ ಹೆಚ್ಚೆಚ್ಚು ಪ್ರಚಾರ ನಡೆಸಿತ್ತು. ಆದರೂ ಹೆಚ್ಚಿನ ರೈತರು ಈ ಬಗ್ಗೆ ಆಸಕ್ತಿ ತೋರಿಸಿರಲಿಲ್ಲ. ಆದರೆ ಆಗಸ್ಟ್ ಮೊದಲ ವಾರ ಕಳೆದರೂ ಮಳೆರಾಯ ಮುನಿಸು ತೊರೆಯದ ಹಿನ್ನೆಲೆಯಲ್ಲಿ ಜಮೀನುಗಳಲ್ಲಿ ಪೈರುಗಳು ಒಣಗಲಾರಂಭಿಸಿದವು. ಇದರಿಂದ ಎಚ್ಚೆತ್ತ ರೈತರು ಬೆಳೆ ವಿಮೆಗೆ ಮುಗಿಬಿದ್ದರು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ನೋಂದಣಿಗೆ 1 ಹೆಕ್ಟೇರ್‌ಗೆ 860 ರೂಪಾಯಿಯನ್ನು ರೈತರು ಪಾವತಿಸಬೇಕು. ಶೇ.100 ಬೆಳೆ ನಷ್ಟವಾದರೆ 1 ಹೆಕ್ಟೇರ್‌ಗೆ 42 ಸಾವಿರ ರೂಪಾಯಿ ಪರಿಹಾರ ದೊರೆಯಲಿದೆ. ಇದರ ಜತೆಗೆ ಮಳೆ ಹೆಚ್ಚಾಗಿ ಕೊಯ್ಲಿನ ಸಮಯದಲ್ಲಿ ಅಥವಾ ಇನ್ಯಾವುದೇ ಪ್ರಾಕೃತಿಕ ವಿಕೋಪದಡಿ ಬೆಳೆ ನಷ್ಟವಾದರೆ ಶೇಕಡವಾರು ನಷ್ಟ ಪರಿಹಾರ ಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಳೆಯ ತೀವ್ರ ಕೊರತೆ: ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳ ಪೈಕಿ ದೇವನಹಳ್ಳಿಯಲ್ಲಿ ಶೇ.88 ತೀವ್ರ ಮಳೆ ಕೊರತೆಯಾಗಿದೆ. ನಂತರದಲ್ಲಿ ಹೊಸಕೋಟೆ ಶೇ.78, ದೊಡ್ಡಬಳ್ಳಾಪುರ ಶೇ.77 ಹಾಗೂ ನೆಲಮಂಗಲದಲ್ಲಿ ಶೇ.69 ಮಳೆ ಕೊರತೆಯಾಗಿದ್ದು, ಕೃಷಿ ಚಟುವಟಿಕೆಗಳ ಮೇಲೆ ಬರಸಿಡಿಲು ಬಡಿದಂತಾಗಿದೆ.
ಬೆಳೆ ವಿಮೆ ನೋಂದಣಿ:
ದೇವನಹಳ್ಳಿಯಲ್ಲಿ 4,081, ದೊಡ್ಡಬಳ್ಳಾಪುರದಲ್ಲಿ 14,291, ನೆಲಮಂಗಲ 2,075 ಹಾಗೂ ಹೊಸಕೋಟೆಯಲ್ಲಿ 3,032 ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದಾರೆ.
ಸಲ್ ಬಿಮಾ ಯೋಜನೆಯಡಿ ವಿಮೆಗೆ ಮಾಡಿಸಿಕೊಳ್ಳುವಂತೆ ಕೃಷಿ ಇಲಾಖೆಯಿಂದ ಜಿಲ್ಲೆಯಲ್ಲಿ ಸಾಕಷ್ಟು ಪ್ರಚಾರ ಮಾಡಲಾಗಿತ್ತು. ಈಗಾಗಲೇ 23 ಸಾವಿರದಷ್ಟು ಅರ್ಜಿ ಅಪ್‌ಲೋಡ್ ಆಗಿವೆ. ಮತ್ತಷ್ಟು ಅರ್ಜಿಗಳ ಅಪ್‌ಲೋಡ್ ಆಗಬೇಕಿದೆ. ಇವುಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಪರಿಹಾರ ವಿತರಣೆ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರ ಪರಿಹಾರ ವಿತರಣೆಗೆ ಕ್ರಮಕೈಗೊಳ್ಳಲಾಗುವುದು.
ವಿನುತಾ
ಉಪನಿರ್ದೇಶಕಿ ಕೃಷಿ ಇಲಾಖೆ ಬೆಂ.ಗ್ರಾಮಾಂತರ